ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಊಟ ಕೊಡುವವರ ತುತ್ತು ಕಸಿದ ಕೊರೊನಾ, ಕೆಲಸಗಾರರ ಸಂಬಳಕ್ಕೂ ಕಷ್ಟ

Last Updated 23 ಮೇ 2020, 19:45 IST
ಅಕ್ಷರ ಗಾತ್ರ

ಶಿರಸಿ: ಹಸಿದವರಿಗೆ ಊಟ ಕೊಡುತ್ತಿದ್ದ ಹೋಟೆಲ್ ಉದ್ಯಮ ಕೋವಿಡ್‌ 19 ಲಾಕ್‌ಡೌನ್‌ ಹೊಡೆತಕ್ಕೆ ನಲುಗಿದೆ. ಅರ್ಧ ಬಾಗಿಲು ತೆಗೆಯುತ್ತಿರುವ ಸಣ್ಣ ಹೋಟೆಲ್‌ಗಳು ನಷ್ಟ ಭರಿಸಲಾಗದೇ, ಶಾಶ್ವತವಾಗಿ ಬಾಗಿಲು ಮುಚ್ಚುವ ಭೀತಿಯಲ್ಲಿವೆ.

ಸದಾ ಗ್ರಾಹಕರಿಂದ ಗಿಜಿಗುಡುತ್ತಿದ್ದ, ಅನೇಕರಿಗೆ ಹರಟೆ ಹೊಡೆಯುವ ತಾಣವಾಗಿದ್ದ ಹೋಟೆಲ್‌ಗಳಲ್ಲಿ ಈಗ ನೀರವ ಮೌನ ಆವರಿಸಿದೆ. ಅಲ್ಲಿರುವ ಟೇಬಲ್‌, ಕುರ್ಚಿಗಳು ದೂಳು ತುಂಬಿಕೊಂಡಿವೆ. ಬಾಗಿಲಿನಲ್ಲೇ ತಡೆ ಹಾಕಿರುವ ಹೋಟೆಲ್‌ಗಳಲ್ಲಿ ಮಾಲೀಕರು, ಒಂದಿಬ್ಬರು ಸರ್ವರ್‌ಗಳು ಮಾತ್ರ ಕಾಣುತ್ತಾರೆ. ಆಗೀಗ ಒಬ್ಬೊಬ್ಬರು ಗ್ರಾಹಕರು ಬಂದು ಪಾರ್ಸೆಲ್ ಒಯ್ಯುತ್ತಾರೆ.

ನಗರದಲ್ಲಿ 13ರಷ್ಟು ದೊಡ್ಡ ಹೋಟೆಲ್‌ಗಳಿವೆ. ಸಣ್ಣ ಹೋಟೆಲ್‌ಗಳು, ದರ್ಶಿನಿಗಳು ಸೇರಿದರೆ ಈ ಸಂಖ್ಯೆ 70 ದಾಟುತ್ತದೆ. ಮಾಲೀಕರು, ಸರ್ವರ್‌ಗಳು, ಕ್ಲೀನರ್‌ಗಳು ಸೇರಿ 300ಕ್ಕೂ ಹೆಚ್ಚು ಜನರು ಇದೇ ಉದ್ಯಮ ನಂಬಿಕೊಂಡಿದ್ದಾರೆ. ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ಆರಂಭವಾದಾಗಿನಿಂದ ಹೋಟೆಲ್‌ಗಳೆಡೆಗೆ ಗ್ರಾಹಕರು ಸುಳಿಯುತ್ತಿಲ್ಲ. ತೀರಾ ಅನಿವಾರ್ಯವಿದ್ದವರು ಮಾತ್ರ ಪಾರ್ಸೆಲ್‌ಗಳನ್ನು ಕೊಂಡೊಯ್ಯುತ್ತಾರೆ.

‘ಲಾಕ್‌ಡೌನ್ ಪೂರ್ವದ ದೈನಂದಿನ ವಹಿವಾಟಿಗೆ ಹೋಲಿಸಿದರೆ, ಶೇ 5ರಷ್ಟು ವಹಿವಾಟು ನಡೆಯುತ್ತಿದೆ. ಭಾನುವಾರ ಆದಾಯ ಶೂನ್ಯವೆಂದರೂ ತಪ್ಪಿಲ್ಲ. ಪ್ರತಿದಿನ ಮಧ್ಯಾಹ್ನ 300 ಊಟ ಖಾಲಿಯಾಗುತ್ತಿದ್ದ ನಮ್ಮ ಹೋಟೆಲ್‌ನಲ್ಲಿ ಈಗ 30 ಊಟ ಹೋಗುವುದೂ ಕಷ್ಟ. ಸಂಜೆ 100 ಊಟ ಹೋಗುತ್ತಿತ್ತು. ಈಗ ಐದಾರು ಜನರು ಬಂದರೆ ಹೆಚ್ಚು. ದಿನಕ್ಕೆ ₹ 3000 ಆದಾಯವೂ ಇರುವುದಿಲ್ಲ’ ಎನ್ನುತ್ತಾರೆ ಸಾಮ್ರಾಟ್ ಹೋಟೆಲ್ ಮಾಲೀಕ ಸತೀಶ ಗೋಳಿಕೊಪ್ಪ.

‘35 ಕೆಲಸಗಾರರಲ್ಲಿ ಬರುವಲ್ಲಿ ಐದು ಜನ ಬರುತ್ತಿದ್ದಾರೆ. ಅವರ ಬದುಕಿಗೆ ಕಷ್ಟವಾಗದಂತೆ ಸಂಬಳ ನೀಡುವುದು ಅನಿವಾರ್ಯ. ಸಣ್ಣ ನಗರ, ಪಟ್ಟಣಗಳ ಹೋಟೆಲ್‌ ಮಾಲೀಕರು ತೀರಾ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.ಈ ಉದ್ಯಮ ಮೇಲೇಳಲು ವರ್ಷ ಕಾಲ ಬೇಕಾಗಬಹುದು ಸಾಮಾನ್ಯ ದಿನಗಳಲ್ಲಿ 10ಕ್ಕೂ ಹೆಚ್ಚು ಬಗೆಯ ತಿನಿಸು ತಯಾರಿಸುತ್ತಿದ್ದ ನಾವು ಈಗ ಇದನ್ನು ವೈವಿಧ್ಯ, ಪ್ರಮಾಣ ಎರಡನ್ನೂ ಕಡಿತಗೊಳಿಸಿದ್ದೇವೆ’ ಎಂದು ಅವರು ಪ್ರತಿಕ್ರಿಯಿಸಿದರು.

ದಿನಸಿ ಸಾಮಗ್ರಿಗಳ ದರ ದುಪ್ಪಟ್ಟಾಗಿದೆ. ಶೇ 60ರಷ್ಟು ವ್ಯಾಪಾರ ಕಡಿಮೆಯಾಗಿದೆ. ಪಾರ್ಸೆಲ್ ವ್ಯವಸ್ಥೆಯಿದ್ದರೂ ಹೆಚ್ಚಿನ ವ್ಯಾಪಾರವಿಲ್ಲ. ಮನೆಯಲ್ಲಿ ಇರುವ ಬದಲು ಹೋಟೆಲ್‌ಗೆ ಬರುವಂತಾಗಿದೆ. ಲಾಭದ ನಿರೀಕ್ಷೆಯಿಲ್ಲದೆ ಉದ್ಯಮ ಮಾಡಬೇಕಾಗಿದೆ ಎಂದು ಗುರುಕೃಪಾ ಹೋಟೆಲ್ ಮಾಲೀಕರ ಶ್ರೀಪತಿ ಹೆಗಡೆ ಹೇಳುತ್ತಾರೆ.

ಹೋಟೆಲ್ ತೆರೆಯಲು ಅವಕಾಶ ನೀಡಿದ್ದರೂ, ಹೆಚ್ಚಿನ ಪ್ರಯೋಜನವಿಲ್ಲ. ನಿತ್ಯ 200ರಷ್ಟು ಗ್ರಾಹಕರು ಬರುತ್ತಿದ್ದ ಹೋಟೆಲ್‌ಗೆ ಈಗ 50 ಜನರು ಬಂದರೆ ಹೆಚ್ಚು. ಜಾಗದ ಬಾಡಿಗೆ ಕಟ್ಟಲು ಉದ್ಯಮ ನಡೆಸುವ ಪರಿಸ್ಥಿತಿ ಬಂದಿದೆ ಎಂದು ದುರ್ಗಾಂಬಾ ಹೋಟೆಲ್ ಮಾಲೀಕ ಗಿರೀಶ ನಾಯ್ಕ ಹೇಳುತ್ತಾರೆ.

ಪಿಎಫ್ ಯಾರು ತುಂಬಬೇಕು ?
ಕೆಲಸಗಾರರ ಆಗಸ್ಟ್‌ವರೆಗಿನ ಪಿಎಫ್‌ ಅನ್ನು ಸರ್ಕಾರ ಪಾವತಿಸುವುದಾಗಿ ಹೇಳಿದೆ. ಆದರೆ, ಸಂಬಂಧಪಟ್ಟ ಕಚೇರಿಯಿಂದ ಪಿಎಫ್ ಭರಣ ಮಾಡುವಂತೆ ಕರೆ ಬರುತ್ತಿದೆ. ಕೆಲಸಗಾರರು ಮನೆಯಲ್ಲಿದ್ದಾರೆ. ಆದರೆ, ಐಎಸ್‌ಐ ಅನ್ನು ಕಡ್ಡಾಯವಾಗಿ ಪಾವತಿಸಬೇಕಾಗಿದೆ ಎಂದು ಹೋಟೆಲ್ ಮಾಲೀಕರೊಬ್ಬರು ಅಲವತ್ತುಕೊಂಡರು.

*
ಹೋಟೆಲ್‌ ಬಾಗಿಲು ಮುಚ್ಚುವಂತಿಲ್ಲ. ಆದರೆ, ಗ್ರಾಹಕರ ಸಂಖ್ಯೆ ಅನಿಶ್ಚಿತ. ಹೀಗಾಗಿ ನಷ್ಟದಲ್ಲೇ ಉದ್ಯಮ ನಡೆಸಬೇಕಾಗಿದೆ
–ಸತೀಶ ಗೋಳಿಕೊಪ್ಪ, ಸಾಮ್ರಾಟ್ ಹೋಟೆಲ್ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT