ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ದಡದಲ್ಲಿ ಜೀವ ರಕ್ಷಕರಿಲ್ಲ... ಎಚ್ಚರಿಕೆ!

ಅಬ್ಬರಿಸುವ ಅಲೆಗಳಿಗೆ ಸಿಲುಕಿದ ಪ್ರವಾಸಿಗರ ರಕ್ಷಿಸುವ ಆಪದ್ಬಾಂಧವರು
Last Updated 22 ಸೆಪ್ಟೆಂಬರ್ 2020, 13:45 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ಕಾರಣದಿಂದ ಕಳೆಗುಂದಿದ್ದ ಪ್ರವಾಸೋದ್ಯಮ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಅದರಲ್ಲೂ ಅಬ್ಬರಿಸುತ್ತಿರುವ ಸಮುದ್ರದ ಕಡೆಗೆ ಹೆಚ್ಚು ಮಂದಿ ಆಕರ್ಷಿತರಾಗುತ್ತಿದ್ದಾರೆ. ಆದರೆ, ಪ್ರವಾಸಿಗರ ಸುರಕ್ಷತೆಯನ್ನು ನೋಡಿಕೊಳ್ಳಲು ಬೇಕಾಗಿರುವ ಜೀವ ರಕ್ಷಕರು ನೇಮಕವಾಗದೇ ಪ್ರವಾಸಿಗರು ಆತಂಕ ಪಡುವಂತಾಗಿದೆ.

ಜಿಲ್ಲೆಯಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರವನ್ನು ಹೊರತು ಪಡಿಸಿದರೆ ಮತ್ತೆಲ್ಲ ಕಡೆಯೂ ಸಮುದ್ರವು ಸದಾ ಅಬ್ಬರಿಸುತ್ತಿರುತ್ತದೆ. ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಮುರ್ಡೇಶ್ವರ, ಗೋಕರ್ಣಕ್ಕೆ ದಿನವೊಂದಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಕೊರೊನಾ ಸಂಬಂಧದ ಲಾಕ್‌ಡೌನ್ ನಿಯಮಗಳು ಸಡಿಲವಾದ ಬಳಿಕ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.

ಸಮುದ್ರ ಕಂಡೊಡನೆ ಸಂಭ್ರಮದ ಮೇರೆ ಮೀರುವ ಹಲವರು ತಮ್ಮ ಪ್ರಾಣಕ್ಕೇ ಅಪಾಯ ತಂದುಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ದಡಕ್ಕೆ ಅಪ್ಪಳಿಸುವ ರಭಸದ ಅಲೆಯೊಂದಿಗೆ ಆಟವಾಡಲು ಮುಂದಾಗಿ ನೀರು ಪಾಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ವಾರದ ಅವಧಿಯಲ್ಲಿ (ಸೆ.22ರವರೆಗೆ) ಐವರು ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ.

ಕೊರೊನಾ ಸಂಬಂಧ ಲಾಕ್‌ಡೌನ್ ಜಾರಿಯಾಗುವ ಮೊದಲು ಜಿಲ್ಲೆಯ ಕಡಲತೀರಗಳಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ‘ಜೀವ ರಕ್ಷಕ’ರನ್ನು ನೇಮಿಸಲಾಗುತ್ತಿತ್ತು. ಆದರೆ, ಈಗ ಸಮಿತಿಗೇ ಆದಾಯದ ಕೊರತೆಯಾಗಿದೆ. ಹಾಗಾಗಿ ಜೀವರಕ್ಷಕರ ನೇಮಕವಾಗಿಲ್ಲ.

ಕಡಲತೀರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದ ಪ್ರವಾಸಿಗರ ಸಾವಿನ ಪ್ರಕರಣಗಳನ್ನು ಕಂಡು 2016ರಲ್ಲಿ ಮೊದಲ ಬಾರಿಗೆ ‘ಜೀವ ರಕ್ಷಕ’ರ ನೇಮಕವಾಯಿತು. ಆಗ ಕಾರವಾರದಲ್ಲಿ ಮೂವರು, ಮುರ್ಡೇಶ್ವರದಲ್ಲಿ ಏಳು, ಗೋಕರ್ಣದ ಮುಖ್ಯ ಕಡಲತೀರ, ಓಂ ಬೀಚ್, ಕುಡ್ಲೆ ಬೀಚ್ ಸೇರಿದಂತೆ ಒಟ್ಟು 21 ಮಂದಿ ಜೀವ ರಕ್ಷಕರನ್ನು ನೇಮಿಸಲಾಗಿತ್ತು.

ಸಮುದ್ರದ ನೀರಿನಲ್ಲಿ ಅಪಾಯಕ್ಕೆ ಸಿಲುಕುವ ಪ್ರವಾಸಿಗರ ರಕ್ಷಣೆಗೆ ಜೀವ ರಕ್ಷಕರು ಅಗತ್ಯ ತರಬೇತಿ ಪಡೆದವರಾಗಿದ್ದರು. ಹಾಗಾಗಿ ಯಾರಾದರೂ ಅಪಾಯಕ್ಕೆ ತುತ್ತಾದ ಕೂಡಲೇ ಕಾರ್ಯಾಚರಣೆ ಮಾಡಿ ರಕ್ಷಿಸುತ್ತಿದ್ದರು. ಅದರ ಫಲವಾಗಿ ಜಿಲ್ಲೆಯ ಕಡಲ ತೀರದಲ್ಲಿ ಪ್ರವಾಸಿಗರ ಸಾವಿನ ಸಂಖ್ಯೆ ಇಳಿಮುಖವಾಗಿತ್ತು. ಐದು ವರ್ಷಗಳಲ್ಲಿ 80ಕ್ಕೂ ಅಧಿಕ ಮಂದಿಯನ್ನು ಅವರು ರಕ್ಷಿಸಿದ್ದರು. ಆದರೆ, ಕೊರೊನಾ ಕಾರಣದಿಂದ ಲಾಕ್‌ಡೌನ್ ಹೇರಿದ ಸಂದರ್ಭದಲ್ಲಿ ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಇದರ ಜೊತೆಗೇ ಜೀವ ರಕ್ಷಕರ ಕೆಲಸವನ್ನೂ ನಿಲ್ಲಿಸಲಾಗಿತ್ತು. ಅದಾದ ಬಳಿಕ ಅವರ ಮರು ನೇಮಕವಾಗಿಲ್ಲ.

ಕಡಿಮೆ ಸಂಬಳ:ಕಡಲತೀರ ಅಭಿವೃದ್ಧಿ ಸಮಿತಿಯಲ್ಲಿ ಲೈಫ್‌ಗಾರ್ಡ್, ಉಸ್ತುವಾರಿಗಳು, ಸ್ವಚ್ಛತಾ ಸಿಬ್ಬಂದಿ, ಯುದ್ಧ ನೌಕೆ ಸಂಗ್ರಹಾಲಯ ಮಾರ್ಗದರ್ಶಕ, ಟ್ಯಾಗೋರ್ ಕಡಲತೀರದ ಸ್ವಚ್ಛತಾ ಟ್ರ್ಯಾಕ್ಟರ್‌ನ ಚಾಲಕ ಸೇರಿದಂತೆ ಒಟ್ಟು 38 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ಜೀವರಕ್ಷಕರಿಗೆ ಹೊರ ಗುತ್ತಿಗೆ ಸಂಸ್ಥೆಗಳಿಂದ ತಿಂಗಳಿಗೆ ₹ 11 ಸಾವಿರ ವೇತನ ನೀಡಲಾಗುತ್ತಿತ್ತು. ಆದರೆ, ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನೂ ಚೇತರಿಕೆ ಕಾಣಬೇಕಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಆದಾಯ ವೃದ್ಧಿಯಾಗಬೇಕಿದೆ. ಹಾಗಾಗಿ ಅಲ್ಲಿಯವರೆಗೆ ಹೊಸ ನೇಮಕಾತಿ ಅನುಮಾನ ಎನ್ನುವುದು ಅಧಿಕಾರಿಗಳ ಪ್ರತಿಕ್ರಿಯೆಯಾಗಿದೆ.

ಎಚ್ಚರಿಕೆ ಅಗತ್ಯ:ಪ್ರವಾಸಿಗರು ನೀರು ಕಂಡ ಕೂಡಲೇ ಅತ್ಯುತ್ಸಾಹ ತೋರಬಾರದು. ಮಳೆಗಾಲವಾಗಿರುವ ಕಾರಣ ಸಮುದ್ರದ ಅಲೆಗಳು ದಡದಲ್ಲಿ ಸಾಕಷ್ಟು ಮುಂದೆ ಬಂದಿರುತ್ತವೆ. ಇದರಿಂದ ಆಳ, ನೀರಿನ ಸೆಳೆತ ಅರಿಯದೇ ನೀರಿಗಿಳಿದವರು ನೀರು ಪಾಲಾಗುವ ಸಂಭವ ಹೆಚ್ಚು. ಹಾಗಾಗಿ ದಡದ ಆಸುಪಾಸಿನಲ್ಲೇ ಅಲೆಗಳು ಹೆಚ್ಚು ರಭಸವಾಗಿ ಅಪ್ಪಳಿಸದ ಜಾಗದಲ್ಲೇ ಸಂಭ್ರಮಿಸುವುದು ಸೂಕ್ತ.

ಮದ್ಯಪಾನ ಮಾಡಿದ ಬಳಿಕ ಸಮುದ್ರಕ್ಕೆ ಇಳಿಯುವುದು ಭಾರಿ ಅಪಾಯಕಾರಿಯಾಗಿ ಪರಿಣಮಿಸಬಹುದು. ನಶೆಯಲ್ಲಿ ನೀರಿಗೆ ಬಿದ್ದರೆ ಮೂಗು, ಬಾಯಿಗೆ ನೀರು ಸೇರಿಕೊಂಡು ಉಸಿರಾಟಕ್ಕೆ ಸಮಸ್ಯೆಯಾಗಬಹುದು. ಅಲ್ಲದೇ ನೀರಿನಲ್ಲೇ ಕೊಚ್ಚಿಕೊಂಡು ಹೋಗುವ ಆತಂಕವೂ ಇರುತ್ತದೆ.

ಮಕ್ಕಳು, ವೃದ್ಧರು ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಂಡು ನೀರಿನ ಬಳಿ ಹೋಗಬೇಕು. ಒಂದುವೇಳೆ ನೀರಿನ ಸೆಳೆತಕ್ಕೆ ಸಿಲುಕಿದರೆ ತಪ್ಪಿಸಿಕೊಳ್ಳಲು ಕಷ್ಟವಾಗಬಹುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮುದ್ರ ಸ್ನಾನಕ್ಕೆ ಹೋದರೆ ಜೀವ ರಕ್ಷಕರಿಲ್ಲದೆಯೂ ಸುರಕ್ಷಿತವಾಗಿ ವಾಪಸಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT