ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕಾಲಿಕ ಮಳೆ: ಬೆಳೆ ಹಾನಿ ಸಮೀಕ್ಷೆ’

ಯಲ್ಲಾಪುರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 6 ಜನವರಿ 2021, 3:55 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾ.ಪಂ. ಸಾಮಾನ್ಯ ಸಭೆ ನಡೆಯಿತು.

ತಾಲ್ಲೂಕಿನ ಕೊಲ್ಲಕ್ಕಿಪಾಲ್ ಮತ್ತು ಬೋರಿಹೊಂಡಗಳಲ್ಲಿ ಟಿ.ಸಿ ಅಳವಡಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಹಲವು ಕೆ.ಡಿ.ಪಿ. ಸಭೆಗಳಲ್ಲಿ ಆಗ್ರಹಿಸಿದ್ದರೂ, ಈ ವರೆಗೂ ಟೆಂಡರ್ ಸಹ ಆಗದಿರುವ ಕುರಿತಂತೆ ಸದಸ್ಯರಾದ ನಟರಾಜ ಗೌಡರ್ ಹಾಗೂ ನಾಗರಾಜ ಕವಡಿಕೇರಿ ಹೆಸ್ಕಾಂ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 2017ರಲ್ಲೇ ಕಾಮಗಾರಿ ಮಂಜೂರಿಯಾಗಿತ್ತು, ಆದರೆ ಇನ್ನೂ ಕಾರ್ಯಗತ ಆಗದಿರುವುದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿಯ
ಕೊರತೆಯೇ ಕಾರಣ ಎಂದರು. ಇದಕ್ಕೆ ಪಟ್ಟಣದ ಎಸ್.ಒ ರಮಾಕಾಂತ ಪ್ರತಿಕ್ರಿಯಿಸಿ, ತಾವು ಇದನ್ನು ಪರಿಶೀಲಿಸಿದ್ದು, ಆನ್‌ಲೈನ್ ಟೆಂಡರ್ ಇತ್ಯಾದಿ ಕಾರಣಗಳಿಂದ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದರು.

ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ಮುಂದಿನ ತಿಂಗಳು ತಾಲ್ಲೂಕು ಹಂತದಲ್ಲಿ ಕೊರೊನಾ ಲಸಿಕೆ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪಶುಸಂಗೋಪನಾ ಇಲಾಖೆಯ ಡಾ.ಸುಬ್ರಾಯ ಭಟ್ಟ ಮಾತನಾಡಿ, ತಾಲ್ಲೂಕಿನಲ್ಲಿ 30,000 ಜಾನುವಾರುಗಳಿಗೆ ಕಾಲುಬಾಯಿರೋಗ ಲಸಿಕೆ ನೀಡಲಾಗಿದೆ. ಜಾನುವಾರುಗಳಲ್ಲಿ ಗರ್ಭಪಾತ ಪ್ರಕರಣಗಳು ಕಂಡುಬರುತ್ತಿದ್ದು, ಈ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ ಎಂದರು.

ತೋಟಗಾರಿಕಾ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ತಾಲ್ಲೂಕಿನಲ್ಲಿ 8,992 ಫಲಾನುಭವಿಗಳಿಗೆ ₹ 12.75 ಕೋಟಿ ಬೆಳೆ ವಿಮೆ ಜಮಾ ಆಗಿದೆ. ಅಕಾಲಿಕ ಮಳೆ ಸುರಿಯುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ಮುಸುಕಿನ ಜೋಳ ಬೆಳೆಯುವ 270 ರೈತರಿಗೆ ತಲಾ ₹5 ಸಾವಿರ ಕೋವಿಡ್ ಸಂದರ್ಭದಲ್ಲಿ ಜಮಾ ಆಗಿದೆ. 56 ಹೆಕ್ಟೇರ್‌ ಪ್ರದೇಶದಲ್ಲಿ ದ್ವಿದಳ ಧಾನ್ಯ ನಾಟಿ ಆಗಿದೆ. ಸುಣ್ಣ, ಜಿಂಕ್‌, ಸೆಣಬಿನ ಬೀಜ ದಾಸ್ತಾನು ಇದೆ ಎಂದರು.

ಬಿಇಒ ಎನ್.ಆರ್. ಹೆಗಡೆ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಎಇಇ ವಿ.ಎಂ.ಭಟ್ಟ, ಸಾರಿಗೆ ಘಟಕ ವ್ಯವಸ್ಥಾಪಕ ರವಿ ಅಂಚಿಗಾವಿ ಮಾತನಾಡಿದರು. ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ತಿನೆಕರ್, ಸದಸ್ಯರಾದ ಮಾಲಾ ಚಂದಾವರ, ಮಂಗಲಾ ನಾಯ್ಕ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT