ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯ ಮೃತದೇಹ ಮುಟ್ಟಲಾಗದೆ ಹಣೆ ಬಡಿದುಕೊಂಡು ಕಣ್ಣೀರು ಹಾಕಿದ ಮಕ್ಕಳು

Last Updated 28 ಮೇ 2020, 7:19 IST
ಅಕ್ಷರ ಗಾತ್ರ

ಮುಂಡಗೋಡ: ಹೆತ್ತವ್ವಳ ಅಂತಿಮ ದರ್ಶನ ಪಡೆಯಲು, ಅವರು ಸತತ 12 ಗಂಟೆಗಳ ಅವರು ಕಾಲ ಪ್ರಯಾಣಿಸಿದರು. ಊರ ಗಡಿ ಸಮೀಪಿಸುತ್ತಿದ್ದಂತೆ, ಅವರಿಗೆ ಪಿಪಿಇ ಕಿಟ್ ತೊಡಿಸಲಾಯಿತು. ಮೃತದೇಹವನ್ನು ನೋಡಲು ಮಾತ್ರ ಅವಕಾಶ ನೀಡಿ, ನಂತರ ಏಳು ದಿನಗಳವರೆಗೆ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಯಿತು.

ತಾಲ್ಲೂಕಿನ ಇಂದಿರಾನಗರ ಕೊಪ್ ಪಗ್ರಾಮದಲ್ಲಿ ಸುಶೀಲಾ (55) ಎಂಬುವರು ಮಂಗಳವಾರ ಮನೆಯಲ್ಲಿಯೇ ಮೃತಪಟ್ಟಿದ್ದರು. ಅವರ ಒಟ್ಟು ಏಳು ಮಕ್ಕಳ ಪೈಕಿ, ಇಬ್ಬರು ಪುತ್ರರು ಮಹಾರಾಷ್ಟ್ರದ ಔರಾಂಗಾಬಾದ್‍ನಲ್ಲಿ ನೆಲೆಸಿದ್ದಾರೆ. ಉಳಿದವರು ಸ್ವಗ್ರಾಮದಲ್ಲಿಯೇ ಇದ್ದರು. ತಾಯಿಯ ಅಂತಿಮ ದರ್ಶನ ಪಡೆಯಲು, ಆ ಇಬ್ಬರು ಪುತ್ರರು, ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಮಹಾರಾಷ್ಟ್ರದ ಗಡಿದಾಟಿ ಊರಿಗೆ ಬಂದಿದ್ದರು.

'ಮಹಾರಾಷ್ಟ್ರದಿಂದ ಕಾರಿನಲ್ಲಿ ಹೊರಟವರಿಗೆ ಗಡಿಭಾಗದಲ್ಲಿ (ನಿಪ್ಪಾಣಿ-ಸಂಕೇಶ್ವರ) ಅಲ್ಲಿನ ಪೊಲೀಸರು ತಡೆದಿದ್ದಾರೆ. ನಂತರ ಎರಡೂವರೆ ಗಂಟೆಗಳ ಕಾಲ ಗಡಿಯಲ್ಲಿಯೇ ಇದ್ದು, ಅನುಮತಿ ಸಿಕ್ಕ ನಂತರ ಪ್ರಯಾಣ ಮುಂದುವರೆಸಿದ್ದಾರೆ. ತಾಲ್ಲೂಕಿನ ಗಡಿಭಾಗ ಪ್ರವೇಶಿಸುತ್ತಿದ್ದಂತೆ, ಒಟ್ಟು ಮೂರು ಜನರಿಗೆ ಪಿಪಿಇ ಕಿಟ್ ಅಳವಡಿಸಿ ಅಲ್ಲಿಂದ ಗ್ರಾಮಕ್ಕೆ ಕರೆದುಕೊಂಡು ಬರಲಾಯಿತು' ಎಂದು ಸ್ಥಳೀಯರು ಹೇಳಿದರು.

ಮುಟ್ಟುವಂತಿಲ್ಲ:'ಕೊರೊನಾ ಹಿನ್ನೆಲೆಯಲ್ಲಿ ಕೆಲವೊಂದು ಷರತ್ತುಗಳಿಗೆ ಒಪ್ಪಿದ ನಂತರವಷ್ಟೇ ಗ್ರಾಮಕ್ಕೆ ಬರಲು ಗಡಿಯಲ್ಲಿ ಅನುಮತಿ ನೀಡಲಾಗಿತ್ತು. ಮೃತದೇಹವನ್ನು ಮುಟ್ಟಬಾರದು. ಕುಟುಂಬ ಸದಸ್ಯರು ಹಾಗೂ ಸ್ಥಳೀಯರನ್ನೂ ಸಹ ಮುಟ್ಟಬಾರದು ಎಂದು ಮೊದಲೇ ಸೂಚನೆಗಳನ್ನು ನೀಡಲಾಗಿತ್ತು' ಎಂದು ಸ್ಥಳೀಯ ನಿವಾಸಿ ಸಂತೋಷ ರಾಯ್ಕರ್ ಹೇಳಿದರು.

'ಕೆಲಹೊತ್ತು ಮೃತದೇಹದ ಪಕ್ಕದಲ್ಲಿಯೇ ನಿಂತು ರೋದಿಸಿದ ಸಹೋದರರು, ಹೆತ್ತ ತಾಯಿಯನ್ನೇ ಮುಟ್ಟದಂತಾಗಿರುವುದಕ್ಕೆ ಹಣೆ ಬಡಿದುಕೊಂಡು ಕಣ್ಣೀರು ಹಾಕುತ್ತಿದ್ದ ದೃಶ್ಯ ನೆರೆದವರ ಮನಕಲುಕಿತು. ಬೆಳಗಿನಜಾವ 3 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ಮಾಡಲಾಯಿತು' ಎಂದರು.

ಕೈತುತ್ತು ತಿನ್ನಿಸಿ ಬೆಳೆಸಿದ ತಾಯಿಗೆ ಮಕ್ಕಳೇ ಹೊರಗಿನವರಾದರೇ, ಮಾನವೀಯ ಸಂಬಂಧಗಳನ್ನೂ ಕೊರೊನಾ ಕೊಂದಿತೇ? ಎಂದು ಪುತ್ರರು ಎದೆಬಡಿದುಕೊಂಡರು. 'ಮಹಾರಾಷ್ಟ್ರದಿಂದ ಬಂದಿದ್ದ ಒಂದೇ ಕುಟುಂಬದ ಐವರನ್ನು ಮೊರಾರ್ಜಿ ಶಾಲೆಯ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ' ಎಂದು ತಾಲ್ಲೂಕಾ ಆಸ್ಪತ್ರೆಯ ಆಡಳಿತ ಆಧಿಕಾರಿ ಡಾ.ಎಚ್.ಎಫ್.ಇಂಗಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT