ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ| ಅಡಿಕೆ ಕೊಳೆ ಪರಿಹಾರ ಮರೀಚಿಕೆ

ಬೆಳೆ ಕಳೆದುಕೊಂಡಿರುವ ಬೆಳೆಗಾರರು ಚಿಂತೆಯಲ್ಲಿ; ₹ 313 ಕೋಟಿ ಬೆಳೆ ಹಾನಿ ಅಂದಾಜು
Last Updated 24 ಡಿಸೆಂಬರ್ 2019, 15:53 IST
ಅಕ್ಷರ ಗಾತ್ರ

ಶಿರಸಿ: ವ್ಯಾಪಕ ಕೊಳೆ ರೋಗದಿಂದ ಬೆಳೆ ಕಳೆದುಕೊಂಡಿರುವ ಅಡಿಕೆ ಬೆಳೆಗಾರರಿಗೆ ಸರ್ಕಾರದಿಂದ ಬರಬೇಕಾಗಿರುವ ಕೊಳೆ ಪರಿಹಾರ ಮರೀಚಿಕೆಯಾಗಿದೆ. ಪರಿಹಾರಕ್ಕಾಗಿ ಕಾದಿರುವ ಬೆಳೆಗಾರರು ಸರ್ಕಾರದ ನಿರ್ಲಕ್ಷ್ಯದಿಂದ ನಿರಾಶರಾಗಿದ್ದಾರೆ.

ಈ ಬಾರಿ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಸುರಿದ ಅತಿವೃಷ್ಟಿಗೆ ಅಡಿಕೆ ಬೆಳೆಗೆ ತೀವ್ರ ಕೊಳೆರೋಗ ವ್ಯಾಪಿಸಿತ್ತು. ರೋಗ ನಿಯಂತ್ರಣಕ್ಕೆ ಔಷಧ ಹೊಡೆಯಲೂ ಅವಕಾಶ ನೀಡದೇ ಮಳೆ ಸುರಿಯಿತು. ಇದರಿಂದ ಉಲ್ಬಣಗೊಂಡ ರೋಗ, ಮರದಲ್ಲಿದ್ದ ಎಳೆ ಕಾಯಿಗಳನ್ನು ಆಹುತಿ ತೆಗೆದುಕೊಂಡಿತ್ತು. ರೋಗ ತಗುಲಿದ ಎಳೆಕಾಯಿಗಳು ಮರದ ಕೆಳಗೆ ಹಾಸು ಬಿದ್ದಿದ್ದವು. ಬೆಳೆ ಕಳೆದುಕೊಂಡ ಬೆಳೆಗಾರರು ಪರಿಹಾರ ಸಿಗಬಹುದೆಂದ ನಿರೀಕ್ಷೆಯಲ್ಲಿದ್ದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಅಡಿಕೆ ಕೊಳೆ ರೋಗ ಬಂದ ವರದಿಯ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆ ಸಮೀಕ್ಷೆ ನಡೆಸಿ, 18,946 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಹಾಗೂ 614 ಹೆಕ್ಟೇರ್‌ ಕಾಳುಮೆಣಸು, ಅತಿವೃಷ್ಟಿಯಿಂದ ಹಾನಿಯಾಗಿರುವ ವರದಿ ಸಿದ್ಧಪಡಿಸಿದೆ. ವಿವಿಧ ತಾಲ್ಲೂಕುಗಳಲ್ಲಿ ಕನಿಷ್ಠ ಶೇ 33ರಿಂದ ಗರಿಷ್ಠ ಶೇ 50ರಷ್ಟು ಬೆಳೆ ಹಾನಿಯಾಗಿರುವುದನ್ನು ಗುರುತಿಸಿದೆ.

’ಈ ವರ್ಷ ಚಾಲಿ ಅಡಿಕೆಗೆ ದರ ಬಂದಿದೆ. ಕೆಂಪಡಿಕೆಯ ದರವೂ ತೇಜಿಯಾಗಿದೆ. ಆದರೆ, ಕೊಳೆ ರೋಗದಿಂದ ಶೇ 50ಕ್ಕೂ ಹೆಚ್ಚು ಬೆಳೆ ನೆಲಕಚ್ಚಿದೆ. ಸಣ್ಣ ಹಿಡುವಳಿದಾರರು ಸಂಕಷ್ಟದಲ್ಲಿದ್ದಾರೆ. ಉತ್ಪನ್ನಕ್ಕೆ ಬೆಲೆ ಬಂದರೂ ರೈತರಿಗೆ ಲಾಭವಿಲ್ಲ. ಸರ್ಕಾರ ಕೊಳೆ ಪರಿಹಾರ ನೀಡಿದರೆ, ಬೆಳೆಗಾರರಿಗೆ ಅನುಕೂಲವಾಗುತ್ತದೆ’ ಎಂದು ಬೆಳೆಗಾರ ಕಲ್ಲಳ್ಳಿಯ ಶ್ರೀಕೃಷ್ಣ ಶಾಸ್ತ್ರಿ ಹೇಳಿದರು.

‘ಅಡಿಕೆ ಮರ ಬಿದ್ದು ಹಾನಿಯಾದವರಿಗೆ ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ದೊರೆತಿದೆ. ಕೊಳೆ ರೋಗದಿಂದ 18,946 ಹೆಕ್ಟೇರ್ ಅಡಿಕೆ ತೋಟದಲ್ಲಿ ಸುಮಾರು ₹ 313.29 ಕೋಟಿ ನಷ್ಟವಾ ಅಂದಾಜಿಸಲಾಗಿದೆ. ಈ ಸಂಬಂಧ ಇಲಾಖೆ ಬೆಳೆ ಕಳೆದುಕೊಂಡಿರುವ ರೈತವಾರು ಪಟ್ಟಿ ಸಿದ್ಧಪಡಿಸಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನಲ್ಲಿ ಕೊಳೆ ರೋಗಕ್ಕೆ ಪರಿಹಾರ ನೀಡಲು ಅವಕಾಶವಿಲ್ಲ’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ.ಬಿ.ಪಿ. ಸತೀಶ ಪ್ರತಿಕ್ರಿಯಿಸಿದರು.

ಕೊಳೆ ರೋಗವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ, ಆದೇಶಿಸಿದರೆ, ಪರಿಹಾರ ತಂತ್ರಾಂಶದಲ್ಲಿ ರೈತರ ಹೆಸರನ್ನು ಅಪ್‌ಲೋಡ್ ಮಾಡಲಾಗುತ್ತದೆ. ನಂತರ ಸರ್ಕಾರ ನೀಡುವ ಅನುದಾನದಲ್ಲಿ ನಿಯಮದಂತೆ ಪ್ರತಿ ಹೆಕ್ಟೇರ್‌ಗೆ ₹ 18ಸಾವಿರ ಪರಿಹಾರ ನೀಡಲಾಗುವುದು ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT