ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ದಾಖಲೆ ಕೇಳುವುದನ್ನು ಬಿಡಿಲಿ: ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್

ವನವಾಸಿಗಳ ಜತೆ ಸಂವಾದ ಕಾರ್ಯಕ್ರಮ
Last Updated 13 ಮೇ 2019, 12:46 IST
ಅಕ್ಷರ ಗಾತ್ರ

ಶಿರಸಿ: ‘ಅರಣ್ಯದಲ್ಲಿ 75 ವರ್ಷ ವಾಸವಿರುವ ಬಗ್ಗೆ ದಾಖಲೆ ಮೂಲಕ ರುಜುವಾತುಪಡಿಸಬೇಕೆಂಬ ಉಲ್ಲೇಖ 2006ರ ಅರಣ್ಯ ಹಕ್ಕು ಕಾಯ್ದೆಯಲ್ಲಿ ಎಲ್ಲೂ ಇಲ್ಲ. ದಾಖಲೀಕರಿಸುವ ಪ್ರಕ್ರಿಯೆ ಆರಂಭವಾಗುವುದಕ್ಕೂ ಪೂರ್ವದ ದಾಖಲೆಗಳನ್ನು ವನವಾಸಿಗಳು ಎಲ್ಲಿಂದ ಸಲ್ಲಿಸಬೇಕು ? ಅಧಿಕಾರಿಗಳು ದಾಖಲೆ ಕೇಳುವುದನ್ನು ಮೊದಲು ಬಿಡಲಿ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಗ್ರಹಿಸಿದರು.

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಸೋಮವಾರ ಇಲ್ಲಿ ಆಯೋಜಿಸಿದ್ದ ವನವಾಸಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 75 ವರ್ಷ ಅರಣ್ಯದಲ್ಲಿ ವಾಸಿಸುವ ಸಂಬಂಧ ದಾಖಲೆ ಸಲ್ಲಿಸುವುದು ಕಡ್ಡಾಯವಲ್ಲ ಎಂಬ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿ, ಸ್ಪಷ್ಟೀಕರಿಸಿದೆ. ಎಲ್ಲವನ್ನೂ ದಾಖಲೆ ಮೂಲಕ ರುಜುವಾತುಪಡಿಸಲು ಸಾಧ್ಯವಿಲ್ಲ. ತೀರಾ ಅಗತ್ಯವಿದ್ದಲ್ಲಿ ಊರಿನ ಹಿರಿಯರ ಹೇಳಿಕೆ ಪಡೆಯಬಹುದು. ಅಧಿಕಾರಿಗಳು ಮನಸ್ಸು ಬದಲಾಯಿಸಿ, ಸಾಮಾಜಿಕ ನ್ಯಾಯದೆಡೆಗೆ ಯೋಚಿಸಬೇಕು ಎಂದು ಸಲಹೆ ಮಾಡಿದರು.

ಅರಣ್ಯದಲ್ಲಿ ಹುಟ್ಟಿ ಬೆಳೆದಿರುವವರಿಗೆ ಬದುಕನ್ನು ಕಲ್ಪಿಸುವ ಉದ್ದೇಶದಿಂದ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಕಾಯ್ದೆಯ ಉದ್ದೇಶ ತಿಳಿಯದೇ ಸ್ವೇಚ್ಛೆಯಿಂದ ವರ್ತಿಸುತ್ತಿದ್ದಾರೆ. ಹೀಗಾಗಿ ಅರಣ್ಯ ಅಧಿಕಾರಿಗಳಿಗೆ ಕಾನೂನಿನ ಉದ್ದೇಶ ತಿಳಿಸುವ ಕಾರ್ಯವಾಗಬೇಕು. ಅರಣ್ಯವಾಸಿಗಳು ಎಂದಿಗೂ ಕಾಡನ್ನು ಕಬಳಿಸಲು ಯತ್ನಿಸಿದವರಲ್ಲ. ಜೀವನಕ್ಕಾಗಿ ಕಾಡಿನಲ್ಲಿ ನೆಲೆ ಕಂಡುಕೊಂಡವರು. ಶಿಕ್ಷಣ, ನಾಗರಿಕ ಸೌಕರ್ಯ ವಂಚಿತ ವನವಾಸಿಗಳಿಗೆ ನ್ಯಾಯ ಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಾಡಿನ ನಾಶಕ್ಕೆ ಅಲ್ಲಿನ ಮೂಲವಾಸಿಗಳು ಕಾರಣರಲ್ಲ. ಗಣಿಗಾರಿಕೆ, ಅರಣ್ಯ ಅವಲಂಬಿತ ಉದ್ದಿಮೆ, ಕಾಡುಗಳ್ಳರ ಹಾವಳಿ, ರಸ್ತೆ, ಅಣೆಕಟ್ಟು ನಿರ್ಮಾಣಕ್ಕೆ ಕಾಡು ನಾಶವಾಗಿದೆ. ಅರಣ್ಯಕ್ಕೆ ವ್ಯಾಪಕ ಬೆಂಕಿ ಬಿದ್ದರೂ, ಅದರ ತಡೆಗೆ ಯೋಚನೆಗಳು ನಡೆಯುತ್ತಿಲ್ಲ. ಎಲ್ಲ ರೀತಿಯ ಅರಣ್ಯನಾಶಕ್ಕೆ ಅರಣ್ಯವಾಸಿಗಳೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಇವುಗಳ ಬಗ್ಗೆ ಗಮನ ಹರಿಸದೇ ಬಡ ವನವಾಸಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ ಎಂದು ನಾಗಮೋಹನದಾಸ್ ಹೇಳಿದರು.

ಪ್ರಮುಖರಾದ ಭೀಮ್ಸಿ ವಾಲ್ಮೀಕಿ, ನರಹರಿ ಶಾಸ್ತ್ರಿ, ನಾಗು ಗೌಡ, ಮೋಹಿನಿ ಪೂಜಾರಿ ಇದ್ದರು. ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT