ಶುಕ್ರವಾರ, ಆಗಸ್ಟ್ 6, 2021
25 °C
ಮಳೆಗಾಲದಲ್ಲಿ ಕೊಳೆ ರೋಗ ಬರದಂತೆ ಅಡಿಕೆ ಬೆಳೆ ರಕ್ಷಣೆಗೆ ಸುರಕ್ಷಾ ಕ್ರಮ

ಮದ್ದು ಸಿಂಪರಣೆಗೆ ಸಿಗುತ್ತಿಲ್ಲ ಕೊನೆಗೌಡ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಳೆದ ವರ್ಷ ಅತಿವೃಷ್ಟಿಯಿಂದ ಅಡಿಕೆ ಕೊಳೆರೋಗ ಬಂದು ಬೆಳೆ ಕಳೆದುಕೊಂಡಿದ್ದ ಬೆಳೆಗಾರರು ಈ ಬಾರಿ ಮುಂಜಾಗ್ರತೆಯಾಗಿ ಔಷಧ ಸಿಂಪರಣೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ, ಔಷಧ ಸಿಂಪರಣೆಗೆ ಪರಿಣಿತಿ ಹೊಂದಿರುವ ಕೊನೆಗೌಡರ ಅಭಾವ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಸಿಂಪರಣೆಗೂ ಅವಕಾಶ ನೀಡದೇ ಒಂದೇಸವನೆ ಮಳೆ ಸುರಿದಿತ್ತು. ಪರಿಣಾಮವಾಗಿ ಅಡಿಕೆಗೆ ಕೊಳೆರೋಗ ಬಂದು, ರೈತರು ಶೇ 30ರಿಂದ 50ರಷ್ಟು ಬೆಳೆ ಕಳೆದುಕೊಂಡಿದ್ದರು. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಇದರಿಂದ ತೀವ್ರ ನಷ್ಟವಾಗಿತ್ತು. ಪ್ರತಿವರ್ಷದ ಕ್ರಮದಂತೆ ರೈತರು ಈ ಬಾರಿ ಮುಂಗಾರಿಗೆ ಮುಂಚೆ ಮುದ್ದು ಸಿಂಪರಣೆಗೆ ತಯಾರಿ ನಡೆಸಿದ್ದಾರೆ. ಆದರೆ, ಮರ ಹತ್ತಿ ಮದ್ದು ಹೊಡೆಯಲು ಸಕಾಲಕ್ಕೆ ಕೊನೆಗೌಡರು ಸಿಗುತ್ತಿಲ್ಲ.

ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಸುಮಾರು 18,000 ಹೆಕ್ಟೇರ್‌ನಲ್ಲಿ ಅಡಕೆ ಕೃಷಿ ಮಾಡಲಾಗುತ್ತಿದೆ. ಶೇ 25ರಷ್ಟು ಅಡಿಕೆ ಬೆಳೆಗಾರರು ಮಳೆಗಾಲದ ಎದುರಿನಲ್ಲಿ ಬಯೋಫೈಟ್ ಸಿಂಪಡಿಸಿದರೆ, ಇನ್ನುಳಿದ ಬೆಳೆಗಾರರು ಮೈಲುತುತ್ತ, ಸುಣ್ಣದ ಮಿಶ್ರಣದ ಬೋರ್ಡೊ ದ್ರಾವಣ ಸಿಂಪರಣೆ ಮಾಡುತ್ತಾರೆ. ಒಂದೆರಡು ಮಳೆಯಾದ ನಂತರ ಮದ್ದು ಸಿಂಪರಣೆ ಕಾರ್ಯ ಜೋರಾಗಿ ನಡೆಯುತ್ತದೆ. ಹೀಗಾಗಿ, ಒಮ್ಮೆಲೇ ಎಲ್ಲರ ತೋಟದಲ್ಲೂ ಈ ಕಾರ್ಯ ನಡೆಯುವುದರಿಂದ, ಪರಿಣಿತಿ ಹೊಂದಿರುವ ಕೊನೆಗೌಡರ ಅಭಾವ ಸೃಷ್ಟಿಯಾಗುತ್ತದೆ.

‘ಅಡಿಕೆ ಮರ ಹತ್ತಿ ಮದ್ದು ಸಿಂಪರಣೆ ಮಾಡಲು ಕೌಶಲ ಬೇಕು. ಒಮ್ಮೆ ಮರವೇರಿದರೆ, ಅರ್ಧ ದಿನ ಮರದ ಮೇಲಿರಬೇಕು. ಮರದಿಂದ ಮರಕ್ಕೆ ಜಿಗಿಯುವ ಕಲೆ ತಿಳಿದಿರಬೇಕು. ಇತ್ತೀಚಿನ ಹುಡುಗರು ಈ ಕೆಲಸಕ್ಕೆ ಮುಂದಾಗುತ್ತಿಲ್ಲ. ಕಳೆದ ವರ್ಷ 25ರಷ್ಟು ಯುವಕರಿಗೆ ತರಬೇತಿ ನೀಡಿದ್ದರು. ಅವರಲ್ಲಿ ಕೆಲವರು ಈ ಕಲೆ ಕಲಿತಿದ್ದಾರೆ. ಆದರೆ, ಹಿರಿಕರಷ್ಟು ನಾಜೂಕಿನಿಂದ ಕೆಲಸ ಮಾಡಲು ಅವರು ಇನ್ನೂ ಅನುಭವ ಸಾಲದು’ ಎನ್ನುತ್ತಾರೆ ಕೊನೆಗೌಡ ಸುಬ್ರಾಯ ನಾಯ್ಕ.

ಬನವಾಸಿ ಭಾಗದಲ್ಲಿ ಅಡಿಕೆ ಮಿಳ್ಳೆ ಉದುರುವುದು ಹೆಚ್ಚಾಗಿದೆ. ಮಿಳ್ಳೆ ಉದುರುವುದನ್ನು ತಡೆಯುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡತೊಡಗಿದೆ. ತೋಟಗಾರಿಕೆ ಇಲಾಖೆ ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಬೆಳೆಗಾರ ಇಮ್ರಾನ್ ಒತ್ತಾಯಿಸಿದರು.

ಜೂನ್ ಆರಂಭದಲ್ಲಿಯೇ ಮದ್ದು ಸಿಂಪಡಣೆಗೆ ಮುಂದಾದರೂ, ಕೊನೆಗೌಡರ ಕೊರತೆ ಎದುರಾಗಿದೆ. ನಿಗದಿತ ಸಮಯದೊಳಗೆ ಮದ್ದು ಸಿಂಪಡಿಸದಿದ್ದರೆ ಮಳೆಗಾಲದಲ್ಲಿ ಅಡಿಕೆಗೆ ಕೊಳೆ ರೋಗ ಬರುತ್ತದೆ.
-ಯಶವಂತ ಪಾಟೀಲ,
ಅಡಿಕೆ ಬೆಳೆಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು