ಬುಧವಾರ, ಆಗಸ್ಟ್ 10, 2022
24 °C
ಹತ್ತಾರು ನದಿ, ಕೆರೆಗಳಿರುವ ಜಿಲ್ಲೆಯ ಬೇಸಿಗೆಯಲ್ಲಿ ವಿವಿಧೆಡೆ ನೀರಿಗೆ ಸಮಸ್ಯೆ

ಕಾರವಾರ: ಜಲಮೂಲ ಇದ್ದರೂ ತಪ್ಪದ ಬವಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಕೆರೆ

ಕಾರವಾರ: ಮಳೆಗಾಲದಲ್ಲಿ ಎಲ್ಲೆಲ್ಲೂ ನೀರು, ಬೇಸಿಗೆಯಲ್ಲಿ ವಿವಿಧೆಡೆ ಮತ್ತದೇ ಹಾಹಾಕಾರ. ಕಾಡಿನಿಂದ ಕೂಡಿರುವ, ಹೆಚ್ಚು ಮಳೆ ಸುರಿಯುವ ಜಿಲ್ಲೆಯಲ್ಲಿ ಹತ್ತಾರು ಜಲಮೂಲಗಳಿವೆ. ಆದರೆ, ಮಾರ್ಚ್‌ ನಂತರ ಹಲವೆಡೆ ನೀರಿನ ಸಮಸ್ಯೆ ಗಂಭೀರವಾಗುತ್ತದೆ.

ಜೂನ್‌ ನಂತರ ಉಕ್ಕಿ ಹರಿಯುವ ನದಿ, ಹೊಳೆಗಳಲ್ಲಿ ಮಳೆ ನಿಂತು ಕೆಲವೇ ದಿನಗಳಲ್ಲಿ ನೀರಿನ ಹರಿವು ಕನಿಷ್ಠ ಮಟ್ಟಕ್ಕೆ ಇಳಿಯುತ್ತದೆ. ಜಿಲ್ಲೆಯ ಮಣ್ಣಿನ ರಚನೆ ಇದಕ್ಕೆ ಮುಖ್ಯ ಕಾರಣವಾದರೆ, ವಿವೇಚನಾ ರಹಿತ ಬಳಕೆಯೂ ಅಷ್ಟೇ ಹೊಣೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಕೆರೆಗಳ ಅಭಿವೃದ್ಧಿ:

ಹಳಿಯಾಳ ತಾಲ್ಲೂಕಿನಲ್ಲಿ ಮೂರು ವರ್ಷಗಳ ಹಿಂದೆ ಭೀಕರ ಬರಗಾಲ ಉಂಟಾಗಿತ್ತು. ಇದರಿಂದ, ತಾಲ್ಲೂಕಿನ ಬಹುತೇಕ ಕೆರೆಗಳು ಒಣಗಿ ಅಂತರ್ಜಲಮಟ್ಟವು ಗಣನೀಯವಾಗಿ ಕಡಿಮೆಯಾಗಿತ್ತು. ಕೊಳವೆಬಾವಿಗಳು ಸಹ ಬರಿದಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗಿತ್ತು.

ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಅವರು ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ವಿವಿಧ ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆಯ (ಸಿ.ಎಸ್.ಆರ್) ನಿಧಿ ಬಳಕೆ ಮಾಡಿಕೊಂಡು ಜಲಮೂಲಗಳ ಸಂರಕ್ಷಣೆ ಕಾರ್ಯ ಮಾಡಿದರು. 120ಕ್ಕೂ ಅಧಿಕ ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸಿದರು. ಎರಡು ವರ್ಷಗಳಿಂದ ಉತ್ತಮ ಮಳೆಯ ಪರಿಣಾಮ ಕೆರೆಗಳು ಭರ್ತಿ ಯಾಗಿವೆ. ಕೊಳವೆ ಬಾವಿಗಳಲ್ಲೂ ನೀರು ಸಾಕಷ್ಟು ಪ್ರಮಾಣ ದಲ್ಲಿದೆ.

ಪಟ್ಟಣದ ಗುತ್ತಿಗೇರಿ ಹತ್ತಿರ ಪಾಳುಬಿದ್ದ 15 ಎಕರೆ ವಿಸ್ತೀರ್ಣದ ಕೆರೆಯಿಂದ ಸುಮಾರು 70 ಸಾವಿರ ಕ್ಯೂಬಿಕ್ ಹೂಳನ್ನು ತೆಗೆಯಲಾಗಿದೆ. ಈಗ 65 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆಗೆ ಪ್ರಶಸ್ತವಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಸುಮಾರು ₹ 1.95 ಕೋಟಿ ಮೊತ್ತದಲ್ಲಿ ಕೆರೆಯ ಸುತ್ತಮುತ್ತ ಸಂಪೂರ್ಣ ಅಭಿವೃದ್ಧಿ ಮಾಡಲಾಗಿದೆ.

ಅಧಿಕೃತವಾಗಿ ಎರಡು ಕೆರೆ ಒತ್ತುವರಿ!

ಹೊನ್ನಾವರ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯ ದಾಖಲೆಯಲ್ಲೇ 107 ಕೆರೆಗಳಿವೆ. ಅವುಗಳ ಒಟ್ಟೂ ವಿಸ್ತೀರ್ಣ ಸುಮಾರು 75 ಎಕರೆ ಇದೆ. ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯ ಕೆರೆಗಳನ್ನು ಗಣನೆಗೆ ತೆಗೆದುಕೊಂಡರೆ ಇವುಗಳ ಸಂಖ್ಯೆ ದುಪ್ಪಟ್ಟಾಗುತ್ತದೆ.

ಕೇವಲ ಎರಡು ಕೆರೆಗಳು ಅಧಿಕೃತವಾಗಿ ಒತ್ತುವರಿಯಾಗಿದ್ದರೆ, ಅನಧಿಕೃತವಾಗಿ ಹಲವಾರು ಕೆರೆಗಳು ಜನರ ದುರಾಸೆಗೆ ಬಲಿಯಾಗಿವೆ. 39 ಎಕರೆ ವಿಸ್ತೀರ್ಣವಾಗಿರುವ ಅರೆಸಾಮಿ ಕೆರೆಯನ್ನು ಅಭಿವೃದ್ಧಿ ಪಡಿಸುವುದಾಗಿ ಅರಣ್ಯ ಇಲಾಖೆ ಸಲ್ಲಿಸಿದ ಪ್ರಸ್ತಾವಕ್ಕೆ ಮನ್ನಣೆ ಸಿಕ್ಕಿಲ್ಲ. ಕೆರೆಯು ವಾಹನ ತೊಳೆಯುವ, ತ್ಯಾಜ್ಯ ತುಂಬುವ ತೊಟ್ಟಿಯಾಗಿ ಮಾರ್ಪಟ್ಟಿದೆ. ಕೆರೆ ಅಭಿವೃದ್ಧಿ ಸಮಿತಿಯ ಕೂಗು ಅರಣ್ಯರೋದನವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ವಿಶಾಲವಾದ ಶೆಟ್ಟಿ ಕೆರೆ ಕೂಡ ಸುತ್ತಲಿನ ಮಲಿನ ನೀರು ಹೋಗುವ ಹಾಗೂ ತ್ಯಾಜ್ಯ ಸುರಿಯುವ ಜಾಗವಾಗಿದೆ.

‘ಪ್ರಭಾತನಗರ ಸೇರಿದಂತೆ ಪಟ್ಟಣದ ಕೆಲವೆಡೆ ಬಾವಿಗಳನ್ನು ಸ್ವಚ್ಛ ಮಾಡುವ ಬದಲು ಅವುಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ನೀರು ಸಂಗ್ರಹಣೆ ಮಾಡುವ ಪರಿಸರ ಪ್ರಜ್ಞೆ ನಮ್ಮಲ್ಲಿಲ್ಲ’ ಎಂದು ಪ್ರೊ.ಜಿ.ಎಸ್.ಹೆಗಡೆ ಆತಂಕ ವ್ಯಕ್ತಪಡಿಸುತ್ತಾರೆ.

ಕೆರೆಗಳು ಭರ್ತಿ:

ಸಿದ್ದಾಪುರ ತಾಲ್ಲೂಕಿನ ಮೂರೂ ದೊಡ್ಡ ಕೆರೆಗಳು (ಕಾನಗೋಡು ಕೆರೆ, ಅವರಗುಪ್ಪ ಕೆರೆ ಮತ್ತು ಹುಸೂರು ಕೆರೆ) ಈ ವರ್ಷದ ಉತ್ತಮ ಮಳೆಯಿಂದ ಸಂಪೂರ್ಣ ತುಂಬಿವೆ.

‘ಈ ವರ್ಷದ ಮಳೆಗಾಲದಲ್ಲಿ ತುಂಬಿದ್ದ ಕೆರೆಗಳಲ್ಲಿ ಈಗ ಶೇ 90ರಷ್ಟು ನೀರು ಇದೆ. ಈ ಕೆರೆಗಳ ಒಟ್ಟಾರೆ ಸ್ಥಿತಿ ಚೆನ್ನಾಗಿದೆ. ಆದ್ದರಿಂದ ಇವುಗಳ ಅಭಿವೃದ್ಧಿಗೆ ಈ ವರ್ಷ ನಾವು ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಈ ಕೆರೆಗಳ ನೀರು ಕೃಷಿಗೆ ಬಳಕೆಯಾಗುತ್ತದೆ’ ಎಂದು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿ ಗಾಂವಕರ್‌ ವಿವರ ನೀಡಿದರು.

‘ಈ ಬಾರಿಯ ಮಳೆಯಿಂದ ಕೆರೆ ತುಂಬಿ, ಅಂತರ್ಜಲ ಮಟ್ಟ ಹೆಚ್ಚಾಗಿ, ಸಮೀಪವಿರುವ ಅಡಿಕೆ ತೋಟಗಳಿಗೆ ಅನುಕೂಲ ಆಗಿರಬಹುದು. ಆದರೆ, ಈ ಕೆರೆಗಳ ನೀರನ್ನೇ ಹರಿಸಿ, ಅಡಿಕೆ ಅಥವಾ ಬೇಸಿಗೆ ಭತ್ತದ ಬೆಳೆ ಪಡೆಯುವವರಂತೂ ಇಲ್ಲ‌’ ಎಂಬುದು ತಾಲ್ಲೂಕಿನ ರೈತರೊಬ್ಬರ ಅಭಿಪ್ರಾಯಪಟ್ಟರು.

ಜಲಮೂಲವಾದ ಗ್ರಾಮ ಅರಣ್ಯ:

ಕುಮಟಾದ ಹಳಕಾರ ಗ್ರಾಮ ಅರಣ್ಯದಲ್ಲಿರುವ 34 ಹೆಕ್ಟೇರ್ ಪ್ರದೇಶದ ಹಳೆಯ ಚಿರೆಕಲ್ಲು ಹೊಂಡ ಈಗ ಜಲಮೂಲವಾಗಿದೆ.

ಈ ಹಿಂದೆ ಇಲ್ಲಿ ಕೆಂಪು ಕಲ್ಲು ತೆಗೆದ ಕ್ವಾರಿಗಳಿಗೆ ಮಣ್ಣು ತುಂಬದೆ ಬಿಡಲಾಗಿದೆ. ಮಳೆಗಾಲದಲ್ಲಿ ಅದರೊಳಗೆ ತುಂಬಿದ ನೀರು ಜನವರಿವರೆಗೂ ಇರುತ್ತದೆ. ಬೇಸಿಗೆಯಲ್ಲಿ ಅರಣ್ಯದಲ್ಲಿರುವ ಪ್ರಾಣಿ, ಪಕ್ಷಿಗಳ ದಾಹ ನೀಗಿಸುತ್ತದೆ.

‘ಸುಮಾರು 100 ಅಡಿ ಅಗಲ, 200 ಅಡಿ ಉದ್ದದ ಕಲ್ಲು ಹೊಂಡವಿದೆ. ಅದರಲ್ಲಿ ನೀರು ಇಂಗಲಿ ಎಂಬ ಕಾರಣಕ್ಕೇ ಸಂರಕ್ಷಿಸಿಡಲಾಗಿದೆ. ಸಮೀಪದ ವಿವೇಕನಗರ, ಹಳಕಾರ, ಕೈಗಾರಿಕಾ ಪ್ರದೇಶದ ಬಾವಿಗಳ ಕುಡಿಯುವ ನೀರಿನ ಹೆಚ್ಚಳಕ್ಕೂ ಕಾರಣವಾಗಿದೆ’ ಎಂದು ಗ್ರಾಮ ಅರಣ್ಯದ ಅಧ್ಯಕ್ಷ ನಾಗರಾಜ ಭಟ್ಟ ತಿಳಿಸುತ್ತಾರೆ.

‘ಸಮಸ್ಯೆ ಮಾನವ ಸೃಷ್ಟಿ’:

‘ನೀರಿನ ಸಮಸ್ಯೆ ಅದಾಗಿ ಉಂಟಾಗುವುದಿಲ್ಲ. ನಾವೇ ಸೃಷ್ಟಿಸಿಕೊಳ್ಳುತ್ತೇವೆ’ ಎನ್ನುವುದು ಹಿರಿಯ ಭೂ ವಿಜ್ಞಾನಿ ಡಾ.ಎಂ.ದಿನಕರ ಶೆಟ್ಟಿ ಅವರ ಅಭಿಮತ.

‘ಹಿಂಗಾರು ಮಳೆ ಕಡಿಮೆಯಾದಾಗ ನೀರಿನ ಕೊರತೆಯಾಗುತ್ತದೆ. ಕರಾವಳಿ ಭಾಗದಲ್ಲಿರುವ ಲ್ಯಾಟರೈಟ್ (ಕೆಂಪುಕಲ್ಲು) ಮಿಶ್ರಿತ ಮಣ್ಣು ಎಷ್ಟು ಬೇಗ ನೀರನ್ನು ಹೀರುತ್ತದೋ ಅಷ್ಟೇ ಬೇಗ ಬಿಡುತ್ತದೆ. ಇಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಬರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಜಲಮೂಲಗಳ ಮರು‍ಪೂರಣವಾಗಬೇಕು’ ಎಂದು ವಿವರಿಸುತ್ತಾರೆ.

‘ಕೆಲವು ವರ್ಷಗಳ ಹಿಂದೆ ಕೃಷಿ ಸಲುವಾಗಿ ತೋಡುಗಳಿಗೆ ಚಿಕ್ಕ ಕಟ್ಟುಗಳನ್ನು ಹಾಕುತ್ತಿದ್ದರು. ಇದರಿಂದ ಬೇಸಿಗೆಯಲ್ಲಿ ನೀರು ಇಂಗುತ್ತಿತ್ತು. ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚುತ್ತಿತ್ತು. ಆದರೆ, ಈಗ ಅಂತಹ ಕೆಲಸಗಳಾಗುತ್ತಿಲ್ಲ. ನೀರು ಇಂಗುವ ಜಾಗದಲ್ಲಿ ಕಾಂಕ್ರೀಟ್ ಹಾಕಿದ್ದೇವೆ. ನೀರಿನ ಮೂಲಗಳನ್ನು ಮುಚ್ಚಿದ್ದೇವೆ. ಇದರಿಂದ ಸಮಸ್ಯೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ.

* ನೀರಿನ ಬಳಕೆಗಿಂತ ನಿರ್ವಹಣೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನೀರಿಗೆ ಪರ್ಯಾಯವೆಂದರೆ ನೀರೇ ಹೊರತು ಬೇರೆ ಸಿಗದು. ಇದನ್ನು ಅರಿತರೆ ಸಮಸ್ಯೆಯಾಗುವುದಿಲ್ಲ.

– ಡಾ.ಎಂ.ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ

ಜಿಲ್ಲೆಯಲ್ಲಿ ನೀರು ನೆಲಮಟ್ಟದಿಂದ ಇಷ್ಟು ಆಳದಲ್ಲಿದೆ

ಮೇ (ಬೇಸಿಗೆ);8.66 ಮೀಟರ್

ಅಕ್ಟೋಬರ್ (ಮಳೆಗಾಲ);4.01 ಮೀಟರ್

* ಸರಾಸರಿ ಅಳತೆ

ಜಿಲ್ಲೆಯಾದ್ಯಂತ ಈ ವರ್ಷದ ಅಂತರ್ಜಲಮಟ್ಟ (ಮೀಟರ್‌ಗಳಲ್ಲಿ)

ತಾಲ್ಲೂಕು;ಮೇ;ಅಕ್ಟೋಬರ್‌

ಅಂಕೋಲಾ;9.90;3.40

ಭಟ್ಕಳ;6.02;2.75

ಹಳಿಯಾಳ;13.43;3.28

ಹೊನ್ನಾವರ;8.85;6.15

ಕಾರವಾರ;5.12;1.47

ಕುಮಟಾ;7.45;3.69

ಮುಂಡಗೋಡ;7.05;2.49

ಸಿದ್ದಾಪುರ;10.20;8.42

ಶಿರಸಿ;8.02;5.38

ಜೊಯಿಡಾ;7.06;2.70

ಯಲ್ಲಾಪುರ;12.18;6.53

ದಾಂಡೇಲಿ;––;1.91

* ಆಧಾರ: ಜಿಲ್ಲಾ ಅಂತರ್ಜಲ ಕಚೇರಿ

––––––––––

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ರವೀಂದ್ರ ಭಟ್ ಬಳಗುಳಿ, ಎಂ.ಜಿ.ನಾಯ್ಕ,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು