ಶುಕ್ರವಾರ, ಸೆಪ್ಟೆಂಬರ್ 24, 2021
26 °C

ದೀವಗಿ ಮಠದ ರಾಮಾನಂದ ಅವಧೂತರು ದೈವಾಧೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ವರದಹಳ್ಳಿಯ ಶ್ರೀಧರ ಸ್ವಾಮೀಜಿ ಅವರ ಶಿಷ್ಯರಲ್ಲಿ ಒಬ್ಬರಾಗಿ ಅಧ್ಯಾತ್ಮ, ಸರಳತೆಯ ಮೂಲಕ ತಾಲ್ಲೂಕು ಹಾಗೂ ಸುತ್ತಮುತ್ತ ಪ್ರಸಿದ್ಧರಾಗಿದ್ದ ರಾಮಾನಂದ ಸ್ವಾಮೀಜಿ (98) ಶನಿವಾರ ರಾತ್ರಿ ದೈವಾಧೀನರಾದರು.

‘ದೀವಗಿ ಮಠದ ಸ್ವಾಮೀಜಿ’ ಎಂದೇ ಪರಿಚಿತರಾಗಿದ್ದ ಅವರು, ಶಿರಸಿ ತಾಲ್ಲೂಕಿನ ತಟ್ಟಿಕೈ ಗ್ರಾಮದ ನಾರಾಯಣ ಹೆಗಡೆ ಹಾಗೂ ಲಕ್ಷ್ಮೀ ಹೆಗಡೆ ದಂಪತಿ ಪುತ್ರ. ಪೂರ್ವಾಶ್ರಮದಲ್ಲಿ  ಅವರ ಹೆಸರು ರಾಮಚಂದ್ರ ಹೆಗಡೆ. ಸ್ಥಳೀಯ ಸರಕುಳಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು.

ಓದಿಗಿಂತ ಭಗವದ್ಗೀತೆ, ಪುರಾಣ, ಭಜನೆ, ಕೀರ್ತನೆಗಳತ್ತ ಹೆಚ್ಚು ಆಕರ್ಷಿತರಾಗಿದ್ದರು. ತಮ್ಮ 22ನೇ ವಯಸ್ಸಿನಲ್ಲಿ ಸಹಜಾನಂದ ಅವಧೂತ ಸ್ವಾಮೀಜಿ ಅವರು ರಾಮಚಂದ್ರ ಅವರಿಗೆ ಸನ್ಯಾಸ ದೀಕ್ಷೆ ನೀಡಿದರು. ಅಲ್ಲಿಂದ ಅವರು ‘ರಾಮಾನಂದ ಅವಧೂತ’ ಎಂದು ಭಕ್ತ ವಲಯದಲ್ಲಿ ಪ್ರಸಿದ್ಧರಾದರು. ಶ್ರೀಧರ ಸ್ವಾಮೀಜಿ ಅವರೊಂದಿಗೆ ಒಡನಾಟ ಹೊಂದಿ ಅವರ ಪ್ರೀತಿಯ ಶಿಷ್ಯರಾದರು.

‘ಅಘನಾಶಿನಿ ನದಿಗೆ ದೀವಗಿ ಬಳಿ ಹಿಂದೆ ಸೇತುವೆ ನಿರ್ಮಿಸುವಾಗ ಸಿಕ್ಕ ಆಂಜನೇಯ ಮೂರ್ತಿಯನ್ನು ಸ್ವಾಮೀಜಿ ದೀವಗಿಯಲ್ಲಿ ಸ್ಥಾಪಿಸಿದರು. ಅಲ್ಲಿಯೇ ಪುಟ್ಟ ಆಶ್ರಮ ಕಟ್ಟಿದರು. ಶ್ರೀಗಳ ಸರಳತೆ, ಪ್ರೀತಿಯಿಂದ ದಿನೇ ದಿನೇ ಅಶ್ರಮಕ್ಕೆ ಹಾಗೂ ಅವರು ಸ್ಥಾಪಿಸಿದ್ದ ಆಂಜನೇಯ ಗುಡಿಗೆ ಬರುವವರ ಸಂಖ್ಯೆ ಇಮ್ಮಡಿಸಿತು’ ಎಂದು ಶ್ರೀ ರಾಮಾನಂದ ಅವಧೂತ ಟ್ರಸ್ಟ್ ಉಪಾಧ್ಯಕ್ಷ ಡಾ.ಪ್ರಕಾಶ ಪಂಡಿತ ಮಾಹಿತಿ ನೀಡಿದರು.

‘ಅನಾರೋಗ್ಯದಿಂದಾಗಿ ಶ್ರೀಗಳು ಕೆಲವು ವರ್ಷಗಳಿಂದ ಗಾಲಿ ಕುರ್ಚಿಯಲ್ಲಿ ಸಂಚರಿಸುತ್ತಿದ್ದರು. ಟ್ರಸ್ಟ್ ಸ್ಥಾಪನೆಯಾದ ಬಳಿಕ ನಿತ್ಯವೂ ಆಶ್ರಮದಲ್ಲಿ ಅನ್ನ ದಾಸೋಹ ನಡೆಯುತ್ತಿದೆ. ಸುತ್ತಲಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಕೊಡೆ, ಪುಸ್ತಕ, ಸ್ಕೂಲ್ ಬ್ಯಾಗ್ ಮುಂತಾದವುಗಳನ್ನು ಟ್ರಸ್ಟ್ ನೀಡುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಶ್ರೀಗಳು ಅನಾರೋಗ್ಯವಿದ್ದರೂ ಪಾಲ್ಗೊಳ್ಳುತ್ತಿದ್ದರು. ಜೀವನದುದ್ದಕ್ಕೂ ಸರಳತೆಯನ್ನು ಪಾಲಿಸಿಕೊಂಡು ಬಂದಿದ್ದ ಅವರ ಪಾರ್ಥಿವ ಶರೀರವನ್ನು ಆಶ್ರಮ ಆವರಣದ ಒಳಗೆ ಸಮಾಧಿ ಮಾಡುವ ನಿರ್ಣಯ ಕೈಕೊಳ್ಳಲಾಗಿದೆ’ ಎಂದರು.

ಶಾಸಕ ದಿನಕರ ಶೆಟ್ಟಿ, ಡಾ.ಜಿ.ಜಿ.ಹೆಗಡೆ ಮುಂತಾದ ಗಣ್ಯರು ಹಾಗೂ ನೂರಾರು ಭಕ್ತರು ಭಾನುವಾರ ಸ್ವಾಮೀಜಿಯ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು