ಶನಿವಾರ, ಸೆಪ್ಟೆಂಬರ್ 25, 2021
22 °C
ಸಣ್ಣ ನೀರಾವರಿ ಇಲಾಖೆಯ ಯೋಜನೆಗೆ ವಿಶ್ವಬ್ಯಾಂಕ್ ನೆರವು: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

‘ಕಗ್ಗ’ದ ರಕ್ಷಣೆಗೆ ಬೃಹತ್ ಒಡ್ಡು ನಿರ್ಮಾಣ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಪರೂಪದ ಕಗ್ಗ ಭತ್ತ ಬೆಳೆಯ ಸಂರಕ್ಷಣೆ ಸಲುವಾಗಿ ಅಘನಾಶಿನಿ ನದಿಯ ಹಿನ್ನೀರಿಗೆ ಒಡ್ಡು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿದೆ. ಮಾಣಿಕಟ್ಟಾ ಗ್ರಾಮದಿಂದ ಆರಂಭವಾಗುವ ಕಾಮಗಾರಿಯು, ಬರೋಬ್ಬರಿ 7.8 ಕಿ.ಮೀ ಉದ್ದ ಇರಲಿದೆ. ಇದರಿಂದ ಸುಮಾರು 600 ಹೆಕ್ಟೇರ್ ಜಮೀನಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ.

‘ಈ ಯೋಜನೆಗೆ ವಿಶ್ವಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆಯಲಾಗಿದ್ದು, ₹ 34.14 ಕೋಟಿ ವೆಚ್ಚವಾಗಲಿದೆ. ಕಾಮಗಾರಿಗೆ ಮೂರು ತಿಂಗಳ ಒಳಗೆ ಜಾಗತಿಕ ಟೆಂಡರ್ ಕರೆಯಲಾಗುತ್ತದೆ. ಈಗಾಗಲೇ ವಿಶ್ವಬ್ಯಾಂಕ್‌ನ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಚಂಡಮಾರುತ ಅಪಾಯ ನಿರ್ವಹಣಾ ಯೋಜನೆಯ (ಎನ್‌ಸಿಆರ್‌ಎಂಪಿ) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಉದ್ದೇಶಿತ ಕಾಮಗಾರಿಯ ವಿನ್ಯಾಸಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮನೋಹರ ಪಿ ಕಳಸ್ ತಿಳಿಸಿದರು.

ವಿಶ್ವಬ್ಯಾಂಕ್‌ನ ದೆಹಲಿ ಕಚೇರಿಯಲ್ಲಿ ಪರಿಸರ ಅಧಿಕಾರಿಯಾಗಿರುವ ವೆಂಕರಟರಾವ್, ಎನ್‌ಸಿಆರ್‌ಎಂಪಿಯ ಬೆಂಗಳೂರು ಘಟಕದ ಪ್ರಮುಖ ಅಧಿಕಾರಿ ಹರ್ಷ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕೆ.ಎಲ್.ಕಟ್ಟೀಮನಿ ಹಾಗೂ ವಿವಿಧ ಅಧಿಕಾರಿಗಳ ತಂಡ ಈಗಾಗಲೇ ಭೇಟಿ ನೀಡಿದೆ. ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಆ ಭಾಗದ ರೈತರ ಜತೆಗೂ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮಾಣಿಕಟ್ಟಾದದಿಂದ ಸಾಗುವ ಕಾಮಗಾರಿಯು ಹೊರೆಉಳಿ, ಕಲ್ಕಟ್ಟ, ತುಂಬ್ರಿಕಟ್ಟ ಹಾಗೂ ಕಾಗಾಲ್ ಗ್ರಾಮದ ಕೆಲವು ಭಾಗಗಳಲ್ಲಿ ಕೂಡ ನಡೆಯಲಿದೆ. ಈ ಯೋಜನೆಯಿಂದ ಕಗ್ಗ ಭತ್ತ ಬೆಳೆಯುವ ರೈತರಿಗೆ, ಮೀನುಗಾರರಿಗೆ ಅನುಕೂಲವಾಗಲಿದೆ. ಏಡಿ, ಸೀಗಡಿ ಕೃಷಿಗೂ ಸಹಕಾರಿಯಾಗಲಿದೆ. ಸಮುದ್ರದ ಉಪ್ಪು ನೀರು ಮತ್ತು ನದಿಯ ಸಿಹಿ ನೀರನ್ನು ನಿಯಮಿತ ಪ್ರಮಾಣದಲ್ಲಿ ಗದ್ದೆಗೆ ಹರಿಸಲು ಅನುಕೂಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡು ಬಾಗಿಲಿನ ಏಳು ಕಿಂಡಿ: ಅಘನಾಶಿನಿ ನದಿಗೆ ಸಮಾನಾಂತರವಾಗಿ 7.8 ಕಿ.ಮೀ ಉದ್ದಕ್ಕೆ ಒಡ್ಡು ನಿರ್ಮಿಸಲಾಗುತ್ತದೆ. ಅದಕ್ಕೆ ತಲಾ ಎರಡು ಬಾಗಿಲುಗಳು ಇರುವ ಏಳು ಕಿಂಡಿಗಳನ್ನು ಇಡಲಾಗುತ್ತದೆ. ಅವುಗಳ ಬಾಗಲಿಗೆ ಕೊಂಡಿಗಳನ್ನು ಮಾಡಿ ಉಪ್ಪು ನೀರು ಮತ್ತು ಸಿಹಿ ನೀರಿನ ಹರಿವನ್ನು ನಿಯಂತ್ರಿಸಲಾಗುತ್ತದೆ. ಒಡ್ಡು ಸುಮಾರು 3.8 ಮೀಟರ್ ಅಗಲ ಹಾಗೂ ನಾಲ್ಕು ಮೀಟರ್ ಅಗಲ ಇರಲಿದೆ. ಅದರಲ್ಲಿ 1.8 ಕಿ.ಮೀ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ ಎಂದು ಮನೋಹರ ಪಿ ಕಳಸ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು