ಶಿರಸಿ: ಹೊಸ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಕರು ಹೆಚ್ಚು ಅಧ್ಯಯನ ಮಾಡಿಕೊಂಡು ಸಮಾಜಕ್ಕೆ ತಿಳಿಸಬೇಕು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಅಂಬೇಡ್ಕರ ಭವನದಲ್ಲಿ ಭಾನುವಾರ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
'ನೀತಿಯ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಹೀಗಾಗಿ ಶಿಕ್ಷಕರು ನೀತಿಯ ಒಳ್ಳೆಯ ಅಂಶಗಳನ್ನು ಜನರಿಗೆ ತಿಳಿಸಬೇಕು. ಕೌಶಲ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುವ ಹೊಸ ಶಿಕ್ಷಣ ನೀತಿಯ ಉದ್ದೇಶ ಒಳ್ಳೆಯದು. ಸ್ವಾಭಿಮಾನದ ಜೀವನ ನಡೆಸಲು ಯುವ ಪೀಳಿಗೆಗೆ ಇದು ಸಹಕಾರಿಯಾಗಲಿದೆ' ಎಂದರು.
'ರಾಷ್ಟ್ರಪ್ರೇಮ ಮೂಡಿಸುವ ಶಿಕ್ಷಣ ವಿದ್ಯಾರ್ಥಿಗಳಿಗೆ ಬೇಕಿದೆ. ದೇಶಭಕ್ತ ಯುವಸಮೂಹ ರೂಪಿಸುವುದು ಶಿಕ್ಷಕರ ಗುರಿಯಾಗಲಿ'. 'ಕ್ರಿಯಾಶೀಲತೆಯ ಮೂಲಕ ಕೋವಿಡ್ ಕಾಲಘಟ್ಟದಲ್ಲೂ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಜೀವಂತವಿಟ್ಟಿದ್ದು ಶಿಕ್ಷಕರ ಸಾಧನೆ' ಎಂದು ಶ್ಲಾಘಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, 'ಜೀವನದಲ್ಲಿ ಗುರಿ ಸಾಧಿಸಲು ಗುರು ಬೇಕು. ವಿದ್ಯಾರ್ಥಿಯನ್ನು ಸಾಧಕರಾಗಿಸುವದು ಶಿಕ್ಷಕ ಸ್ವಾರ್ಥರಹಿತ ಸೇವೆ' ಎಂದರು.
ಪ್ರಶಸ್ತಿ ಪ್ರಧಾನ: ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹದಿನೆಂಟು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿರಸಿಯ ಅರುಣೋದಯ ಸಂಸ್ಥೆ ನೀಡುವ 'ಪಾಂಡುರಂಗ ಪ್ರಶಸ್ತಿ'ಯನ್ನು ನೀಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಿಗೆ ತುರ್ತು ಸ್ಥಿತಿಯಲ್ಲಿ ನೆರವಾಗುವ ಶಿಕ್ಷಕ ಬಂಧು ಯೋಜನೆಗೆ ಚಾಲನೆ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಡಿಡಿಪಿಐ ದಿವಾಕರ ಶೆಟ್ಟಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಿ.ಆರ್.ನಾಯ್ಕ, ಬಿಇಓ ಎಂ.ಎಸ್.ಹೆಗಡೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.