ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಾರ್ಗದಲ್ಲಿ ಬಸ್ ಸಂಚಾರ ಗೌಣ

ಹಲವು ಹಳ್ಳಿಗಳಿಗೆ ಆರಂಭವಾಗದ ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ: ಜನರ ಪರದಾಟ
Last Updated 24 ಜನವರಿ 2021, 19:30 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಕಾರಣದಿಂದ ಜನರ ಓಡಾಟ ಇರಲಿಲ್ಲ. ಹಾಗಾಗಿ ಬಸ್‌ಗಳ ಸಂಚಾರವೂ ನಿಂತಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಸಾಮಾನ್ಯ ಸ್ಥಿತಿಗೆ ಬಂದಿವೆ. ಆದರೆ, ಗ್ರಾಮೀಣ ಭಾಗದಲ್ಲಿ ಹಲವೆಡೆ ಇನ್ನೂ ಸಾರಿಗೆ ವ್ಯವಸ್ಥೆಯು ಕೊರೊನಾಕ್ಕೂ ಪೂರ್ವದಲ್ಲಿದ್ದಂತೆ ಶುರುವಾಗಿಲ್ಲ. ಇದರಿಂದ ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ.

ಕಾರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಶೇ 90ರಷ್ಟು ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಶುರುವಾಗಿವೆ. ಆದರೆ, ವಿದ್ಯಾರ್ಥಿಗಳ ತರಗತಿಗಳು ಬೇರೆ ಬೇರೆ ಸಮಯದಲ್ಲಿ ನಡೆಯುತ್ತಿವೆ. ಹಾಗಾಗಿ ಆ ಅವಧಿಗೆ ಬಸ್‌ಗಳ ವೇಳಾಪಟ್ಟಿಯನ್ನು ಹೊಂದಾಣಿಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ಉಳಿದಂತೆ, ಸಂಸ್ಥೆಯ ಸೇವೆy ಬಗ್ಗೆ ಅಷ್ಟಾಗಿ ದೂರುಗಳಿಲ್ಲ.

ಶಿರಸಿ:

ಕೊರೊನಾ ಕಾರಣಕ್ಕೆ ಲಾಕ್‍ಡೌನ್ ಜಾರಿಗೊಳಿಸಿದ ದಿನದಿಂದ ನಷ್ಟದ ದಾರಿಯಲ್ಲಿ ಸಂಚರಿಸಿದ್ದ ವಾಯವ್ಯ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ಘಟಕ ಈಗಲೂ ಲಾಭದತ್ತ ಸುಳಿಯುವ ಲಕ್ಷಣ ಕಾಣಿಸುತ್ತಿಲ್ಲ. ಗ್ರಾಮೀಣ ಭಾಗಕ್ಕೆ ಬಸ್ ಸಂಚಾರ ಕಡಿತಗೊಳಿಸಿದ ಪರಿಣಾಮ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಕ್ಕೆ ಪರದಾಡುತ್ತಿದ್ದಾರೆ.

ಜಿಲ್ಲಾ ಘಟಕದ ವ್ಯಾಪ್ತಿಗೆ ಒಳಪಡುವ ಒಂಬತ್ತು ತಾಲ್ಲೂಕುಗಳಲ್ಲಿ ಸಾರಿಗೆ ಬಸ್ ಸಂಚರಿಸುವ 450 ಮಾರ್ಗಗಳಿವೆ. 491 ಬಸ್‍ಗಳು ಸದ್ಯಕ್ಕೆ ಸಂಚಾರ ನಡೆಸುತ್ತಿವೆ. ಲಾಕ್‍ಡೌನ್‍ಗೂ ಮುನ್ನ ಮಾರ್ಗಗಳ ಸಂಖ್ಯೆ 510 ಇತ್ತು. 558 ಬಸ್‍ಗಳು ಉತ್ತರ ಕನ್ನಡ ಘಟಕದಲ್ಲಿವೆ.

ಹಳಿಯಾಳ: ಪಟ್ಟಣದ ಬಸ್ ನಿಲ್ದಾಣ ದಿಂದ 73 ಬಸ್‌ಗಳು ಸಂಚಾರವು ವಿವಿಧ ತಾಲ್ಲೂಕು, ಜಿಲ್ಲೆ ಹಾಗೂ ಗ್ರಾಮಾಂತರ ಭಾಗಗಳಿಗೆ ಆರಂಭವಾಗಿದೆ.

ಹಳಿಯಾಳದಿಂದ ಅಂತರರಾಜ್ಯ ಪ್ರಯಾಣವೂ ಇದೆ. ಕೋವಿಡ್‌ಗೆ ಪೂರ್ವದಲ್ಲಿ ದಿನವೊಂದಕ್ಕೆ ಸುಮಾರು ₹ 7.50 ಲಕ್ಷ ಆದಾಯ ಬರುತ್ತಿತ್ತು. ಲಾಕ್‌ಡೌನ್ ತೆರವಾದ ಬಳಿಕ ಈ ಆದಾಯವು ₹ 6.50 ಲಕ್ಷಕ್ಕೆ ಕುಸಿದಿದೆ ಎಂದು ಸಾರಿಗೆ ಘಟಕದ ವ್ಯವಸ್ಥಾಪಕ ಎಲ್.ಎಚ್.ರಾಠೋಡ ತಿಳಿಸಿದರು.

ಮುಂಡಗೋಡ: ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ 15 ದಿನಗಳಿಂದ ಸಾರಿಗೆ ಸಂಸ್ಥೆಯ ಬಸ್‌ಗಳು ಒಂದಷ್ಟು ಪ್ರಮಾಣ ದಲ್ಲಿ ಸಂಚರಿಸುತ್ತಿವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆ ಹಾಗೂ ಸಂಜೆಯ ವೇಳೆಗೆ ಪ್ರಯಾಣಿಸುತ್ತಿವೆ. ಅರಿಶಿಣಗೇರಿ, ಟಿಬೆಟನ್ ಕಾಲೊನಿ ಸೇರಿದಂತೆ ಕೆಲವು ಹಳ್ಳಿಗಳಿಗೆ ಬಸ್‍ಗಳ ಓಡಾಟ ಮೊದಲಿನಂತೆ ಇನ್ನೂ ಆರಂಭವಾಗಿಲ್ಲ.

‘ಯಲ್ಲಾಪುರದಿಂದ ಬರುವ ಬಸ್ ಬಡ್ಡಿಗೇರಿ ಕ್ರಾಸ್ ಬಂದು ತಲುಪಲು 9.30 ಆಗಿರುತ್ತದೆ. ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಪಾಠಗಳು ಅದೇ ಸಮಯಕ್ಕೆ ಆರಂಭವಾಗುತ್ತವೆ. ಇದರಿಂದ ನಿತ್ಯವೂ ಒಂದು ಅವಧಿ ಮುಗಿದ ನಂತರವೇ ತರಗತಿಗೆ ಹೋಗಬೇಕಾಗಿದೆ’ ಎನ್ನುತ್ತಾರೆ ದ್ವಿತೀಯ ಪಿ.ಯು.ವಿದ್ಯಾರ್ಥಿ ವಿಠ್ಠು ಗಾವಡೆ.

ಅಂಕೋಲಾ: ತಾಲ್ಲೂಕಿನಲ್ಲಿ ಲಾಕ್‌ಡೌನ್ ತೆರವಿನ ನಂತರ ಆರಂಭದಲ್ಲಿ ಕೆಲವು ಬಸ್‍ಗಳು ಮಾತ್ರ ಸಂಚರಿಸುತ್ತಿದ್ದವು. ಈಗ ಶಾಲಾ– ಕಾಲೇಜುಗಳು ಆರಂಭ ವಾಗಿದ್ದರಿಂದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರಿಗೆ ಸಮಸ್ಯೆ ಆಗದ ರೀತಿಯಲ್ಲಿ ವೇಳಾಪಟ್ಟಿಯನ್ನು ಹೊಂದಿಸಲಾಗಿದೆ.

‘ಅಂಕೋಲಾ ಘಟಕದ ಒಟ್ಟು 54 ಬಸ್‍ಗಳಲ್ಲಿ 49 ಬಸ್‍ಗಳು ಸಂಚರಿಸುತ್ತಿವೆ. ಈ ಹಿಂದಿನ ನಿಗದಿತ ವೇಳಾಪಟ್ಟಿಯ ಅನುಗುಣವಾಗಿ ಬಸ್‍ಗಳನ್ನು ಬಿಡುತ್ತಿದ್ದೇವೆ’ ಎಂದು ಘಟಕ ವ್ಯವಸ್ಥಾಪಕ ಯು.ಬಿ.ಬಾನಾವಳಿಕರ ತಿಳಿಸಿದರು.

ದಾಂಡೇಲಿ: ದಾಂಡೇಲಿ ಘಟಕದಿಂದ ನಿತ್ಯವೂ ಹುಬ್ಬಳ್ಳಿ– ಧಾರವಾಡ ಮಾರ್ಗದ ಬಸ್‌ಗಳು ಮೊದಲಿನ ರೀತಿಯೇ ಸಂಚರಿಸುತ್ತಿವೆ. ಗ್ರಾಮೀಣ ಭಾಗಗಳ ವಿವಿಧ ಹಳ್ಳಿಗಳಿಗೆ ಮೂರು ಸುತ್ತಿನ ಸಂಚಾರ ಪ್ರಾರಂಭಿಸಲಾಗಿದೆ. ದೂರು ಊರುಗಳಿಗೂ ಬಸ್‌ಗಳು ಹೋಗುತ್ತಿವೆ. ನಗರದಿಂದ ಸಂಚರಿಸುವ 60 ಬಸ್‌ಗಳಲ್ಲಿ 57 ಸಂಚಾರ ಪ್ರಾರಂಭಿಸಿವೆ ಎಂದು ಘಟಕ ವ್ಯವಸ್ಥಾಪಕ ಎಸ್.ವೈ.ಜೋಗಿನ್.

ಕುಮಟಾ: ಲಾಕ್‌ಡೌನ್ ನಂತರ ಕುಮಟಾ ಸಾರಿಗೆ ಡಿಪೊದಿಂದ ಶೇ 95 ರಷ್ಟು ಗ್ರಾಮೀಣ ಸಾರಿಗೆ ಬಸ್‌ಗಳ ಸಂಚಾರ ಪುನರಾರಂಭಗೊಂಡಿದೆ.

‘ಶಾಲಾ– ಕಾಲೇಜುಗಳು ಆರಂಭ ಆಗುತ್ತಿರುವ ಕಾರಣ ಅಗತ್ಯಕ್ಕೆ ಸರಿಯಾಗಿ ಹೆಚ್ಚುವರಿ ಬಸ್‌ಗಳನ್ನು ಆರಂಭಿಸ ಲಾಗುವುದು ಎಂದು ಕುಮಟಾ ಸಾರಿಗೆ ಘಟಕ ಉಪ ವ್ಯವಸ್ಥಾಪಕ ಶಿವಾನಂದ ನಾಯ್ಕ ಮಾಹಿತಿ ನೀಡಿದರು.

ಹೊನ್ನಾವರ: ತಾಲ್ಲೂಕಿನಲ್ಲಿ ಬಸ್ ಪ್ರಯಾಣಿಕರು ತೀವ್ರ ಸಂಕಷ್ಟ ಕ್ಕೊಳಗಾ ಗಿದ್ದಾರೆ. ಕೋವಿಡ್ ಲಾಕ್‍ಡೌನ್ ತೆರವಿನ ನಂತರವೂ ಮೊದಲಿದ್ದ ಅರ್ಧ ಸಂಖ್ಯೆಯ ಬಸ್‍ಗಳು ರಸ್ತೆಗಿಳಿಯುತ್ತಿಲ್ಲ. ಪಟ್ಟಣದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸೇರಿದಂತೆ ಹಳ್ಳಿಗಾಡಿನ ಹಲವು ಪ್ರಯಾಣಿಕರು ಬಸ್ ಸೌಕರ್ಯವಿಲ್ಲದೆ ಪರಿತಪಿಸುವಂತಾಗಿದೆ.

ಬಸ್ ರೂಟ್‍ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸುತ್ತ ಬರ ಲಾಗಿದ್ದು, ಪ್ರಸ್ತುತ ಇದರ ಸಂಖ್ಯೆ 135ಕ್ಕೆ ತಲುಪಿದೆ. ‘ಬಸ್ ರೂಟ್‍ಗಳ ಸಂಖ್ಯೆಯನ್ನು ನಿಧಾನವಾಗಿ ಹೆಚ್ಚಿಸ ಲಾಗುತ್ತಿದೆ. ಜನರ ಬೇಡಿಕೆಗೆ ಸ್ಪಂದಿಸಿ ಹಲವು ರೂಟ್‍ಗಳ ಬಸ್ ಸಂಚಾರ ಪುನರಾರಂಭಿಸಲಾಗಿದೆ’ ಎಂದು ನಿಲ್ದಾಣಾಧಿಕಾರಿ ಬಿ.ಎಂ.ಪೈ ತಿಳಿಸಿದರು.

ಸಿದ್ದಾಪುರ: ತಾಲ್ಲೂಕಿನಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಸ್ಥಗಿತಗೊಂಡಿದ್ದ ಬಸ್‌ಗಳ ಸಂಚಾರ, ಎಲ್ಲ ಮಾರ್ಗಗಳಲ್ಲಿಯೂ ಇನ್ನೂ ಪುನರಾರಂಭವಾಗಿಲ್ಲ.

‘ಲಾಕ್‌ ಡೌನ್‌ ಸಮಯದಲ್ಲಿ ತಾಲ್ಲೂಕಿನಲ್ಲಿ ಸುಮಾರು ಶೇ 90ರಷ್ಟು ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಶೇ 75ರಷ್ಟು ಬಸ್‌ಗಳ ಓಡಾಟ ಈಗ ಆರಂಭಗೊಂಡಿದೆ ಎಂದು ಪಟ್ಟಣದ ಬಸ್‌ ನಿಲ್ದಾಣದ ನಿಯಂತ್ರಣಾಧಿಕಾರಿ ಆರ್‌.ಟಿ.ನಾಯ್ಕ ಪ್ರತಿಕ್ರಿಯಿಸಿದರು.

ಅರ್ಧಕ್ಕರ್ಧ ಬಸ್‌ಗಳಿಲ್ಲ:

ಭಟ್ಕಳ: ಕೋವಿಡ್ ನಂತರದ ದಿನಗಳಲ್ಲಿ ತಾಲ್ಲೂಕಿನಲ್ಲಿ ಗ್ರಾಮೀಣ ಬಸ್ ಸಂಚಾರ ವ್ಯವಸ್ಥೆ ಹಳಿ ತಪ್ಪಿದೆ. ದಿನ ನಿತ್ಯ ಸಂಚರಿಸುತ್ತಿದ್ದ ಅರ್ಧಕ್ಕಿಂತ ಹೆಚ್ಚು ಬಸ್‍ಗಳನ್ನು ಪ್ರಯಾಣಿಕರ ಕೊರತೆಯಿಂದ ಬಂದ್ ಮಾಡಲಾಗಿದೆ.

ಪಟ್ಟಣವನ್ನು ಅವಲಂಬಿಸಿ ಬದುಕುತ್ತಿರುವ ಗ್ರಾಮೀಣ ಜನರು ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ, ದಿನನಿತ್ಯ ಜೀವನಾವಶ್ಯಕ ಖರೀದಿಗಾಗಿ ಪಟ್ಟಣಕ್ಕೆ ಬರುತ್ತಾರೆ. ಆದರೆ, ಬಸ್‍ಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಬಸ್‍ಗಳಿರದ ಕಾರಣ ಖಾಸಗಿ ವಾಹನಗಳು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಬಸ್‍ಗಳಿರದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ತಾಲ್ಲೂಕಿನಿಂದ ಮಂಗಳೂರಿನ ತನಕ ತೆರಳಲು ಖಾಸಗಿ ಬಸ್‍ಗಳಿವೆ. ಆದರೆ, ಕಾರವಾರಕ್ಕೆ ತೆರಳಲು ಅವುಗಳೂ ಇಲ್ಲ.

‘ಈಗ ಗ್ರಾಮೀಣ ಮಾರ್ಗದ ಬಸ್‍ಗಳಲ್ಲಿ ಜನಸಂಚಾರ ಕಡಿಮೆ ಇದೆ. ಒಮೊಮ್ಮೆ ಖಾಲಿ ಬಸ್‌ಗಳು ಸಂಚರಿಸುತ್ತವೆ. ಇದರಿಂದ ನಿಗಮಕ್ಕೆ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು’ ಎಂದು ಸಹಾಯಕ ಸಂಚಾರ ನಿರೀಕ್ಷಕ ಅಶೋಕ ಹೆಗಡೆ ಹೇಳಿದರು.

‘ಪ್ರಯಾಣಿಕರ ಸಂಖ್ಯೆ ಕಡಿಮೆ’:

‘ಪ್ರಯಾಣಿಕರ ಸಂಖ್ಯೆಯು ಮೊದಲಿಗಿಂತ ಕಡಿಮೆ ಇದೆ. ಹಳ್ಳಿ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಮೊದಲಿನಷ್ಟಿಲ್ಲ. ಈ ಕಾರಣಕ್ಕೆ ಕೆಲವು ಮಾರ್ಗಗಳನ್ನು ಕಡಿತಗೊಳಿಸಲಾಗಿದೆ’ ಎನ್ನುತ್ತಾರೆ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ.

‘ಶಾಲಾ–ಕಾಲೇಜುಗಳು ಆರಂಭವಾಗಿರುವ ಕಾರಣಕ್ಕೆ ಬಹುತೇಕ ಹಳ್ಳಿ ಮಾರ್ಗಗಳಿಗೆ ಬಸ್ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮಯ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಸಂಚರಿಸುವ ಸಮಯಕ್ಕೆ ಬಸ್ ಓಡಾಟ ನಡೆಸುವುದು ಸದ್ಯಕ್ಕೆ ಕಷ್ಟ. ಆದರೆ, ಅದನ್ನೂ ಶೀಘ್ರವಾಗಿ ಸರಿಪಡಿಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ತಂಡ: ಸದಾಶಿವ ಎಂ. ಎಸ್, ಗಣಪತಿ ಹೆಗಡೆ, ರವೀಂದ್ರ ಭಟ್ ಬಳಗುಳಿ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ಪ್ರವೀಣ ಕುಮಾರ ಸುಲಾಖೆ, ಮಾರುತಿ ಹರಿಕಂತ್ರ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಮೋಹನ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT