ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಅಭ್ಯರ್ಥಿ ‘ಅಚ್ಚರಿ’ ಅಥವಾ ’ಅನಂತ’?

ನಾಲ್ವರ ಪೈಕಿ ಯಾರಿಗೆ ಸಿಗಲಿದೆ ಟಿಕೆಟ್ ಎಂಬುದೇ ಕುತೂಹಲ
Published 16 ಮಾರ್ಚ್ 2024, 4:24 IST
Last Updated 16 ಮಾರ್ಚ್ 2024, 4:24 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಈ ಬಾರಿ ಯಾರನ್ನು ಕಣಕ್ಕೆ ಇಳಿಸಲಿದೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ಸತತ ಏಳು ಅವಧಿಯಿಂದ ಸ್ಪರ್ಧಿಸುತ್ತಿರುವ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ವಿರೋಧದ ನಡುವೆಯೂ ಕಣಕ್ಕೆ ಇಳಿಸಲಾಗುವುದೇ? ಅಥವಾ ‘ಅಚ್ಚರಿ’ ಅಭ್ಯರ್ಥಿಗೆ ಅವಕಾಶ ಸಿಗುವುದೇ ಎಂಬ ಚರ್ಚೆ ನಡೆದಿದೆ.

ಅನಂತಕುಮಾರ ವಿರುದ್ಧ ಕ್ಷೇತ್ರದಲ್ಲಿ ಈ ಸಲ ಅಸಮಾಧಾನ ಹೆಚ್ಚಿದೆ. ಹೀಗಾಗಿ ಅವರನ್ನು ಕಣಕ್ಕಿಳಿಸುವ ಅನುಮಾನ ಒಂದೆಡೆಯಿದ್ದರೆ, ಪ್ರಾಯೋಗಿಕವಾಗಿ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಬಹುದು ಎಂಬ ಲೆಕ್ಕಾಚಾರವಿದೆ.

ಒಂದು ವೇಳೆ ಹೀಗೆ ಬೆಳವಣಿಗೆಗಳು ನಡೆದರೆ, ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ಘಟಕದ ವಕ್ತಾರ ಹರಿಪ್ರಕಾಶ ಕೋಣೆಮನೆ ಅಥವಾ ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪೈಕಿ ಒಬ್ಬರು ಕಣಕ್ಕಿಳಿಯಬಹುದು.

ವಿಶ್ವೇಶ್ವರ ಹೆಗಡೆ ಮತ್ತು ಹರಿಪ್ರಕಾಶ ಕೋಣೆಮನೆ ಕ್ಷೇತ್ರದಲ್ಲಿ ಓಡಾಡಿ ಕಾರ್ಯಕರ್ತರನ್ನು ಭೇಟಿಯಾದರೆ, ಚಕ್ರವರ್ತಿ ಸೂಲಿಬೆಲೆ ನಮೋ ಬ್ರಿಗೇಡ್ ಮೂಲಕ ಮೋದಿ ಸರ್ಕಾರದ ಸಾಧನೆ ಬಿಂಬಿಸುವ ಕಾರ್ಯಕ್ರಮ ನಡೆಸಿದ್ದಾರೆ.

‘ಸಂಸದ ಅನಂತಕುಮಾರ ಹೆಗಡೆ ಜನರಿಂದ ದೂರವಿದ್ದಾರೆ. ಚುನಾವಣೆ ಹೊಸ್ತಿಲಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡುವುದು ಅನುಮಾನ’ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದರು.

‘ಅನಂತಕುಮಾರ ಇಂತಹ ವಿರೋಧ ಎದುರಿಸಿದ್ದು ಇದು ಮೊದಲಲ್ಲ. ಈ ಹಿಂದೆಯೂ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ವಿರೋಧ ವ್ಯಕ್ತವಾಗಿತ್ತು. ಅವರನ್ನು ಅಭ್ಯರ್ಥಿಯಾಗಿಸುವ ಬಗ್ಗೆ ಆರ್‌ಎಸ್ಎಸ್ ಪ್ರಮುಖರ ಒಲವಿದೆ’ ಎಂದು ಸಂಸದರ ಆಪ್ತರೊಬ್ಬರು ತಿಳಿಸಿದರು.

‘ಅನಂತಕುಮಾರ ಅವರು ಸಕ್ರಿಯವಾಗಿರದ ಕಾರಣ ನನ್ನನ್ನೂ ಸೇರಿ ಹಲವರು ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದೆವು. ಈಗ ಅವರು ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದರಿಂದ ಅವರೇ ಸ್ಪರ್ಧಿಸುವ ನಿರೀಕ್ಷೆ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದು ಕುತೂಹಲ ಹೆಚ್ಚಿಸಿದೆ.

‘ಚಕ್ರವರ್ತಿ ಸೂಲಿಬೆಲೆ ಅವರಿಗೆ ರಾಜಕೀಯವಾಗಿ ಆಸಕ್ತಿ ಇಲ್ಲ. ಈ ಬಾರಿ ಅವಕಾಶ ಹುಡುಕಿಕೊಂಡು ಬಂದರೆ ಸ್ಪರ್ಧೆಗೆ ಅವರು ಆಸಕ್ತಿ ತೋರುವುದಾಗಿ ಹೇಳಿದ್ದಾರೆ’ ಎಂದು ಚಕ್ರವರ್ತಿ ನಿಕಟವರ್ತಿಯೊಬ್ಬರು ಪ್ರತಿಕ್ರಿಯಿಸಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ
ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ ಸೂಲಿಬೆಲೆ
ಹರಿಪ್ರಕಾಶ ಕೋಣೆಮನೆ
ಹರಿಪ್ರಕಾಶ ಕೋಣೆಮನೆ
ಪಕ್ಷ ಸ್ಪರ್ಧಿಸಲು ಅವಕಾಶ ನೀಡಿದರೆ ಸ್ವಾಗತಿಸುವೆ. ಅವಕಾಶ ನೀಡುವುದು ನಮ್ಮ ಅದೃಷ್ಟಕ್ಕೆ ಬಿಟ್ಟಿದ್ದು.
ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ನಾಯಕ
ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಶಿಫಾರಸ್ಸು ಆದ ಬಗ್ಗೆ‌‌‌ ಮಾಹಿತಿ ಇದೆ. ಎಲ್ಲವೂ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು.
ಹರಿಪ್ರಕಾಶ ಕೋಣೆಮನೆ ವಕ್ತಾರ ಬಿಜೆಪಿ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT