ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರ ಖುಷಿ ಕಸಿದ ಮಳೆ

ಸಂಕಷ್ಟದಲ್ಲಿ ಭತ್ತ ಬೆಳೆಗಾರರು; ಆತಂಕದಲ್ಲಿ ಅಡಿಕೆ ಕೃಷಿಕರು
Last Updated 18 ಜುಲೈ 2019, 6:36 IST
ಅಕ್ಷರ ಗಾತ್ರ

ಶಿರಸಿ: ಈ ಬಾರಿಯ ಮಳೆಗಾಲ ರೈತರ ಖುಷಿಯನ್ನು ಬಹುಬೇಗ ಕಸಿದುಕೊಂಡಿದೆ. ಅಡಿಕೆ ಬೆಳೆಗಾರರಿಗೆ ಕೊಳೆರೋಗದ ಕಾಟವಾದರೆ, ಭತ್ತ ಕೃಷಿಕರಿಗೆ ಜೀವನೋಪಾಯದ ಬಗ್ಗೆ ಚಿಂತಿತರಾಗಿದ್ದಾರೆ.

ಜುಲೈ ಅರ್ಧ ತಿಂಗಳು ಕಳೆದರೂ ಬನವಾಸಿ ಹೋಬಳಿಯ ಸಾವಿರಾರು ಎಕರೆ ಕೃಷಿ ಭೂಮಿ ಉಳುಮೆ ಮಾಡದೇ ಕಳೆ ತುಂಬಿಕೊಂಡಿದೆ. ಬನವಾಸಿ ಹೋಬಳಿಯಲ್ಲಿ ಜುಲೈ 16ರವರೆಗೆ 608 ಮಿ.ಮೀ ಮಳೆಯಾಗಿದೆ. ವಾಡಿಕೆ ಮಳೆಗಿಂತ (854 ಮಿ.ಮೀ) ಶೇ 29ರಷ್ಟು ಮಳೆ ಕಡಿಮೆಯಾಗಿದೆ.

‘ಎಲ್ಲ ಕಡೆ ಮಳೆಯಾಗಿದ್ದರೂ ನಮ್ಮ ಭಾಗದಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಭತ್ತ ನಾಟಿ ಮಾಡಲು ಗದ್ದೆಯಲ್ಲಿ ನೀರು ಇಲ್ಲ. ನೀರಿನ ಕೊರತೆಯಿಂದ ಅನೇಕ ರೈತರು ಗದ್ದೆಯನ್ನು ಹದಗೊಳಿಸದೇ ಹಾಗೆಯೇ ಬಿಟ್ಟಿದ್ದಾರೆ. ಬೋರ್‌ವೆಲ್‌ ಇದ್ದವರು ಅಗೆಮಡಿ ಸಿದ್ಧಪಡಿಸಿದ್ದಾರೆ. ಅಗೆಮಡಿ ನಾಟಿಗೆ ಸಿದ್ಧವಾಗಿದೆ. ಆದರೆ, ನಾಟಿ ಮಾಡಲು ಮಳೆ ಬರುವುದನ್ನು ಕಾಯುತ್ತಿದ್ದಾರೆ’ ಎನ್ನುತ್ತಾರೆ ಕೃಷಿಕ ಸಂತೋಷ ಕಲಕರಡಿ.

‘ಭತ್ತ ಬೆಳೆಗಾರರ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲೂ ಭತ್ತವನ್ನೇ ನಂಬಿರುವ ಸಣ್ಣ ಹಿಡುವಳಿದಾರರು ದಿಕ್ಕು ತೋಚದಂತಾಗಿದ್ದಾರೆ. ಮಳೆಯಾದರೆ ಮಾತ್ರ ಉಳುಮೆ ಮಾಡಬಹುದು. ಇಲ್ಲವಾದರೆ, ಭೂಮಿಯನ್ನು ಪಾಳು ಬಿಡುವುದು ಅನಿವಾರ್ಯ’ ಎನ್ನುತ್ತಾರೆ ಅವರು.

ಅಡಿಕೆಯದು ಇನ್ನೊಂದು ಸಮಸ್ಯೆ:

ಈ ಬಾರಿಯ ಬಿಸಿಲು–ಮಳೆಯ ಆಟಕ್ಕೆ ಅಡಿಕೆ ಬೆಳೆಗಾರರು ತಲೆಕೆಡಿಸಿಕೊಳ್ಳುವಂತಾಗಿದೆ. ಎಡೆಬಿಡದೇ ಮಳೆ ಸುರಿದಾಗ ಕಾಣಿಸಿಕೊಳ್ಳುತ್ತಿದ್ದ ಕೊಳೆ ರೋಗ, ಮಳೆ ಕಡಿಮೆಯಿದ್ದರೂ ಅಡಿಕೆ ತೋಟವನ್ನು ಆವರಿಸಿದೆ.

ಈ ಬಾರಿಯ ವಾತಾವರಣಕ್ಕೆ ತಾಲ್ಲೂಕಿನ ಭೈರುಂಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಳಗೋಳ, ಪಶ್ಚಿಮ ಭಾಗದ ಮೇಲಿನ ಓಣಿಕೇರಿ, ಮುರೇಗಾರ, ವಾನಳ್ಳಿ, ಮುಷ್ಕಿ, ಹೆಗಡೆಕಟ್ಟಾ, ಮತ್ತಿಘಟ್ಟ, ದೇವನಳ್ಳಿ ಪ್ರದೇಶದ ಅಡಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಿಸುತ್ತಿದೆ. 'ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ ಕೊಳೆ ರೋಗದಿಂದ ಮುಕ್ತಿ ಸಿಗುತ್ತಿಲ್ಲ. ಈ ಬಾರಿ ಇಳುವರಿ ಕಡಿಮೆಯಿದೆ. ಇರುವ ಅಡಿಕೆಯೂ ಕೊಳೆಯಿಂದ ಉದುರುತ್ತಿದೆ’ ಎನ್ನುತ್ತಾರೆ ಬೆಳೆಗಾರ ಸುಬ್ರಾಯ ಹೆಗಡೆ.

‘ಈ ವರ್ಷ ಕಳೆದ ವರ್ಷದಷ್ಟು ಮಳೆಯಾಗಿಲ್ಲ. ಕೊಳೆರೋಗದ ಮುನ್ನೆಚ್ಚರಿಕೆಯಾಗಿ ಬೋರ್ಡೊ ದ್ರಾವಣ ಸಿಂಪರಣೆ ಮಾಡಲಾಗಿದೆ. ಆದರೂ, ಅಡಿಕೆಗೆ ರೋಗ ಬಂದು ಉದುರುತ್ತಿದೆ’ ಎನ್ನುತ್ತಾರೆ ಕೃಷಿಕ ಪ್ರವೀಣ ಹೆಗಡೆ. ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ವಿ.ಎಂ.ಹೆಗಡೆ ತೋಟಕ್ಕೆ ಭೇಟಿ ನೀಡಿ, ರೋಗ ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT