ಶನಿವಾರ, ಅಕ್ಟೋಬರ್ 31, 2020
24 °C
ಮಳೆಗಾಲ, ನಿರ್ವಹಣೆಯ ಕೊರತೆಯಿಂದ ಇನ್ನಿಲ್ಲದಂತೆ ಸೊರಗಿದ ಜಿಲ್ಲೆಯ ರಸ್ತೆಗಳು

ಕಾರವಾರ: ದಾರಿ ಯಾವುದಯ್ಯಾ ಸುಗಮ ಸಂಚಾರಕ್ಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಈ ವರ್ಷವೂ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಇದರ ಪರಿಣಾಮ ಜಿಲ್ಲೆಯ ರಾಜ್ಯ ಹೆದ್ದಾರಿಗಳು, ಜಿಲ್ಲಾ ಪ್ರಮುಖ ರಸ್ತೆಗಳು, ಗ್ರಾಮೀಣ ರಸ್ತೆಗಳು ಹೊಂಡ ಬಿದ್ದಿವೆ. ಹಲವು ಕಡೆಗಳಲ್ಲಿ ಪ್ರಯಾಣಿಕರು ವಾಹನದಲ್ಲಿ ಕೂರಲು ಹಿಂದೇಟು ಹಾಕುವಂಥ ಸ್ಥಿತಿಯಿದೆ.

ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 63, ಕುಮಟಾ– ಶಿರಸಿ ನಡುವಿನ ರಾಜ್ಯ ಹೆದ್ದಾರಿ, ಹಲವು ಮುಖ್ಯರಸ್ತೆಗಳು ಪ್ರಯಾಣಕ್ಕೆ ದುಸ್ತರವಾಗಿವೆ. 

‘ಗರ್ಭಿಣಿಯರು, ತುರ್ತು ಚಿಕಿತ್ಸೆ ಬೇಕಿರುವ ರೋಗಿಗಳು, ಹಿರಿಯರು ವಾಹನದಲ್ಲಿ ಸಂಚರಿಸಲು ಕಷ್ಟಪಡಬೇಕಿದೆ. ಜಿಲ್ಲೆಯ ಮೂಲೆಯಿಂದ ಬರುವವರು ಕಾರವಾರದ ಜಿಲ್ಲಾ ಆಸ್ಪತ್ರೆ ಅಥವಾ ತಮ್ಮ ತಾಲ್ಲೂಕು ಕೇಂದ್ರದಲ್ಲಿರುವ ಆಸ್ಪತ್ರೆಗಳಿಗೆ ಬರಲು ತೊಂದರೆಯಾಗುತ್ತಿದೆ. ವಾಹನಗಳ ನಿರ್ವಹಣೆಯೂ ಬಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಕಾರು ಚಾಲಕ ಅಮ್ಮಿನಳ್ಳಿಯ ಅನಂತರಾಮ.

ಖರ್ವಾ– ಮಾವಿಕುರ್ವ ರಸ್ತೆ ದುರವಸ್ಥೆ

ಹೊನ್ನಾವರ ತಾಲ್ಲೂಕಿನ ಹತ್ತಾರು ಹಳ್ಳಿಗಳಿಗೆ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಸಂಪರ್ಕ ಕಲ್ಪಿಸುವ ಖರ್ವಾ– ಕೊಳಗದ್ದೆ–ಮಾವಿನಕುರ್ವ ರಸ್ತೆ ಗುಂಡಿ ಬಿದ್ದು ಹೀನಾಯ ಸ್ಥಿತಿಗೆ ತಲುಪಿ ಕೆಲವು ವರ್ಷಗಳೇ ಕಳೆದವು.

ಹೆದ್ದಾರಿಯಿಂದ ಮಾವಿನ ಕುರ್ವದವರೆಗಿನ 10 ಕಿ.ಮೀ. ರಸ್ತೆಯಲ್ಲಿ ದೊಡ್ಡ ಗುಂಡಿಗಳಾಗಿವೆ. ಹೊಸಾಡ, ವಲ್ಕಿ, ಕೂಡ್ಲ, ಪಡುಕುಳಿ, ನಾಥಗೇರಿ, ಕೊಳಗದ್ದೆ ಗ್ರಾಮಗಳ ಜನ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

‘ಹೊಂಡಮಯ ರಸ್ತೆಯಿಂದಾಗಿ ನಿತ್ಯ ಇಲ್ಲಿ ಸಂಚರಿಸುವ ಎಲ್ಲರೂ ಯಾತನೆ ಅನುಭವಿಸುತ್ತಿದ್ದಾರೆ. ಅಪಘಾತಗಳು ಸಾಮಾನ್ಯ ಸಂಗತಿಗಳಾಗಿವೆ’ ಎಂದು ಮಾವಿನಕುರ್ವದ ರಾಮ ಭಟ್ ಸಂಕಷ್ಟ ವಿವರಿಸುತ್ತಾರೆ. ‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ’ಯಡಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಾಗೂ ಪ್ರಕೃತಿ ವಿಕೋಪ ನಿಧಿಯನ್ನು ಬಳಸಿ ರಸ್ತೆಯ ತುರ್ತು ರಿಪೇರಿ ಕೈಗೊಳ್ಳಲು ಅವಕಾಶವಿದೆ ಎನ್ನುತ್ತಾರೆ ಎಂಜಿನಿಯರ್ ಎಂ.ಎಸ್.ನಾಯ್ಕ.

‘ಎಂಜಿನಿಯರ್‌ ಇರುವುದೇ ಇಲ್ಲ’

ಕುಮಟಾದಲ್ಲಿ ಮಾರ್ಚ್ ತಿಂಗಳಲ್ಲಿ ₹ 4 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣಗೊಂಡಿದ್ದ ಹೆದ್ದಾರಿ ಒಂದೇ ಮಳೆಗಾಲಕ್ಕೆ ಹಾಳಾಗಿದೆ. ಬಸ್ ನಿಲ್ದಾಣ ಬಳಿ 100 ಮೀಟರ್‌ಗಳಷ್ಟು ದೂರ ಅಲ್ಲಲ್ಲಿ ಕಿತ್ತು ಹೋಗಿದೆ.

‘ಬಸ್ ನಿಲ್ದಾಣ ಬಳಿ ಸುತ್ತಲಿನ ನೀರು ಹೆದ್ದಾರಿ ಮೇಲೆಯೇ ಹರಿಯುತ್ತದೆ. ಇದರಿಂದ ರಸ್ತೆ ಬೇಗ ಹಾಳಾಗುತ್ತಿದೆ. ಮಳೆ ಬೀಳುವಾಗ ಕೆಸರು ನೀರಿನ ಹಾಗೂ ಬಿಸಿಲು ಬಿದ್ದಾಗ ಧೂಳಿನಿಂದ ಜನ ಕಿರಿಕಿರಿ ಅನುಭವಿಸುವಂತಾಗಿದೆ’ ಎಂದು ಸ್ಥಳೀಯ ಅಂಗಡಿಕಾರ ಸುರೇಶ ಪಟಗಾರ ತಿಳಿಸುತ್ತಾರೆ.

ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ, ‘ಎರಡು ಮೂರು ಬಾರಿ ನಾನೇ ನಿಂತು ಹೆದ್ದಾರಿ ದುರಸ್ತಿ ಮಾಡಿಸಿದ್ದೇನೆ. ಮರು ಡಾಂಬರೀಕರಣ ನಡೆಸುವಾಗ ಹೆದ್ದಾರಿ ಪ್ರಾಧಿಕಾರದ ಒಬ್ಬರೂ ಎಂಜಿನಿಯರ್ ಸ್ಥಳದಲ್ಲಿ ಇರಲಿಲ್ಲ. ಅವರು ಸೂಚಿಸಿದ್ದರೆ ಆ ಭಾಗದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಬಹುದಿತ್ತು’ ಎಂದರು.

ಗುಂಡಿಗಳದ್ದೇ ಕಾರುಬಾರು

ಭಟ್ಕಳದ ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮುಖ್ಯರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರಾಗಿದೆ. ಜಾಲಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿ ಐದು ವರ್ಷಗಳಾದವು. ಗ್ರಾಮ ಪಂಚಾಯ್ತಿ ಇದ್ದಾಗ ಒಂದು ಬಾರಿ ಮರು
ಡಾಂಬರೀಕರಣ ಮಾಡಿದ್ದು ಬಿಟ್ಟರೆ, ಮತ್ತೆ ಡಾಂಬರೀಕರಣ ಆಗಿಲ್ಲ.

ಜಾಲಿ ಮುಖ್ಯ ರಸ್ತೆಯ ಆಜಾದ್‍ನಗರದಿಂದ ಶೇಡಕುಳಿ ಹೊಂಡದವರೆಗೆ ಮೂರು ವರ್ಷದ ಹಿಂದೆ ಮರು ಡಾಂಬರೀಕರಣ ಮಾಡಲಾಗಿದೆ. ಅಲ್ಲಿಂದ ಮುಂದೆ ಆಗಿಲ್ಲ. ಈಗ ಜಾಲಿಯ ಮುಖ್ಯರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣಕ್ಕೆ ₹ 1 ಕೋಟಿ ಮಂಜೂರಾಗಿ ಒಂದು ವರ್ಷದ ಹಿಂದೆಯೇ ಟೆಂಡರ್ ಆಗಿತ್ತು. ಅದರ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ರಸ್ತೆಯದ್ದಕ್ಕೂ ಗುಂಡಿ

ಸಿದ್ದಾಪುರದಿಂದ ಸಾಗರ, ಕುಮಟಾ, ಶಿರಸಿ, ಸೊರಬ, ಜೋಗಕ್ಕೆ ಪ್ರಮುಖ ರಸ್ತೆಗಳಿವೆ. ಸಿದ್ದಾಪುರ– ಸಾಗರ ರಸ್ತೆ ಹೆಚ್ಚು ಹಾಳಾಗಿದೆ. ಸಿದ್ದಾಪುರ– ಕುಮಟಾ ರಸ್ತೆಯ ಅಲ್ಲಲ್ಲಿ ಗುಂಡಿಗಳಿವೆ.

‘ತಾಲ್ಲೂಕಿನ ಬಹುತೇಕ ಪ್ರಮುಖ ರಸ್ತೆಗಳಲ್ಲಿ ರಸ್ತೆಗಳ ಮೇಲೆ ನೀರು ಹರಿಯುತ್ತದೆ. ಚರಂಡಿಯನ್ನು ಸ್ವಚ್ಛಗೊಳಿಸಿ, ಮಳೆ ನೀರು ಹರಿಯಲು ವ್ಯವಸ್ಥೆ ಮಾಡಬೇಕಿತ್ತು. ಈ ನಿಟ್ಟಿನಲ್ಲಿ ಶಾಸಕರು ಅಧಿಕಾರಿಗಳಿಗೆ ಸೂಚಿಸಬೇಕಾಗಿತ್ತು’ ಎಂದು ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ವಸಂತ ನಾಯ್ಕ ಹೇಳುತ್ತಾರೆ.

‘ಖಾನಾಪುರ–ತಾಳಗುಪ್ಪ (ಶಿರಸಿ– ಸಿದ್ದಾಪುರ– ಸಾಗರ) ಸೇರಿದಂತೆ ನಾಲ್ಕು ರಾಜ್ಯ ಹೆದ್ದಾರಿಗಳ ನಿರ್ವಹಣೆಗೆ ಟೆಂಡರ್‌ ಆಗಿದೆ. ಉಳಿದ ಎರಡು ಹೆದ್ದಾರಿಗಳ ನಿರ್ವಹಣೆಗೂ ಟೆಂಡರ್‌ ಆಗಲಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸಿವೆ.
15 ಕಿ.ಮೀ.ಗೆ ಒಂದು ಗಂಟೆ!

ಮುಂಡಗೋಡ ತಾಲ್ಲೂಕಿನ ಗಡಿಭಾಗದ ವಡಗಟ್ಟಾದಿಂದ ಮುಂಡಗೋಡ ಕಡೆಗಿನ ರಾಜ್ಯ ಹೆದ್ದಾರಿ ದೊಡ್ಡ ಗುಂಡಿಗಳಿಂದ ತುಂಬಿದೆ. 15 ಕಿಲೋಮೀಟರ್ ಅಂತರವನ್ನು ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಕಾಲ ಹಿಡಿಯುತ್ತದೆ ಎಂದು ಪ್ರಯಾಣಿಕರು, ಚಾಲಕರು ದೂರುತ್ತಿದ್ದಾರೆ.

‘ಕಾರು, ಆಟೊ ಸೇರಿದಂತೆ ಸಣ್ಣ ವಾಹನಗಳು ಈ ರಸ್ತೆಯಲ್ಲಿ ಚಲಿಸುವುದು ಹರಸಾಹಸವಾಗಿದೆ. ಗುಂಡಿಗಳನ್ನು ಮುಚ್ಚಬೇಕೆನ್ನುವ ಇಚ್ಛಾಶಕ್ತಿ ಸಂಬಂಧಿಸಿದ ಅಧಿಕಾರಿಗಳಲ್ಲಿ ಇಲ್ಲದಿರುವುದು ನಿಜಕ್ಕೂ ದುರಂತ’ ಎನ್ನುತ್ತಾರೆ ಕಾರಿನ ಚಾಲಕ ಟಿ.ಪ್ರಕಾಶ.

‘ಆರು ತಿಂಗಳಿಂದ ಪಟ್ಟಣದ ಮಹಾಲೆ ಮಿಲ್ ಹತ್ತಿರ 100 ಮೀಟರ್ ಒಳಗಿನ ರಸ್ತೆ (ರಾಜ್ಯ ಹೆದ್ದಾರಿ) ಇನ್ನೂ ದುರಸ್ತಿ ಆಗುತ್ತಿದೆ. ಇಲ್ಲಿ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ದುರಸ್ತಿಗೆ ಒತ್ತಾಯಿಸಿ ಈಚೆಗೆ ಪ್ರತಿಭಟನೆ ಸಹ ನಡೆದಿದೆ. ಆದರೂ ದುರಸ್ತಿ ಆಗಿಲ್ಲ’ ಎಂದು ವಕೀಲ ಗುಡ್ಡಪ್ಪ ಕಾತೂರ ದೂರುತ್ತಾರೆ.

ರಸ್ತೆಯಲ್ಲ... ಕೆಸರು ಗದ್ದೆ!

ಜೊಯಿಡಾ ತಾಲ್ಲೂಕಿನ ಡಿಗ್ಗಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆಯು ಮರೆತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ತಾಲ್ಲೂಕಿನ ಕಿರವತ್ತಿಯಿಂದ ಡಿಗ್ಗಿ ಭಾಗದ ಸುಮಾರು 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉಳವಿ– ಗೋವಾ ಗಡಿ ರಾಜ್ಯ ಹೆದ್ದಾರಿ (146) ಕಿರವತ್ತಿಯಿಂದ ಗೋವಾ ಗಡಿಯವರೆಗೆ ಒಟ್ಟು 40 ಕಿಲೋಮೀಟರ್ ಉದ್ದವಿದೆ. ಖಾನಗಾಂವ ಕ್ರಾಸ್‌ನಿಂದ ಗೋವಾ ಗಡಿಯವರೆಗೆ ಸುಮಾರು 24 ಕಿಲೋಮೀಟರ್ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. 

ಪ್ರತಿ ದಿನ ಈ ಹೆದ್ದಾರಿಯ ಮೂಲಕ ಹತ್ತಾರು ಖಾಸಗಿ ವಾಹನಗಳು, 100ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜೊಯಿಡಾಕ್ಕೆ ಬರುತ್ತವೆ. ಅದರಲ್ಲಿರುವ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಕೂರಬೇಕಾದ ಸ್ಥಿತಿಯಿದೆ.

 

* ಜಿಲ್ಲೆಯ ರಸ್ತೆಗಳ ದುರಸ್ತಿಗೆ ಕೈಗೊಳ್ಳಲಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಮಳೆ ಕಡಿಮೆಯಾದ ಕೂಡಲೇ ಗುತ್ತಿಗೆದಾರರು ಕಾಮಗಾರಿ ಆರಂಭಿಸಲಿದ್ದಾರೆ.

– ಸತೀಶ ಜಹಗೀರದಾರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್.

******

ಮಾಹಿತಿ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ರವೀಂದ್ರ ಭಟ್ ಬಳಗುಳಿ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ರಾಘವೇಂದ್ರ ಭಟ್, ಜ್ಞಾನೇಶ್ವರ ದೇಸಾಯಿ, ಶಾಂತೇಶ ಬೆನಕನಕೊಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು