ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಕ್ಕಳ ಮನೆಗೆ ತೆರಳಿ ಶಿಕ್ಷಕರ ಪಾಠ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಯಲ್ಲಿ ಮಾದರಿಯಾದ ಸರ್ಕಾರಿ ಶಾಲೆ
Last Updated 22 ಜೂನ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್ 19 ಲಾಕ್‌ಡೌನ್ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆಯಾಗಿದ್ದರೂ, ಶಾಲೆಯಲ್ಲಿ ಕಲಿಸಿರುವ ಪಾಠವನ್ನು ಮಕ್ಕಳು ಮರೆಯಬಾರದೆಂಬ ಕಾರಣಕ್ಕೆ ಈ ಶಾಲೆಯ ಶಿಕ್ಷಕರು, ಮಕ್ಕಳ ಮನೆಗೇ ತೆರಳಿ ಪಾಠ ಮಾಡಿದರು. ಮಾದರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಪ್ರತಿ ಮಗುವಿನ ಮನೆಗೆ ತಲುಪಿಸಿದರು.

ತಾಲ್ಲೂಕಿನ ಇಸಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ 84 ಮಕ್ಕಳಿದ್ದಾರೆ. ಜೂನ್ 25ರಿಂದ ಪ್ರಾರಂಭವಾಗಲಿರುವ ಪರೀಕ್ಷೆ ಬರೆಯಲು ಈ ಶಾಲೆಯ ಮಕ್ಕಳಿಗೆ ಹೆಚ್ಚು ಭಯವಿಲ್ಲ. ಯಾಕೆಂದರೆ, ಅವರು ಲಾಕ್‌ಡೌನ್ ರಜೆಯಲ್ಲಿ ಮನೆಯುಲ್ಲಿದ್ದರೂ, ಶಾಲಾ ದಿನಗಳಂತೆ ಅಭ್ಯಾಸ ಮಾಡುತ್ತಿದ್ದಾರೆ.

ಈ ಸರ್ಕಾರಿ ಪ್ರೌಢಶಾಲೆಗೆ ಸುತ್ತಲಿನ ಹಳ್ಳಿಗಳ ಮಕ್ಕಳ ಜೊತೆಗೆ, ದೂರದ ದಾಸನಕೊಪ್ಪ, ದನಗನಹಳ್ಳಿ, ಸಮ್ಮಸಗಿ, ಹನುಮನಕೊಪ್ಪ, ಹಾವೇರಿ ಜಿಲ್ಲೆ ಗಡಿ ಭಾಗದ ವಿದ್ಯಾರ್ಥಿಗಳು ಬರುತ್ತಾರೆ. ‘ಎಲ್ಲ ಶಾಲೆಗಳಂತೆ ಶಿಕ್ಷಕರು ನಿರ್ದಿಷ್ಟ ವಿದ್ಯಾರ್ಥಿಗಳ ಹೊಣೆ ವಹಿಸಿಕೊಂಡಿದ್ದರು. ಜತೆಗೆ, ಎಲ್ಲ ಆರು ವಿಷಯಗಳಿಗೆ ಸಂಬಂಧಿಸಿ, 50 ಅಂಕಗಳ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಶಿಕ್ಷಕರು ಪ್ರತಿ ವಿದ್ಯಾರ್ಥಿ ಮನೆಗೆ ಹೋಗಿ ಕೊಟ್ಟು ಬಂದರು. ನಿರಂತರ ಮಳೆಯ ನಡುವೆಯೇ ಈ ಕಾರ್ಯ ನಡೆಯಿತು. ನಾಲ್ವರು ಶಿಕ್ಷಕಿಯರು ಸ್ಥಳೀಯವಾಗಿ ಈ ಕಾರ್ಯ ನಡೆಸಿದರೆ, 25–30 ಕಿ.ಮೀ ದೂರದಲ್ಲಿರುವ ಮಗುವಿನ ಮನೆಗೆ ನಾಲ್ವರು ಶಿಕ್ಷಕರು ಪ್ರಶ್ನೆಪತ್ರಿಕೆ ತಲುಪಿಸಿದರು’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಸುಮಂಗಲಾ ಜೋಶಿ.

‘ವಾರದಲ್ಲಿ ಎರಡು ವರ್ಕ್‌ಶೀಟ್ ಕಳುಹಿಸುತ್ತಿದ್ದೆವು. ಎರಡನೇ ಬಾರಿ ಹೋದಾಗ, ಮೊದಲನೇ ಬಾರಿ ಕೊಟ್ಟಿರುವ ಪ್ರಶ್ನೆಗಳ ಉತ್ತರ ಪತ್ರಿಕೆಯನ್ನು ಮಗು ಕಡ್ಡಾಯವಾಗಿ ಕೊಡಬೇಕು ಎಂದು ನಿಯಮ ಮಾಡಿದ್ದೆವು. ಲಾಕ್‌ಡೌನ್ ಸಡಿಲಿಕೆಯಾದ ಮೇಲೆ, ಶಿಕ್ಷಕರು ನಾಲ್ಕಾರು ಮಕ್ಕಳನ್ನು ಸೇರಿಸಿಕೊಂಡು, ದೇವಾಲಯದ ಬಯಲು, ಕೆಲವರ ಮನೆಯಂಗಳದಲ್ಲಿ, ಮಕ್ಕಳಿಗೆ ಕಠಿಣವಾಗುವ ಗಣಿತ, ಇಂಗ್ಲಿಷ್ ವಿಷಯಗಳ ಪಾಠ ಮಾಡಿದರು. ಈ ಸಂದರ್ಭದಲ್ಲಿ ಸುರಕ್ಷಾ ನಿಯಮಗಳ ಪಾಲನೆ ಮಾಡಲು ಮರೆಯಲಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಮ್ಮಲ್ಲಿ ಬರುವ ಮಕ್ಕಳಲ್ಲಿ ಕೂಲಿಕಾರರು, ರೈತರ ಮಕ್ಕಳೇ ಹೆಚ್ಚಿನವರಿದ್ದಾರೆ. ಅವರನ್ನು ಸದಾ ಓದಿನಲ್ಲಿ ತೊಡಗಿಸುವ ಉದ್ದೇಶಕ್ಕೆ, ಲಾಕ್‌ಡೌನ್ ಅವಧಿಯಲ್ಲಿ ದೂರವಾಣಿ ಸಂಪರ್ಕದಲ್ಲಿದ್ದೆವು. ಲಾಕ್‌ಡೌನ್ ಸಡಿಲಿಕೆಯ ನಂತರ, ಪರೀಕ್ಷೆ ದಿನಾಂಕ ಘೋಷಣೆಯಾದ ಮೇಲೆ, ಸಿದ್ಧತಾ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಿದೆವು. ಪಾಲಕರು ತುಂಬ ಸಹಕಾರ ನೀಡಿದರು’ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಬಿ.ವಿ.ಗಣೇಶ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಮಕ್ಕಳು ನಿರಂತರ ಅಭ್ಯಾಸದಲ್ಲಿ ತೊಡಗಿರಲು ವಿವಿಧ ಚಟುವಟಿಕೆಗಳನ್ನು ನಡೆಸಲಾಗಿದೆ. ತಾಲ್ಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ಚಟುವಟಿಕೆ ನಡೆಸಲಾಗಿದೆ
– ಎಂ.ಎಸ್.ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT