ಶಿರಸಿ: ಹನ್ನೊಂದು ತಾಲ್ಲೂಕುಗಳಿರುವ ಅಖಂಡ ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ, ಘಟ್ಟದ ಮೇಲಿನ ತಾಲ್ಲೂಕುಗಳನ್ನೊಳಗೊಂಡು ಶಿರಸಿ ಜಿಲ್ಲೆ ರಚಿಸಬೇಕೆಂಬುದು ಹಳೆಯ ಬೇಡಿಕೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನೂತನವಾಗಿ ವಿಜಯನಗರ, ಚಿಕ್ಕೋಡಿ, ಶಿಕಾರಿಪುರ ಜಿಲ್ಲೆ ಮಾಡಲು ಯೋಜನೆ ರೂಪಿಸುತ್ತಿರುವ ಸಂದರ್ಭದಲ್ಲಿ ಶಿರಸಿ ಜಿಲ್ಲೆ ರಚನೆಯ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಸ್ಥಳೀಯ ಶಾಸಕರು, ಸಂಸದರು ತಮ್ಮದೇ ಪಕ್ಷದ ಸರ್ಕಾರವಿದ್ದರೂ, ಈ ಬಗ್ಗೆ ಧ್ವನಿ ಎತ್ತದೇ ಮೌನವಹಿಸಿರುವುದು ಸಹ ಜನರ ಅಚ್ಚರಿಗೆ ಕಾರಣವಾಗಿದೆ.

ಕರಾವಳಿ, ಮಲೆನಾಡು ಹಾಗೂ ಅರೆಬಯಲು ಸೀಮೆ ಒಳಗೊಂಡಿರುವ, ಮೂರು ವಿಭಿನ್ನ ಸಂಸ್ಕೃತಿಗಳು ಮೇಳೈಸಿರುವ ವಿಶಿಷ್ಟ ಜಿಲ್ಲೆ ಉತ್ತರ ಕನ್ನಡ. ಶೇ 80ರಷ್ಟು ಅರಣ್ಯ ಪ್ರದೇಶ ಹೊಂದಿರುವ ಈ ಜಿಲ್ಲೆಗೆ ಕಾಡಿನ ಜಿಲ್ಲೆ ಎಂದೇ ಕರೆಯುತ್ತಾರೆ. ಜಿಲ್ಲೆಯು 10,277 ಕಿ.ಮೀ ವಿಶಾಲವಾದ ಭೌಗೋಳಿಕ ಪ್ರದೇಶ ಹೊಂದಿದೆ.

ಕರಾವಳಿಯಲ್ಲಿ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ತಾಲ್ಲೂಕುಗಳು ಇದ್ದರೆ, ಘಟ್ಟದ ಮೇಲೆ, ಶಿರಸಿ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳು ಇವೆ. ಇದರ ಜೊತೆ ಹೊಸದಾಗಿ ರಚನೆಯಾಗಿರುವ ದಾಂಡೇಲಿ ತಾಲ್ಲೂಕು ಸಹ ಇದೆ. ಜಿಲ್ಲೆಯು ಒಟ್ಟು ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮೂರು ಕರಾವಳಿಯಲ್ಲಿದ್ದರೆ, ಇನ್ನು ಮೂರು ಕ್ಷೇತ್ರಗಳು ಘಟ್ಟದ ಮೇಲಿನ ಭಾಗದಲ್ಲಿವೆ.

ಜಿಲ್ಲೆಯು ನಾಲ್ಕು ಕಂದಾಯ ಉಪವಿಭಾಗಗಳನ್ನು ಹೊಂದಿದೆ. ಭಟ್ಕಳ, ಕುಮಟಾ, ಕಾರವಾರ ಹಾಗೂ ಶಿರಸಿ. ಭಟ್ಕಳ ಉಪವಿಭಾಗಕ್ಕೆ ಭಟ್ಕಳ, ಹೊನ್ನಾವರ ಸೇರಿದರೆ, ಕುಮಟಾ ಉಪವಿಭಾಗಕ್ಕೆ ಕುಮಟಾ, ಅಂಕೋಲಾ, ಕಾರವಾರಕ್ಕೆ ಕಾರವಾರ, ಜೊಯಿಡಾ, ಹಳಿಯಾಳ, ಶಿರಸಿ ಉಪವಿಭಾಗಕ್ಕೆ ಮುಂಡಗೋಡ, ಯಲ್ಲಾಪುರ, ಶಿರಸಿ, ಸಿದ್ದಾಪುರ ತಾಲ್ಲೂಕುಗಳು ಸೇರಿವೆ.

ಯಾಕಾಗಿ ಪ್ರತ್ಯೇಕ ಜಿಲ್ಲೆಯ ಬೇಡಿಕೆ ?:ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರ. ಸಿದ್ದಾಪುರ ತಾಲ್ಲೂಕು ಮನ್ಮನೆಯಿಂದ ಜಿಲ್ಲಾ ಕೇಂದ್ರಕ್ಕೆ ಹೋಗಬೇಕೆಂದರೆ ಕನಿಷ್ಠ 200 ಕಿ.ಮೀ ಪ್ರಯಾಣಿಸಬೇಕು. ಮುಂಡಗೋಡ ತಾಲ್ಲೂಕಿನ ಒಳಹಳ್ಳಿಗಳಿಗೆ ಕಾರವಾರ ಸುಮಾರು 170 ಕಿ.ಮೀ ದೂರ. ಈ ಹಳ್ಳಿಗರು ಜಿಲ್ಲಾ ಕೇಂದ್ರದಲ್ಲಿ ಕೆಲಸವಿದ್ದರೆ ಒಂದು ದಿನ ಮೀಸಲಿಡಬೇಕು. ಜೊತೆಗೆ ಪ್ರಯಾಣ, ಊಟದ ವೆಚ್ಚ ಕೂಡ ದುಬಾರಿ.

* ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೆ, ಜಿಲ್ಲಾ ಕೇಂದ್ರಕ್ಕೆ ಹೋಗಬೇಕು. ಕಂದಾಯ ಪ್ರಕರಣಗಳು ಒಂದೇ ವಿಚಾರಣೆಯಲ್ಲಿ ಇತ್ಯರ್ಥವಾಗುವುದಿಲ್ಲ. ಪ್ರಕರಣದ ಆದೇಶ ಹೊರಬೀಳುವ ತನಕ ಜಿಲ್ಲಾ ಕೇಂದ್ರದ ಓಡಾಟ ತಪ್ಪುವುದಿಲ್ಲ.

* ಕೃಷಿ ಬಂದೂಕು ಲೈಸೆನ್ಸ್ ನವೀಕರಣಕ್ಕೆ, ಬಂದೂಕು ಪರವಾನಗಿ ಹೊಂದಿರುವ ಪ್ರತಿಯೊಬ್ಬ ರೈತ ಕಾರವಾರಕ್ಕೆ ಹೋಗಬೇಕು. ರೈತರು ಹೋದಾಗ ಜಿಲ್ಲಾಧಿಕಾರಿ ಅಥವಾ ಸಂಬಂಧಪಟ್ಟ ಅಧಿಕಾರಿ ಲಭ್ಯವಿಲ್ಲದಿದ್ದರೆ ಮತ್ತೊಂದು ದಿನವನ್ನು ಇದಕ್ಕಾಗಿ ವ್ಯಯ ಮಾಡಬೇಕು.

* ಜಿಲ್ಲಾ ಮಟ್ಟದ ಬಹುತೇಕ ಎಲ್ಲ ಕಚೇರಿಗಳು ಕಾರವಾರದಲ್ಲಿವೆ. ಹೀಗಾಗಿ ಈ ಕಚೇರಿಗಳಲ್ಲಿ ಯಾವುದೇ ಕೆಲಸವಿದ್ದರೂ ಕಾರವಾರಕ್ಕೆ ಹೋಗಬೇಕಾಗುತ್ತದೆ.

* ಜಿಲ್ಲಾ ಮಟ್ಟದ ಸಭೆಗಳು, ವಿಡಿಯೊ ಕಾನ್ಫರೆನ್ಸ್ ಇನ್ನಿತರ ಕಾರಣಗಳಿಗೆ ಉಪವಿಭಾಗ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ವಾರದಲ್ಲಿ 2–3 ಬಾರಿ ಕಾರವಾರಕ್ಕೆ ಹೋಗುತ್ತಾರೆ. ಪ್ರಯಾಣಕ್ಕೆಂದೇ ಈ ಅಧಿಕಾರಿಗಳು ಕನಿಷ್ಠ ಆರು ತಾಸು ಮೀಸಲಿಡಬೇಕು.

* ಹಳ್ಳಿಯಿಂದ ಬರುವ ರೈತರಿಗೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯವಿರುವ ದಿನಗಳ ಮಾಹಿತಿ ಇರುವುದಿಲ್ಲ. ಅಧಿಕಾರಿಗಳ ಜಿಲ್ಲಾ ಕೇಂದ್ರದ ಒಡಾಟದಿಂದ ಸಾಮಾನ್ಯ ಜನರು ತಮ್ಮ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ.

* ವಾಸ್ತವದಲ್ಲಿ ಜಿಲ್ಲಾ ಕೇಂದ್ರ ಕಾರವಾರ ಆಗಿದ್ದರೂ, ವಾಣಿಜ್ಯ ಚಟುವಟಿಕೆ ಕೇಂದ್ರ ಶಿರಸಿ. ಘಟ್ಟದ ಮೇಲಿನ ಎಲ್ಲ ತಾಲ್ಲೂಕುಗಳಿಗೆ ಇದು ಕೇಂದ್ರ ಸ್ಥಾನ. ಕಾರವಾರಕ್ಕೆ ವಾಹನ ಸೌಲಭ್ಯ (ಬಸ್ ಸಂಚಾರ) ಅತಿ ಕಡಿಮೆ, ಆದರೆ ಶಿರಸಿಗೆ ಎಲ್ಲ ಕಡೆಗಳಿಂದಲೂ ಸಾಕಷ್ಟು ಬಸ್ ವ್ಯವಸ್ಥೆಯಿದೆ.

* ಕಾಂಗ್ರೆಸ್, ಬಿಜೆಪಿ ಪಕ್ಷಗಳು ಜಿಲ್ಲಾ ಘಟಕದ ಕಚೇರಿಯನ್ನು ರಾಜಕೀಯ ಚಟುವಟಿಕೆಯ ಕೇಂದ್ರವಾಗಿರುವ ಶಿರಸಿಯಲ್ಲಿ ಹೊಂದಿವೆ.

ಬನವಾಸಿ ತಾಲ್ಲೂಕಾಗಬೇಕು:ಕನ್ನಡದ ಪ್ರಥಮ ರಾಜಧಾನಿ ಬನವಾಸಿಯು ಶಿರಸಿ ತಾಲ್ಲೂಕಿನಲ್ಲಿದೆ. 74 ಹಳ್ಳಿಗಳನ್ನು ಹೊಂದಿರುವ ಬನವಾಸಿ ಹೋಬಳಿಯನ್ನು ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿ ಜೊತೆ ಸೇರಿಸಿ, ಪ್ರತ್ಯೇಕ ಆನವಟ್ಟಿ ತಾಲ್ಲೂಕು ರಚನೆಯ ಪ್ರಸ್ತಾಪ ಸರ್ಕಾರದ ಮುಂದಿದೆ ಎಂಬ ಸುದ್ದಿ, ಇಲ್ಲಿನ ಜನರನ್ನು ಕೆರಳಿಸಿದೆ. ಯಾವುದೇ ಕಾರಣಕ್ಕೂ ಬನವಾಸಿಯನ್ನು ಈ ಜಿಲ್ಲೆಯಿಂದ ಹೊರ ಹೋಗಲು ಬಿಡುವುದಿಲ್ಲ ಎಂದು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

‘ಉತ್ತರ ಕನ್ನಡ ಜಿಲ್ಲೆಯನ್ನು ಕರಾವಳಿ ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ತಾಲ್ಲೂಕುಗಳನ್ನು ಒಳಗೊಂಡು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು. ಘಟ್ಟದ ಮೇಲಿನ ತಾಲ್ಲೂಕು ಒಳಗೊಂಡು ಶಿರಸಿ ಜಿಲ್ಲೆ ಮಾಡಬೇಕು ಎಂಬ ಕೂಗು ಬಹಳ ಹಿಂದಿನಿಂದ ಕೇಳಿಬರುತ್ತಿದೆ. ಕಾರವಾರ ಮೂಲೆಯಲ್ಲಿರುವುದರಿಂದ ಜನರಿಗೆ ದೈನಂದಿನ ಕೆಲಸಕ್ಕೆ ಹೋಗಿ ಬರಲು ಕಷ್ಟ. ದಕ್ಷಿಣ ಕನ್ನಡವನ್ನು ವಿಭಜಿಸಿ, ಉಡುಪಿ ಮತ್ತು ಮಂಗಳೂರು ಜಿಲ್ಲೆ ಮಾಡಿದಂತೆ, ಉತ್ತರ ಕನ್ನಡವನ್ನು ಇದೇ ರೀತಿ ಮಾಡಬಹುದು. ಈ ವಿಚಾರ ಸರ್ಕಾರವನ್ನು ಅವಲಂಬಿಸಿದೆ’ ಎನ್ನುವುದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಅಭಿಪ್ರಾಯ.

ಕದಂಬ ಜಿಲ್ಲೆಯಾಗಲಿ:ಆಡಳಿತಾತ್ಮಕ ಅನುಕೂಲತೆ, ಜಿಲ್ಲೆಯ ಪರಂಪರೆ ಉಳಿಸಿಕೊಳ್ಳುವ ಉದ್ದೇಶದಿಂದ ಬನವಾಸಿಯನ್ನು ತಾಲ್ಲೂಕನ್ನಾಗಿ ಮಾಡಬೇಕು. ದಾಂಡೇಲಿ ಈಗಾಗಲೇ ತಾಲ್ಲೂಕಾಗಿ ಘೋಷಣೆಯಾಗಿದೆ. ಹಾಲಿ ಇರುವ ಆರು ತಾಲ್ಲೂಕು ಹಾಗೂ ಬನವಾಸಿ, ದಾಂಡೇಲಿ ಸೇರಿ ಒಟ್ಟು ಎಂಟು ತಾಲ್ಲೂಕುಗಳನ್ನು ಸೇರಿಸಿ ‘ಕದಂಬ ಜಿಲ್ಲೆ’ ಎಂಬ ರೂಪ ಕೊಡಬೇಕು. ಆಡಳಿತಾತ್ಮಕವಾಗಿಯೂ ಇದು ಹೆಚ್ಚು ಅನುಕೂಲ. ಸರ್ಕಾರ ಈ ಬಗ್ಗೆ ತನ್ನ ಯೋಚನೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ ಮುಖಂಡ ಶಶಿಭೂಷಣ ಹೆಗಡೆ.

ಶಿರಸಿ ಜಿಲ್ಲೆಯಾಗಬೇಕೆಂಬುದು ಹಲವಾರು ವರ್ಷಗಳ ಕೂಗು. ಈಗಾಗಲೇ ಶೈಕ್ಷಣಿಕ ಜಿಲ್ಲೆಯಾಗಿರುವ ಶಿರಸಿಯನ್ನು ಯಾಕೆ ಕಂದಾಯ ಜಿಲ್ಲೆಯಾಗಿ ಮಾಡಿಕೊಡಬಾರದು ? ವಿಜಯನಗರ ಜಿಲ್ಲೆ ಪ್ರಸ್ತಾಪವಾಗಿದೆ. ಶಿರಸಿ ಜಿಲ್ಲೆ ರಚನೆಯ ಬೇಡಿಕೆ ಹಳೆಯ ಬೇಡಿಕೆ. ಇದನ್ನು ಯಾಕೆ ಪರಿಗಣಿಸುತ್ತಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ಮುಂದೆ ದೊಡ್ಡ ಮಟ್ಟದ ಹೋರಾಟ ಅನಿವಾರ್ಯ ಎನ್ನುತ್ತಾರೆ ಕದಂಬ ಸೈನ್ಯ ಸಂಘಟನೆ ಸಂಚಾಲಕ ಉದಯಕುಮಾರ ಕಾನಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.