ಮಂಗಳವಾರ, ಆಗಸ್ಟ್ 16, 2022
29 °C
ಚಿತ್ತಾಕುಲಾ ಗ್ರಾಮದ ಸಾವರ್‌ಪೈನಲ್ಲಿ ಗುಡ್ಡದ ಮೇಲಿನ ಚಿತ್ತಾಕರ್ಷಕ ಪ್ರದೇಶ

ಕಾರವಾರ ಸ್ಟೇಡಿಯಂ ನೋಂದಣಿಗೆ ಕೂಡದ ಕಾಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾವರ್‌ಪೈಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಜಾಗವೇನೋ ಮಂಜೂರಾಗಿದೆ. ಆದರೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್‌.ಸಿ.ಎ) ಮತ್ತು ಕಂದಾಯ ಇಲಾಖೆಯ ನಡುವೆ ಒಪ್ಪಂದ ಏರ್ಪಟ್ಟು, ನೋಂದಣಿಯಾಗಲು ಇನ್ನೂ ಕಾಲ ಕೂಡಿ ಬಂದಿಲ್ಲ.

ಗ್ರಾಮದ 11 ಎಕರೆ 34 ಗುಂಟೆ ಗೋಮಾಳದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಟೇಡಿಯಂ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 2016ರಲ್ಲಿ ಅಂದಿನ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಸಲ್ಲಿಕೆಯಾದ ಪ್ರಸ್ತಾವಕ್ಕೆ ಕೆ.ಎಸ್‌.ಸಿ.ಎ ಸಹಮತ ಸೂಚಿಸಿತ್ತು. ಸ್ಥಳ ಪರಿಶೀಲನೆ ನಡೆಸಿದ್ದ ಸಂಸ್ಥೆಯ ಅಧಿಕಾರಿಗಳು, ಸ್ಟೇಡಿಯಂ ನಿರ್ಮಾಣಕ್ಕೆ ಇಚ್ಛೆ ವ್ಯಕ್ತಪಡಿಸಿ ಅನುದಾನವನ್ನೂ ನಿಗದಿ ಮಾಡಿದ್ದರು. ಅಂದಿನ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜಮೀನನ್ನು ಮಂಜೂರು ಮಾಡಿಸಿಕೊಟ್ಟಿದ್ದರು.

ಅಡಚಣೆಯಾದ ಷರತ್ತು: ಕ್ರೀಡಾಂಗಣ ನಿರ್ವಹಣಾ ಸಮಿತಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರು ಸದಸ್ಯರಾಗಿರಬೇಕು ಎಂದು ಜಿಲ್ಲಾಡಳಿತ ಷರತ್ತು ವಿಧಿಸಿತ್ತು. ಆದರೆ, ಸಂಸ್ಥೆಯು ತನ್ನ ಬೈಲಾದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು  ನಿರಾಕರಿಸಿತ್ತು. ಈ ಬಗ್ಗೆ ಸಂಪುಟ ಸಭೆಯಲ್ಲೂ ಚರ್ಚಿಸಿ ಷರತ್ತನ್ನು ಹಿಂಪಡೆದು ಕೆ.ಎಸ್.ಸಿ.ಎ.ಗೆ ತಿಳಿಸಲಾಗಿತ್ತು. ಅಷ್ಟರಲ್ಲಿ ರಾಜ್ಯ ಸರ್ಕಾರ ಬದಲಾಯಿತು. ಬಳಿಕ ಒಡಂಬಡಿಕೆಯ ವಿಚಾರದಲ್ಲಿ ಯಾವುದೇ ಪ್ರಗತಿಯಾಗಲಿಲ್ಲ.

ಈ ನಡುವೆ, ಕಾಮಗಾರಿಗಾಗಿ ಮನೆಗಳನ್ನು ತೆರವು ಮಾಡಬೇಕು, ಕಲ್ಲುಗಳ ತೆರವಿಗೆ ಸ್ಫೋಟಕ ಬಳಸಲಾಗುತ್ತದೆ ಎಂಬ ವದಂತಿಗಳೂ ಸ್ಥಳೀಯರನ್ನು ಆತಂಕಕ್ಕೆ ಗುರಿ ಮಾಡಿತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸ್ಥಳೀಯ ಕೆಲವು ಯುವಕರು, ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡು ಸ್ಟೇಡಿಯಂ ನಿರ್ಮಾಣಕ್ಕೆ ಒಲವು ತೋರುತ್ತಿದ್ದಾರೆ.

‘ಇಲ್ಲಿ ಸ್ಟೇಡಿಯಂ ನಿರ್ಮಾಣವಾದರೆ ಇಡೀ ಕಾರವಾರದ ಚಿತ್ರಣವೇ ಬದಲಾಗಲಿದೆ. ಸ್ಥಳೀಯವಾಗಿ ಹಲವು ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಾಗುತ್ತವೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ’ ಎಂದು ಸ್ಥಳೀಯ ನಿವಾಸಿ ಉಪೇಂದ್ರ ಸಂತೋಷ ಗೋವೆಕರ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಮನೆ ತೆರವು ಮಾಡುವುದಿಲ್ಲ’:

‘ಸ್ಟೇಡಿಯಂ ನಿರ್ಮಾಣಕ್ಕಾಗಿ ನಿಗದಿಪಡಿಸಿದ ಜಾಗದಿಂದ ಒಂದಿಂಚೂ ಜಾಗ ಬೇರೆ ಕಡೆ ಬಳಕೆಯಾಗುವುದಿಲ್ಲ. ಕಾಮಗಾರಿ ಸಂದರ್ಭದಲ್ಲಿ ಕಲ್ಲುಗಳ ತೆರವಿಗೆ ಸ್ಫೋಟಕಗಳ ಬಳಕೆಯ ಅಗತ್ಯವಿಲ್ಲ. ಈ ಬಗ್ಗೆ ಸ್ಥಳೀಯರು ಆತಂಕ ಪಡುವ ಅಗತ್ಯವೇ ಇಲ್ಲ’ ಎಂದು ಮಾಜಿ ಶಾಸಕ ಸತೀಶ ಸೈಲ್ ಸ್ಪಷ್ಟಪಡಿಸಿದ್ದಾರೆ.

‘ಸ್ಥಳೀಯರ ಅನುಮಾನಗಳನ್ನು ಬಗೆಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ಹಮ್ಮಿಕೊಂಡು ಚರ್ಚಿಸಬಹುದು. ನಂತರ ಜಿಲ್ಲಾಧಿಕಾರಿ ಮುಖೇನ ಕೆ.ಎಸ್.ಸಿ.ಎ ಗಮನಕ್ಕೆ ತರಬಹುದು. ಇಡೀ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಸ್ಟೇಡಿಯಂ ಅಗತ್ಯವಿದೆ. ಅಂಕೋಲಾದಲ್ಲಿ ವಿಮಾನ ನಿಲ್ದಾಣವಾಗುತ್ತಿದೆ. ಇಲ್ಲಿ ಸ್ಟೇಡಿಯಂ ನಿರ್ಮಾಣವಾದರೆ, ಇಡೀ ಪ್ರದೇಶದ ಅಭಿವೃದ್ಧಿಗೆ ಸಾಧ್ಯವಾಗುತ್ತದೆ. ಇಂತಹ ಅವಕಾಶವನ್ನು ನಾವು ಕಳೆದುಕೊಳ್ಳಬಾರದು’ ಎಂದು ಅವರು ಹೇಳಿದರು.

ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ ನೀಡಲು ಸ್ಥಳೀಯರಿಗೆ ಮನವಿ ಮಾಡಿದ್ದೇವೆ. ಎಲ್ಲರೊಂದಿಗೆ ಚರ್ಚಿಸುವುದಾಗಿ ಮುಖಂಡರು ಹೇಳಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ವಿಶ್ವಾಸವಿದೆ.

– ಸತೀಶ ಸೈಲ್, ಮಾಜಿ ಶಾಸಕ‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು