ಮಂಗಳವಾರ, ಸೆಪ್ಟೆಂಬರ್ 21, 2021
26 °C
ಕೊರೊನಾ ವೈರಸ್ ಬಗ್ಗೆ ಜಿಲ್ಲೆಯಲ್ಲಿ ಕಟ್ಟೆಚ್ಚರ: ವಿವಿಧ ಸಭೆ, ಸಮಾರಂಭ ರದ್ದು

ಆರು ನೋಡಲ್ ಅಧಿಕಾರಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕೊರೊನಾ ವೈರಸ್ ಹರಡಬಹುದಾದ ಸಾಧ್ಯತೆಯ ಕಾರಣ ಜಿಲ್ಲೆಯಲ್ಲೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾಂಕ್ರಾಮಿಕ ಸೋಂಕಿನ ಬಗ್ಗೆ ಜಾಗೃತಿ ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನೋಡಿಕೊಳ್ಳಲು ಆರು ಮಂದಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಆಯಾ ತಾಲ್ಲೂಕುಗಳಲ್ಲಿ ನಡೆಯುವ ಆರೋಗ್ಯ ಸಂಬಂಧಿಸಿದ ಎಲ್ಲ ಘಟನೆಗಳನ್ನು ಅವರ ಗಮನಕ್ಕೆ ತರಬೇಕು. ವಿಶೇಷವಾಗಿ ವೈರಸ್ ಕುರಿತು ನೋಡಲ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ವಹಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಭಾಗಶಃ ಪರಿಣಾಮ

ಶಾಲಾ ಕಾಲೇಜುಗಳಿಗೆ ಶನಿವಾರದಿಂದ ರಜೆ ನೀಡಲಾಗಿದೆ. ಜಿಲ್ಲೆಯ ನಿಸರ್ಗ ಧಾಮಗಳು, ಪ್ರವಾಸಿ ತಾಣಗಳನ್ನು ಕೂಡ ಮುಚ್ಚಲಾಗಿದೆ. ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಸಭೆ, ಸಮಾರಂಭಗಳು ರದ್ದಾಗಿವೆ.

ಕಾರವಾರದಲ್ಲಿ ಹೋಟೆಲ್, ಮಾರುಕಟ್ಟೆ ವ್ಯವಹಾರಗಳು, ಸರ್ಕಾರಿ ಕಚೇರಿಗಳಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನೆರವೇರಿದವು. ಉಳಿದಂತೆ ಸೂಪರ್ ಮಾರ್ಕೆಟ್‌ಗಳು ಬಾಗಿಲು ಮುಚ್ಚಿವೆ. ಶಾಲೆಗಳಿಗೆ ರಜೆ ನೀಡಿರುವ ಮಾಹಿತಿ ಇಲ್ಲದ ಪಾಲಕರು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಎಷ್ಟನೇ ತರಗತಿಯ ಮಕ್ಕಳಿಗೆ ರಜೆ ನೀಡಲಾಗಿದೆ ಎಂದು ಭದ್ರತಾ ಸಿಬ್ಬಂದಿಯ ಜೊತೆ ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರವಾಸಿಗರ ಸಂಖ್ಯೆ ಇಳಿಕೆ

ಪ್ರತಿ ವಾರಾಂತ್ಯದಲ್ಲಿ ಜನದಟ್ಟಣೆ ಕಾಣುವ ಗೋಕರ್ಣದಲ್ಲಿ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ನಾಲ್ಕು ಬಸ್‌ಗಳಲ್ಲಿ ಪ್ರವಾಸಿಗರು ಬಂದಿದ್ದಾರೆ. ವಾಡಿಕೆಯಂತೆ ವಾರಾಂತ್ಯದಲ್ಲಿ ಸೇರುವ ವಿದೇಶಿ ಪ್ರವಾಸಿಗರು ಬೇರೆ ಊರುಗಳಿಂದ ಬಂದಿಲ್ಲ. ಗೋಕರ್ಣದಲ್ಲೇ ಇರುವವರು ಅಲ್ಲೇ ಉಳಿದುಕೊಂಡಿದ್ದಾರೆ.

ಮುರ್ಡೇಶ್ವರ ಸಮೀಪದ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ಮಾಡಲೂ ‍ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಕೆಲವು ದಿನಗಳಿಂದ ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.

ನಿಸರ್ಗ ಧಾಮ ಬಂದ್

ದಾಂಡೇಲಿ ಸುತ್ತಮುತ್ತಲಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ನಿಸರ್ಗಧಾಮ, ಪ್ರವಾಸಿ ತಾಣಗಳನ್ನೂ ಸ್ಥಗಿತಗೊಳಿಸಿ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕುಳಗಿ ಪ್ರಕೃತಿ ಶಿಕ್ಷಣ ಶಿಬಿರ, ಅಣಶಿ ಪ್ರಕೃತಿ ಶಿಬಿರ, ಕ್ಯಾಸಲ್‌ರಾಕ್ ಶಿಕ್ಷಣ ಶಿಬಿರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಜಂಗಲ್ ಸಫಾರಿ, ಅತ್ತಿವೇರಿ ಪಕ್ಷಿಧಾಮ, ಸಿಂತೇರಿ ರಾಕ್ಸ್ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 

ಹಳಿಯಾಳ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ದಾಂಡೇಲಿಯ ದಂಡಕಾರಣ್ಯ, ಇಕೊ ಪಾರ್ಕ್, ಮೌಳಂಗಿ ಇಕೊ ಪಾರ್ಕ್‌ಗಳನ್ನೂ ಶನಿವಾರದಿಂದಲೇ ಸ್ಥಗಿತಗೊಳಿಸಲಾಗಿದೆ.

ಸಂತೆ ಸಂಜೆ 6ಕ್ಕೆ ಮುಕ್ತಾಯ

ಕಾರವಾರದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯ ಮೇಲೂ ಕೊರೊನಾ ಪ್ರಭಾವ ಬೀರಿದೆ. ಸಂತೆಗೆ ಷರತ್ತು ಬದ್ಧ ಅನುಮತಿ ನೀಡಲಾಗಿದ್ದು, ಸಂಜೆ 6ಕ್ಕೆ ಕೊನೆಗೊಳ್ಳಲಿದೆ.

‘ನಗರಸಭೆಯು ಸಂತೆಯ ಪ್ರದೇಶದಲ್ಲೇ ಹೆಲ್ಪ್ ಡೆಸ್ಕ್ ತೆರೆಯಲಿದ್ದು, ಕೊರೊನಾ ಕುರಿತು ಜಾಗೃತಿ ಮೂಡಿಸಲಿದೆ. ಸಂತೆಯಲ್ಲಿ ಹೆಚ್ಚು ಹೊತ್ತು ಕಾಲಕಳೆಯದೇ ತಕ್ಷಣವೇ ತರಕಾರಿ ಖರೀದಿ ಮಾಡಿ ಮನೆಗಳಿಗೆ ಮರಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ. ಅಲ್ಲದೇ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಪ್ರಕಟಣೆಗಳನ್ನು ಸಾರುವ ವಾಹನವೊಂದು ನಗರದಲ್ಲಿ ಸಂಚರಿಸಲಿದೆ’ ಎಂದು ಸಹಾಯಕ ಎಂಜಿನಿಯರ್ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳು

ವೈದ್ಯಾಧಿಕಾರಿಗಳು;ಮೊಬೈಲ್;ನಿಯೋಜಿತ ತಾಲ್ಲೂಕು

ಡಾ.ಶರದ ನಾಯಕ;94498 43212;ಹೊನ್ನಾವರ, ಭಟ್ಕಳ

ಡಾ.ರಮೇಶ ರಾವ್;94802 96849;ಕುಮಟಾ, ಅಂಕೋಲಾ

ಡಾ.ಅನ್ನಪೂರ್ಣಾ ವಸ್ತ್ರದ;94496 29804;ಹಳಿಯಾಳ, ಜೊಯಿಡಾ

ಡಾ.ವಿನೋದ ಭೂತೆ;83103 96901;ಕಾರವಾರ

ಡಾ.ಮಹಾಬಲೇಶ್ವರ ಹೆಗಡೆ;94489 65434;ಯಲ್ಲಾಪುರ, ಮುಂಡಗೋಡ

ಬಸವರಾಜ ಎಸ್.ಕನ್ನಕ್ಕನವರ್;98451 98326;ಸಿದ್ದಾಪುರ, ಶಿರಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು