ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕುಸಿತ ತಡೆಗೆ ಯೋಜನೆಯಲ್ಲಿಲ್ಲ ಸ್ಪಷ್ಟತೆ

ಕುಮಟಾ– ಶಿರಸಿ ಹೆದ್ದಾರಿ ಕಾಮಗಾರಿ: ವಾಸ್ತವಿಕ ಅಂಶ ಪರಿಗಣಿಸದ ಅಸಮಾಧಾನ
Last Updated 17 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಶಿರಸಿ– ಕುಮಟಾ ರಸ್ತೆಯ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಒಂಬತ್ತು ಸಾವಿರ ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ. ದೇವಿಮನೆ ಘಟ್ಟ ವ್ಯಾಪ್ತಿಯಲ್ಲಿ ಅಪರೂಪದ ಸಸ್ಯ ಸಂಕುಲಗಳಿಗೆ ಹಾನಿಯಾಗುವ ಜತೆಗೆ ಮರಗಳ ತೆರವಿನಿಂದ ಭೂಕುಸಿತದ ಆತಂಕ ಎದುರಾಗಿದೆ.

‘ಪಶ್ಚಿಮ ಘಟ್ಟದ ನೈಸರ್ಗಿಕ ಅರಣ್ಯವಾದ ದೇವಿಮನೆ ಘಟ್ಟ ಪ್ರದೇಶ ಕಡಿದಾದ ಜಾಗ. ಇಲ್ಲಿ ಮರಗಳನ್ನು ತೆರವು ಮಾಡುವುದರಿಂದ ಕಾಡುನಾಶದ ಜತೆಗೆ ಭೂಕುಸಿತದ ಸಮಸ್ಯೆ ಕೂಡ ಮತ್ತಷ್ಟು ಉಲ್ಬಣಗೊಳ್ಳಬಹುದು. ಜತೆಗೆ ಪರಿಸರದ ಸ್ಥಿರತೆಗೂ ಇದು ಪೆಟ್ಟು ನೀಡಲಿದೆ’ ಎಂದು ಪರಿಸರವಾದಿ ಪಾಂಡುರಂಗ ಹೆಗಡೆ ಅಭಿಪ್ರಾಯಪಟ್ಟರು.

‘ಹಾನಿ ಇನ್ನೂ ಅತಿ ಕನಿಷ್ಠ ಪ್ರಮಾಣದಲ್ಲಿರುವಂತೆ ಅಧಿಕಾರಿಗಳು ಯೋಜನೆ ರೂಪಿಸಲಿ. ಜನಪ್ರತಿನಿಧಿಗಳು ಅವರಿಗೆ ಸೂಕ್ತ ಸಲಹೆ ನೀಡಲಿ. ಪರಿಸರಕ್ಕೆ ಧಕ್ಕೆಯಾಗುವ ಇಂತಹ ಯೋಜನೆ ಜಾರಿಗೊಳಿಸುವ ಮೊದಲು ವಾಸ್ತವಿಕ ಅಂಶಗಳನ್ನು ಪರಿಗಣಿಸದಿರುವುದು ದುರಂತ’ ಎಂದು ಅವರು ಹೇಳಿದರು.

‘ಭೂಕುಸಿತದ ಅಪಾಯ ತಡೆಗಟ್ಟುವಲ್ಲಿ ರೈಲ್ವೆ ಇಲಾಖೆ ಸೋತಿರುವುದು ಕಣ್ಣೆದುರಿಗೆ ಇದೆ. ರಸ್ತೆ ವಿಸ್ತರಣೆ ಮಾಡುವ ಮೊದಲು ಭೂಕುಸಿತ ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ಸ್ಪಷ್ಟತೆ ನೀಡಬೇಕು’ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

‘ದೇವಿಮನೆ ಘಟ್ಟ ಮತ್ತು ಸುತ್ತಮುತ್ತ ಮೃದುಕಾಂಡದ ಮರಗಳೇ ಹೆಚ್ಚಿವೆ. ಇವುಗಳನ್ನು ಕಡಿದರೆ ಇದೇ ತಳಿಯ ಸಸಿಗಳನ್ನೇ ಸಮೀಪದಲ್ಲಿ ನೆಡಬೇಕು. ಅಂತರ್ಜಲಮಟ್ಟ ಕುಸಿತಕ್ಕೆ ಅವಕಾಶ ನೀಡದಂತೆ ಯೋಜನೆ ಇರಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ತಡಸದಿಂದ ಕುಮಟಾ ವರೆಗಿನ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಶಿರಸಿಯಿಂದ ದಿವಗಿ ಸೇತುವೆ ವರೆಗಿನ 60 ಕಿ.ಮೀ. ದೂರದ ವರೆಗೆ ಕಾಮಗಾರಿ ಕೈಗೊಳ್ಳಲು ಅನುಮತಿ ದೊರೆತಿದೆ. ಈ ಮಾರ್ಗದಲ್ಲಿ ಈಗಿರುವ 10 ಮೀ. ಬದಲಿಗೆ 18 ಮೀ. ಅಗಲದ ರಸ್ತೆ ನಿರ್ಮಾಣಗೊಳ್ಳಲಿದೆ.

ದೇವಿಮನೆ ಘಟ್ಟ ಪ್ರದೇಶದಲ್ಲಿ 12 ಮೀ. ರಸ್ತೆ ನಿರ್ಮಾಣದ ಸಲುವಾಗಿ ಅಲ್ಪಭಾಗ ಗುಡ್ಡ ತೆರವುಗೊಳಿಸುವ ಅನಿವಾರ್ಯತೆ ಎದುರಾಗಲಿದೆ. ನೂರಾರು ಮರಗಳನ್ನೂ ಕಡಿಯಬೇಕಾಗಿದೆ. ಮಳೆಗಾಲದಲ್ಲಿ ಘಟ್ಟ ಪ್ರದೇಶದ ಹಲವೆಡೆ ಭೂಕುಸಿತದ ಸಮಸ್ಯೆ ಎದುರಾಗಿತ್ತು.

***

ಅಭಿವೃದ್ಧಿ ಚಟುವಟಿಕೆಗೆ ಆಕ್ಷೇಪವಿಲ್ಲ. ಆದರೆ, ಪರಿಸರಕ್ಕೆ ಧಕ್ಕೆಯಾಗುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಮುನ್ನ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ, ವಾಸ್ತವಿಕ ಅಂಶ ಪರಿಗಣಿಸಲಿ.

– ಪಾಂಡುರಂಗ ಹೆಗಡೆ, ಪರಿಸರವಾದಿ.

***

ಅಂಕಿ–ಅಂಶ

5,702: ಶಿರಸಿ ವಿಭಾಗದಲ್ಲಿ ತೆರವುಗೊಳ್ಳುವ ಮರಗಳು

2,940:ಹೊನ್ನಾವರ ವಿಭಾಗದಲ್ಲಿ ತೆರವುಗೊಳ್ಳುವ ಮರಗಳು

14 ಹೆಕ್ಟೇರ್:ದೇವಿಮನೆ ಘಟ್ಟದಲ್ಲಿ ನಾಶವಾಗಲಿರುವ ಅರಣ್ಯ

60 ಕಿ.ಮೀ:ರಸ್ತೆಯ ಒಟ್ಟು ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT