ಮಂಗಳವಾರ, ಆಗಸ್ಟ್ 9, 2022
20 °C
21ರವರೆಗೆ ಮದುವೆಗೆ ಅನುಮತಿಯಿಲ್ಲ: ಸೂಕ್ಷ್ಮ ನಿರ್ಬಂಧಿತ ವಲಯ ಮುಂದುವರಿಕೆ

ಉತ್ತರ ಕನ್ನಡ: ಬೆಳಿಗ್ಗೆ 8ರಿಂದ 2ರವರೆಗೆ ಲಾಕ್‌ಡೌನ್ ವಿನಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಯಲ್ಲಿ ಜೂನ್ 14ರಿಂದ ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಜೂನ್ 21ರವರೆಗೆ ಸೋಮವಾರದಿಂದ ಶುಕ್ರವಾರದ ತನಕ ಈ ವಿನಾಯಿತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದರು.

‌ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಜೂನ್ 21ರ ತನಕ ಮದುವೆಗಳಿಗೆ ಅನುಮತಿ ನೀಡುವುದಿಲ್ಲ. ಸೂಕ್ಷ್ಮ ನಿರ್ಬಂಧಿತ ವಲಯಗಳನ್ನು (ಮೈಕ್ರೊ ಕಂಟೈನ್‌ಮೆಂಟ್ ಝೋನ್) ಕೋವಿಡ್ ದೃಢಪಡುವ ಪ್ರಮಾಣವನ್ನು ಆಧರಿಸಿ ಮುಂದುವರಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊರಡಿಸಿದ ಪರಿಷ್ಕೃತ ಆದೇಶದ ಆಧಾರದಲ್ಲಿ ಜಿಲ್ಲೆಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಉಳಿದಂತೆ, ಸರ್ಕಾರದ ಸುತ್ತೋಲೆಯ ಎಲ್ಲ ಅಂಶಗಳೂ ಜಾರಿಯಲ್ಲಿರುತ್ತವೆ. ಶನಿವಾರ, ಭಾನುವಾರ ಮತ್ತು ಸಂಜೆ 7ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ’ ಎಂದು ತಿಳಿಸಿದರು.

‘ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಪ್ರಾಣಿಗಳ ಮೇವಿನೊಂದಿಗೆ ವ್ಯವಹರಿಸುವ ಅಂಗಡಿಗಳು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಕಾರ್ಯ ನಿರ್ವಹಿಸಬಹುದು. ಕನ್ನಡಕ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು, ಸಾರ್ವಜನಿಕ ವಿತರಣಾ ವ್ಯವಸ್ಥೆಯ ವರ್ತಕರು ಹಾಗೂ ಮದ್ಯದಂಗಡಿಗಳು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ತೆರೆದಿರಬಹುದು’ ಎಂದು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಸೋಮವಾರದಿಂದ ಮಧ್ಯಾಹ್ನ 2ರ ನಂತರ, ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಅವಧಿಯಲ್ಲಿ ಅನಗತ್ಯ ಸಂಚರಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹೆಚ್ಚು ಕೋವಿಡ್ ಪ್ರಕರಣಗಳು ಇರುವ ಪ್ರದೇಶಗಳಲ್ಲಿ ಜನರ ಸಂಚಾರವನ್ನು ಮೊದಲೇ ತಿಳಿಸಿ ನಿರ್ಬಂಧಿಸಲಾಗುವುದು’ ಎಂದರು.

‘ತಿಂಗಳಲ್ಲಿ ಸಿದ್ಧವಾಗುವ ಸಾಧ್ಯತೆ’: ‘ಶಿರಸಿಯಲ್ಲಿ ಆರ್.ಟಿ.ಪಿ.ಸಿ.ಆರ್. ಯಂತ್ರ ಅಳವಡಿಕೆಯ ಕಟ್ಟಡ ಕಾಮಗಾರಿ ಒಂದು ವಾರದಲ್ಲಿ ಪೂರ್ಣಗೊಳ್ಳಬಹುದು. ಪ್ರಯೋಗಾಲಯದ ಯಂತ್ರಗಳನ್ನು ತಂದು ಸಂಪೂರ್ಣ ಸಿದ್ಧವಾಗಲು ಒಂದು ತಿಂಗಳು ಬೇಕಾಗಬಹುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ಮಾತನಾಡಿ, ‘ಜಿಲ್ಲೆಯಲ್ಲಿ ದಿನಕ್ಕೆ 4,600 ಕೋವಿಡ್ ಪರೀಕ್ಷೆಯ ಗುರಿಯಿದೆ. ಒಂದು ವಾರದಲ್ಲಿ 20 ಸಾವಿರ ಆರ್.ಟಿ.ಪಿ.ಸಿ.ಆರ್, 7,500 ಆರ್.ಎ.ಟಿ ಸೇರಿ. ಒಟ್ಟು 26 ಸಾವಿರ ಪರೀಕ್ಷೆಗಳನ್ನು ಮಾಡಲಾಗಿದೆ‍’ ಎಂದರು.

ಅಂಗವಿಕಲರಿಗೆ ಲಸಿಕೆ: ‘ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯಿಂದ ಬಿಟ್ಟುಹೋದ ಅಂಗವಿಕಲರಿಗೆ ಜೂನ್ 14ರಂದು ಮತ್ತೊಮ್ಮೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. 45 ವರ್ಷ ಕೆಳಗಿನ 2,600 ಹಾಗೂ ಅದಕ್ಕಿಂತ ಕೆಳಗಿನ ವಯಸ್ಸಿನ 1,900 ಮಂದಿ ಇದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಯಿಂದ ವಾಹನದ ವ್ಯವಸ್ಥೆ ಮಾಡಿ ಲಸಿಕೆ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿ.ಇ.ಒ ಪ್ರಿಯಾಂಗಾ ಮಾಹಿತಿ ನೀಡಿದರು.

*
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಇಳಿಕೆಯಾಗಿದೆ. ಆದರೆ, ಪ್ರಕರಣಗಳು ಇನ್ನೂ ಹೆಚ್ಚು ದೃಢಪಡುತ್ತಿವೆ. ಹಾಗಾಗಿ ಸೂಕ್ಷ್ಮ ನಿರ್ಬಂಧಿತ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ.
– ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು