ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಮನೆ ಮನೆಗಳಲ್ಲಿ ಗಣೇಶ ಚೌತಿ ತಯಾರಿ

ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ: ಸರಳ ಆಚರಣೆಗೆ ಸಿದ್ಧತೆ
Last Updated 21 ಆಗಸ್ಟ್ 2020, 11:45 IST
ಅಕ್ಷರ ಗಾತ್ರ

ಕಾರವಾರ: ಒಂದೊಡೆ ಕೊರೊನಾದ ಭಯ. ಮತ್ತೊಂದೆಡೆ ವಿಘ್ನ ನಿವಾರಕ ಗಣೇಶನ ಹಬ್ಬದ ಸಡಗರ. ಈ ಬಾರಿ ಪ್ರತಿ ವರ್ಷದಂತೆ ಅದ್ಧೂರಿಯಾಗಿ ಆಚರಣೆಗೆ ಅವಕಾಶವಿಲ್ಲ. ಹಾಗಾಗಿ ಸರ್ಕಾರದ ನಿಬಂಧನೆಗಳ ಇತಿಮಿತಿಯಲ್ಲೇ ಚೌತಿ ಹಬ್ಬವು ನಡೆಯಲಿದೆ.

ಮನೆಗಳಲ್ಲೇ ಹಬ್ಬವನ್ನು ಸರಳವಾಗಿ ಆಚರಿಸಲು ಹೆಚ್ಚು ಮಂದಿ ಉತ್ಸುಕರಾಗಿದ್ದಾರೆ. ಹಾಗಾಗಿ ಅಗತ್ಯ ಸಾಮಗ್ರಿ ಖರೀದಿಗೆ ಮಾರುಕಟ್ಟೆಯಲ್ಲಿ ಶುಕ್ರವಾರ ಜನಜಂಗುಳಿ ಕಂಡುಬಂತು. ಹೂ, ಹಣ್ಣು, ಫಲಾವಳಿಗಳ ಖರೀದಿಗೆ ಆರಾಧಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು.

ಈ ಬಾರಿ ಎರಡೇ ದಿನಗಳಿಗೆ ಸೀಮಿತಗೊಳಿಸುವುದೂ ಸೇರಿದಂತೆ ಕೆಲವು ನಿಬಂಧನೆಗಳನ್ನು ವಿಧಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ವಿಗ್ರಹದ ಎತ್ತರಕ್ಕೆ ಮಿತಿ, ಮೆರವಣಿಗೆಗೆ ನಿರ್ಬಂಧ, ಜನರನ್ನು ನಿಯಂತ್ರಿಸುವ ಸವಾಲು ಮುಂತಾದ ಕಾರಣಗಳಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪ್ರತಿವರ್ಷದಂತೆ ಉತ್ಸಾಹ ತೋರಿಸಿಲ್ಲ. ನಗರದಲ್ಲಿ ಒಟ್ಟು 16 ಸಮಿತಿಗಳಿದ್ದು, ಕೆಲವೇ ಕಡೆಗಳಲ್ಲಿ ಮೂರ್ತಿಗಳ ಸ್ಥಾಪನೆಗೆ ಸಿದ್ಧತೆ ನಡೆದಿದೆ.

ನಗರದ ಸುತ್ತಮುತ್ತ ಇರುವ ಹತ್ತಾರು ಗಣಪತಿ ಮೂರ್ತಿ ತಯಾರಕರು ಮೊದಲೇ ತಿಳಿಸಿದವರಿಗೆ ಮಾತ್ರ ವಿಗ್ರಹಗಳನ್ನು ಸಿದ್ಧಪಡಿಸಿದ್ದಾರೆ. ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವವರು ಅವುಗಳ ಗಾತ್ರ ಹಾಗೂ ಕಲೆಗೆ ಅನುಗುಣವಾಗಿ ₹ 2,000ದಿಂದ ₹ 15 ಸಾವಿರದವರೆಗೆ ದರ ನೀಡಿ ಖರೀದಿಸಿದ್ದಾರೆ.

‘ಕೊರೊನಾದಿಂದಾಗಿ ವಹಿವಾಟು ಸಂಪೂರ್ಣ ನಷ್ಟವಾಗಿದೆ. ಪ್ರತಿ ವರ್ಷ 100ರಷ್ಟು ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದೆ. ಆದರೆ, ಈ ಬಾರಿ ಸುಮಾರು 40ರಷ್ಟು ಮಾತ್ರ ಮಾರಾಟವಾಗಿವೆ’ ಎಂದು ಕಾರವಾರದ ಸೋನಾರವಾಡದಲ್ಲಿರುವ ಮೂರ್ತಿ ತಯಾರಕರಾದ ಮಾರುತಿ ಕುರ್ಡೇಕರ್ ಮತ್ತು ದತ್ತಾನಂದ ಕುರ್ಡೇಕರ್ ಹೇಳಿದರು.

ಸದಾಶಿವಗಡದಲ್ಲಿ ಮೂರ್ತಿ ತಯಾರಕ ಸೈಲ್ ಕುಟುಂಬದರಾಜೇಶ ಸೈಲ್, ಗಣೇಶ ಸೈಲ್ ಮತ್ತು ನೀಲೇಶ ಸೈಲ್ ಸಹೋದರರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸುಮಾರು 40 ವರ್ಷಗಳಿಂದ ಅವರ ಕುಟುಂಬ ಈ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದರೆ, ಇಂತಹ ಸನ್ನಿವೇಶವನ್ನು ಎಂದೂ ಕಂಡಿರಲಿಲ್ಲ ಎನ್ನುತ್ತಾರೆ.

ಸಾಂಪ್ರದಾಯಿಕವಾಗಿ ಜೇಡಿಮಣ್ಣಿನಿಂದಲೇ ಮೂರ್ತಿಗಳನ್ನು ತಯಾರಿಸುವ ಈ ಸಹೋದರರು, ಪ್ರತಿ ವರ್ಷ 100ಕ್ಕೂ ಅಧಿಕ ವಿಗ್ರಹಗಳನ್ನು ಮಾಡುತ್ತಿದ್ದರು. ಈ ವರ್ಷ 80 ವಿಗ್ರಹಗಳನ್ನು ಸಿದ್ಧಪಡಿಸಿದ್ದಾರೆ.

‘ಕೊರೊನಾ ಕಾರಣದಿಂದ ಈ ಬಾರಿ ಗೋವಾಕ್ಕೆ ಗಣೇಶ ವಿಗ್ರಹಗಳನ್ನು ಕಳುಹಿಸಲಾಗಲಿಲ್ಲ. ಸ್ಥಳೀಯವಾಗಿ ವಿಗ್ರಹಗಳನ್ನು ಕೇಳಿದವರಿಗೆ ತಯಾರಿಸಿ ನೀಡಿದ್ದೇವೆ’ ಎಂದು ರಾಜೇಶ್ ಸೈಲ್ ಹೇಳಿದರು.

ದರ ಏರಿಕೆಯ ಬಿಸಿ

ಕೊರೊನಾ ಕಾರಣದಿಂದ ಜನರ ಬಳಿ ಹಣಕಾಸು ಸುಸ್ಥಿತಿಯಲ್ಲಿಲ್ಲ. ಅದರ ನಡುವೆ ಹಬ್ಬಕ್ಕೆ ಅಗತ್ಯ ವಸ್ತುಗಳ ದರ ಏರಿಕೆಯಾಗಿದ್ದು, ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ.

ಸಣ್ಣ ಗಾತ್ರದ ಸೇವಂತಿಗೆ ಹೂವಿನ ಒಂದು ಮಾರಿಗೆ ₹ 100, ದೊಡ್ಡ ಗಾತ್ರದ್ದಕ್ಕೆ ₹ 200, ಕೆಂಪು ಸೇವಂತಿಗೆ ₹ 200, 250 ಗ್ರಾಂ ಬಿಡಿ ಹೂವಿಗೆ ₹ 150ರಿಂದ ₹ 200, ಫಲಾವಳಿಗಳ ಪ್ರತಿ ಕಟ್ಟು ₹ 30ರಿಂದ ₹ 40ರ ದರದಲ್ಲಿ ಮಾರಾಟವಾದವು.

ಕಾರವಾರ, ಅಂಕೋಲಾ ಭಾಗದಲ್ಲಿ ಚೌತಿ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿರುವ ‘ಗುಮಟೆ ಪಾಂಗ್’ ಚರ್ಮ ವಾದ್ಯವು ಈ ಬಾರಿ ಬೇಡಿಕೆ ಕಳೆದುಕೊಂಡಿದೆ. ₹ 1,200ರಂತೆ ದರ ನಿಗದಿಯಾಗಿದ್ದರೂ ಒಂದೂ ಮಾರಾಟವಾಗಿಲ್ಲ ಎಂದು ವ್ಯಾಪಾರಿಯೊಬ್ಬರು ಬೇಸರಿಸಿದರು.

‘ಮಾರ್ಗಸೂಚಿ ಪಾಲಿಸಿ’

ಕೊರೊನಾದ ಸಂದರ್ಭದಲ್ಲಿ ಗಣೇಶೋತ್ಸವ ನಡೆಯುತ್ತಿದೆ. ಈ ಸಂಭ್ರಮದ ನಡುವೆಯೂ ಕೋವಿಡ್ 19 ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸರ್ಕಾರವು ಜನರ ಭಾವನೆಗಳನ್ನು ಪರಿಗಣಿಸಿ ಷರತ್ತುಬದ್ಧವಾಗಿ ಅನುಮತಿ ನೀಡಿದೆ. ಸಂಪ್ರದಾಯದ ಪಾಲನೆಯ ಜೊತೆಗೇ ಕೊರೊನಾ ಸಂಬಂಧ ಜಾಗೃತಿಯೂ ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT