ಶನಿವಾರ, ಏಪ್ರಿಲ್ 1, 2023
23 °C
ಮಾಣಿಕಟ್ಟಾ ಗಜನಿಯಲ್ಲಿ ಸಹಕಾರ ಪದ್ಧತಿಯಡಿ ನಡೆದ ಬಿತ್ತನೆ ಕಾರ್ಯ

ಕುಮಟಾ: ಒಂದೇ ದಿನ 30 ಎಕರೆ ‘ಕಗ್ಗ’ ಭತ್ತ ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ತಾಲ್ಲೂಕಿನ ‘ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘ’ದಿಂದ ಮಂಗಳವಾರ ಸುಮಾರು 30 ಎಕರೆ ಗಜನಿ ಪ್ರದೇಶದಲ್ಲಿ ಸಹಕಾರ ಪದ್ಧತಿಯಡಿ 10 ಕ್ವಿಂಟಲ್ ಕಗ್ಗ ಭತ್ತದ ಸಾಮೂಹಿಕ ಬಿತ್ತನೆ ಕಾರ್ಯ ನಡೆಯಿತು.

ಸುಮಾರು 200 ರೈತರು ಸೇರಿ ಬಿತ್ತನೆ ಕಾರ್ಯವನ್ನು ಒಂದೇ ದಿನ ಮುಗಿಸಿದ್ದು ವಿಶೇಷ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಬಿತ್ತನೆ ಮಧ್ಯಾಹ್ನದ ವರೆಗೂ ಸಾಗಿತು.

ಈ ಕುರಿತು ಮಾಹಿತಿ ನೀಡಿದ ರೈತ ಮುಖಂಡ ಜಗನ್ನಾಥ ನಾಯ್ಕ, ‘ಸಹಕಾರ ತತ್ವ ಅನುಸರಿಸಿ ರೈತರು ಸೇರಿ, ಎಲ್ಲರ ಜಮೀನಿನಲ್ಲಿ ಒಂದೇ ದಿನ ಸಾಮೂಹಿಕ ಬಿತ್ತನೆ ಹಾಗೂ ಬೆಳೆ ಕಟಾವು ಮಾಡುವ ಕೃಷಿ ಪದ್ಧತಿ ದೇಶದ ಯಾವ ಭಾಗದಲ್ಲೂ ಇಲ್ಲ. ಕಗ್ಗ ಭತ್ತ ಕೃಷಿ ಅತ್ಯಂತ ಕ್ಲಿಷ್ಟಕರ. ಹೀಗಾಗಿ ಅದನ್ನು ಬಿಡದೆ ಅನುಸರಿಸಲು ಇದು ಹಿಂದೆ ರೈತರೇ ಮಾಡಿಕೊಂಡ ಪದ್ಧತಿಯಾಗಿದೆ’ ಎಂದರು.

‘ಪ್ರತೀ ವರ್ಷ ಕಗ್ಗ ಭತ್ತ ಬಿತ್ತಿದಾಗಲೂ ನೆರೆ ನುಗ್ಗಿ ಬೆಳೆ ಕೊಳೆತು ಹೋಗುತ್ತಿತ್ತು. ಇದನ್ನು ಗಮನಿಸಿ ಎಂ.ಎಸ್.ಸ್ವಾಮಿನಾಥನ್ ಫೌಂಡೇಷನ್ ಹಾಗೂ ಧಾರವಾಡ ಕೃಷಿ ವಿವಿ ನೀಡಿದ ವರದಿ ಆಧರಿಸಿ ವಿಶ್ವ ಬ್ಯಾಂಕ್ ನೆರವಿನ ₹32 ಕೋಟಿ ಮೊತ್ತದಲ್ಲಿ ಈ ವರ್ಷ 7.8 ಕಿ.ಮೀ. ಉದ್ದ ಕಾಲ್ರ್ಯಾಂಡ್ ಮರು ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಇದರಿಂದ ಮುಂದೆ ಕಗ್ಗ ಕೃಷಿಗೆ ಅನುಕೂಲವಾಗಲಿದೆ’ ಎಂದು ವಿವರಿಸಿದರು.

ಧಾರವಾಡ ಕೃಷಿ ವಿವಿ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಸಿ.ವಾಲಿ, ‘ಕಗ್ಗ ಭತ್ತ ತಳಿಯ ಇಳುವರಿ ಹೆಚ್ಚಿಸಲು ಧಾರವಾಡ ಕೃಷಿ ವಿವಿ ಹೊಸ ತಳಿ ಸಂಶೋಧನೆಗೆ ಒತ್ತು ನೀಡಿದೆ. ರೈತರು ಕಗ್ಗ ಭತ್ತ ಕೃಷಿಯನ್ನು ಮುಂದುವರಿಸುವ ಮೂಲಕ ಅಮೂಲ್ಯ ಕೃಷಿ ಪರಂಪರೆ ಉಳಿಸುವ ಕಾರ್ಯ ಮಾಡಬೇಕಿದೆ’ ಎಂದರು.

ಕೃಷಿ ವಿಜ್ಞಾನಿ ಡಾ.ಎನ್.ಜಿ.ಹನುಮರಟ್ಟಿ, ಕುಮಟಾ ಕೃಷಿ ಸಂಶೋಧನಾ ನಿರ್ದೆಶಕ ಡಾ.ಜಿ.ವಿ.ನಾಯ್ಕ, ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಶಾಹಾಪುರಮಠ, ತಾಂತ್ರಿಕ ಅಧಿಕಾರಿ ಚಂದ್ರಕಲಾ ಬರ್ಗಿ, ಎಂ.ಎಸ್.ಸ್ವಾಮಿನಾಥನ್ ಫೌಂಡೇಷನ್‌ನ ತಾಂತ್ರಿಕ ಸಲಹೆಗಾರರಾದ ಮಂಜುಳಾ ಧಾರವಾಡಕರ್, ಮಣಿಕಂಠ ಗುನಗಾ, ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘದ ಶ್ರೀಧರ ಪೈ, ನಾರಾಯಣ ಪಟಗಾರ, ಮಂಜುನಾಥ ಪಟಗಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು