ಮಂಗಳವಾರ, ಅಕ್ಟೋಬರ್ 19, 2021
22 °C
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಹಿಂದೆ ಬಿದ್ದ ಕಾಗೇರಿ, ಹೆಬ್ಬಾರ

ಕಟ್ಟಡ, ರಸ್ತೆಗೆ ಸೀಮಿತವಾದ ಪ್ರಭಾವಿ ಶಾಸಕರ ಅನುದಾನ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಉತ್ತರ ಕನ್ನಡದ ಆರು ಶಾಸಕರ ಪೈಕಿ ಹಾಲಿ ಸರ್ಕಾರದಲ್ಲಿ ರಾಜ್ಯ ವಿಧಾನಸಭೆ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೆಚ್ಚು ಪ್ರಭಾವಿಗಳಾಗಿದ್ದಾರೆ. ಆದರೆ, ಅವರ ಗಟ್ಟಿತನ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಅನ್ವಯವಾಗಿಲ್ಲ.

ಕಳೆದ ಮೂರು ವರ್ಷಗಳ ಅಂಕಿ–ಅಂಶ ಈ ಶಾಸಕರು ವಾರ್ಷಿಕವಾಗಿ ತಮಗೆ ಲಭಿಸುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಲ್ಲ ಎಂಬುದನ್ನು ಸಾರುತ್ತಿವೆ. 2021–22ನೇ ಸಾಲಿನ ಅನುದಾನ ಬಳಕೆಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಇನ್ನಷ್ಟೆ ಪಟ್ಟಿ ಕೊಡಬೇಕಿದೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಪ್ರತಿ ವರ್ಷ ₹2 ಕೋಟಿ ಬಿಡುಗಡೆಯಾಗುತ್ತಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಇದನ್ನು ₹1 ಕೋಟಿಗೆ ಇಳಿಕೆ ಮಾಡಲಾಗಿದೆ. ಈ ನಿಧಿಯನ್ನು ಸಮುದಾಯ ಭವನ, ಗ್ರಾಮೀಣ ಭಾಗದ ರಸ್ತೆ, ಶಾಲೆ ಕಟ್ಟಡ, ಸಾಂಸ್ಕೃತಿಕ ಕಾರ್ಯಕ್ರಮ, ಬಸ್ ತಂಗುದಾಣ, ಗ್ರಂಥಾಲಯ ಮುಂತಾದವುಗಳ ಅಭಿವೃದ್ಧಿಗೆ ಬಳಸಲು ಅವಕಾಶವಿದೆ.

ಶಿರಸಿ–ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ 2018–19 ಮತ್ತು 2019–20ರಲ್ಲಿ ಬಿಡುಗಡೆಯಾದ ₹1.55 ಕೋಟಿ ಅನುದಾನದಲ್ಲಿ ಕ್ರಮವಾಗಿ ₹125.56 ಲಕ್ಷ,  ₹38.91 ಲಕ್ಷ ಖರ್ಚು ಮಾಡಿದ್ದಾರೆ. 2020–21ರಲ್ಲಿ ಬಿಡುಗಡೆಯಾದ ₹1 ಕೋಟಿಯಲ್ಲಿ ₹42.86 ಲಕ್ಷ ಬಳಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ ₹29.44 ಲಕ್ಷ ವ್ಯಯಿಸಿದ್ದಾರೆ.

ಯಲ್ಲಾಪುರ–ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ ಕ್ರಮವಾಗಿ ₹76.75 ಲಕ್ಷ, ₹29.44 ಲಕ್ಷ, ₹17.7 ಲಕ್ಷ ಮತ್ತು ₹17.46 ಲಕ್ಷ ಖರ್ಚು ಮಾಡಿದ್ದಾರೆ.

ಇಬ್ಬರೂ ಪ್ರಭಾವಿಗಳ ಅನುದಾನ ಸಮುದಾಯ ಭವನ, ರಸ್ತೆ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿರುವದು ದಾಖಲೆಗಳೇ ತಿಳಿಸುತ್ತವೆ. ಈ ಪೈಕಿ ಕಾಗೇರಿ ಕಳೆದ ಸಾಲಿನಲ್ಲಿ 24 ತ್ರಿಚಕ್ರ ವಾಹನಗಳನ್ನು ಅಂಗವಿಕಲರಿಗೆ ನೀಡಿದ್ದರು. ಶಿವರಾಮ ಹೆಬ್ಬಾರ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅನುದಾನ ನೀಡಿದ್ದಾರೆ.

‘ಶಾಸಕರು ಕ್ಷೇತ್ರದ ಅಭಿವೃದ್ಧಿ ದೃಷ್ಟಿ ಗಮನದಲ್ಲಿಟ್ಟುಕೊಂಡೇ ವಿವಿಧ ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡಲು ಶಿಫಾರಸ್ಸು ಮಾಡುತ್ತಾರೆ. ಆದರೆ ಅಧಿಕಾರಿಗಳು ತಮ್ಮ ಹಂತದಲ್ಲಿ ನಿಯಮಾವಳಿಯ ಉತ್ತರ ನೀಡಿ ಶಿಫಾರಸ್ಸು ಜಾರಿ ಮಾಡಲು ಬಿಡುತ್ತಿಲ್ಲ. ಇದು ಅನುದಾನ ಬಳಕೆಗೆ ಅಡ್ಡಿ ಉಂಟು ಮಾಡುತ್ತಿದೆ’ ಎಂದು ಶಾಸಕರ ಆಪ್ತವಲಯ ಸಮರ್ಥಿಸಿಕೊಳ್ಳುತ್ತಿದೆ.

‘ಅಭಿವೃದ್ಧಿ ಯೋಜನೆಗೆ ವಿಶೇಷ ಅನುದಾನ ತರಲಾಗಿದೆ. ಪ್ರದೇಶಾಭಿವೃದ್ಧಿ ನಿಧಿಯನ್ನು ಹೊಸ ಜನಪರ ಕೆಲಸಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಿದ್ದೇನೆ’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
 

‘ಕಳೆದ ಬಾರಿ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗಿತ್ತು. ಈ ಬಾರಿ ಜನರಿಗೆ ಅಗತ್ಯವಿರುವ ಕಾಮಗಾರಿಗೆ ಪ್ರದೇಶಾಭಿವೃದ್ಧಿ ನಿಧಿ ಬಳಸಿಕೊಳ್ಳಲಾಗುತ್ತದೆ. ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ತರುತ್ತಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪ್ರತಿಕ್ರಿಯಿಸಿದರು.

ಆಂಬುಲೆನ್ಸ್ ಕೊಡುಗೆ:

ಕೋವಿಡ್ ಕಾರಣದಿಂದ ಆರೋಗ್ಯ ಕ್ಷೇತ್ರದತ್ತ ಹೆಚ್ಚು ಒತ್ತು ನೀಡಬೇಕಿದ್ದರಿಂದ ಕಳೆದ ಎರಡು ಅವಧಿಯ ಪ್ರದೇಶಾಭಿವೃದ್ಧಿ ನಿಧಿ ಬಳಸಿಕೊಂಡು ವಿಶ್ವೇಶ್ವರ ಹೆಗಡೆ ಕಾಗೇರಿ 2, ಶಿವರಾಮ ಹೆಬ್ಬಾರ 3 ಆಂಬುಲೆನ್ಸ್ ಕ್ಷೇತ್ರಕ್ಕೆ ನೀಡಿದ್ದಾರೆ.

‘ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಜಲಮೂಲಗಳ ಅಭಿವೃದ್ಧಿ, ಗ್ರಾಮೀಣ ಭಗದಲ್ಲಿ ಇನ್ನಷ್ಟು ಮೂಲಸೌಕರ್ಯ ವೃದ್ಧಿ ಯೋಜನೆ ಕೈಗೊಳ್ಳಬಹುದಾಗಿದೆ. ಮತದಾರರ ಓಲೈಕೆ ಉದ್ದೇಶವೊಂದನ್ನೇ ಇಟ್ಟು ಬಳಕೆ ಮಾಡುವ ಬದಲು ಅದು ಜನರಿಗೆ ಸರಿಯಾಗಿ ತಲುಪಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಭಟ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು