ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೊಯಿಡಾ | ಹದಗೆಟ್ಟ ರಾಜ್ಯ ಹೆದ್ದಾರಿ: ಸವಾರರಿಗೆ ಫಜೀತಿ

ನಿರಂತರ ಮಳೆಯಿಂದಾಗಿ 14 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹೊಂಡಮಯ
ಜ್ಞಾನೇಶ್ವರ ದೇಸಾಯಿ
Published : 12 ಸೆಪ್ಟೆಂಬರ್ 2024, 6:28 IST
Last Updated : 12 ಸೆಪ್ಟೆಂಬರ್ 2024, 6:28 IST
ಫಾಲೋ ಮಾಡಿ
Comments

ಜೊಯಿಡಾ: ತಾಲ್ಲೂಕಿಗೆ ಜಿಲ್ಲಾಕೇಂದ್ರವನ್ನು ಸಂಪರ್ಕಿಸುವ ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿ–34ರ ದುಸ್ಥಿತಿಯಿಂದಾಗಿ ಸವಾರರು ಪರದಾಡುವಂತಾಗಿದೆ.

ರಾಜ್ಯ ಹೆದ್ದಾರಿಯು ಅಣಶಿಯಿಂದ ಗುಂಡಾಳಿ ಗ್ರಾಮದವರೆಗೆ ಸಂಪೂರ್ಣ ಹಾಳಾಗಿದೆ. ರಸ್ತೆ ಪೂರ್ತಿ ಹೊಂಡಗಳೇ ತುಂಬಿದ್ದು ವಾಹನ ಸವಾರರು ಸುಗಮ ಸಂಚಾರ ನಡೆಸಲು ಸಾಧ್ಯವೇ ಇಲ್ಲದಂತಾಗಿದೆ ಎಂಬ ದೂರು ವ್ಯಾಪಕವಾಗಿದೆ.

ಪ್ರತಿದಿನವೂ ಸುಮಾರು ಹತ್ತಾರು ಸಾರಿಗೆ ಸಂಸ್ಥೆಯ ಬಸ್‍ಗಳು ಸೇರಿದಂತೆ ನೂರಾರು ವಾಹನಗಳು ದಾಂಡೇಲಿ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಗೆ ಕಾರವಾರದಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಜಿಲ್ಲಾ ಕೇಂದ್ರ ಕಾರವಾರ ಹಾಗೂ ತಾಲ್ಲೂಕಿನ ಬಹು ಜನರು ಉದ್ಯೋಗಕ್ಕಾಗಿ ಅವಲಂಬಿಸಿರುವ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯ ಸುಮಾರು 14 ಕಿ.ಮೀ ಉದ್ದದ ರಸ್ತೆ ಸತತ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ.

‘ಕುಂಬಾರವಾಡ–ಜೊಯಿಡಾ ಮಾರ್ಗದಲ್ಲಿ ಕಿರವತ್ತಿ ಮತ್ತು ದೋಣಪಾದಲ್ಲಿಯೂ ರಸ್ತೆ ಹೊಂಡಗಳಿಂದ ತುಂಬಿದೆ. ಮಳೆಯಿಂದಾಗಿ ರಸ್ತೆಯಲ್ಲಿ ಬಹುತೇಕ ಕಡೆಗಳಲ್ಲಿ ನೀರು ಹರಿಯುತ್ತಿದ್ದು ಜೊತೆಗೆ ಮಳೆ ನೀರು ಗುಂಡಿಗಳಲ್ಲಿ ತುಂಬಿರುವುದರಿಂದ ‌ಗುಂಡಿಗಳ ಆಳ ಅರಿಯಲಾಗದೆ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಬಾಡಪೋಲಿಯ ಬಾಬು ದೇಸಾಯಿ.

‘ರಾಜ್ಯ ಹೆದ್ದಾರಿ ದುಸ್ಥಿತಿಯಿಂದ ಪ್ರತಿದಿನವೂ ನಿರಂತರವಾಗಿ ಈ ಭಾಗದಲ್ಲಿ ಅಪಘಾತ ಸಂಭವಿಸುತ್ತಿದೆ. ರಸ್ತೆಯ ದುಸ್ಥಿತಿಯ ಮಾಹಿತಿ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೂ ಇದೆ. ಗಣೇಶ ಚತುರ್ಥಿ ಪೂರ್ವ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕಿತ್ತು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಮದ ವಾಹನಗಳಿಗೆ ಹಾನಿಯಾಗುತ್ತಿದೆ’ ಎನ್ನುತ್ತಾರೆ ನಿಗುಂಡಿಯ ಅಶೋಕ ದೇಸಾಯಿ.

‘ಹೆದ್ದಾರಿ ಹಾಳಾಗಿ ವರ್ಷ ಕಳೆದರೂ, ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಬಸ್‍ಗಳು ನಿಲುಗಡೆ ಆಗುತ್ತಿಲ್ಲ. ಮಳೆಗಾಲದಲ್ಲಿ ಬಹುತೇಕ ದಿನಗಳಲ್ಲಿ ವಿದ್ಯುತ್, ನೆಟ್ವರ್ಕ್ ಇಲ್ಲದೆ ಜನರು ಕತ್ತಲೆಯಲ್ಲಿದ್ದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯುತ್ತಿಲ್ಲ’ ಎಂದು ಬಾಡಪೋಲಿ, ಬಾಕಿತ ಮತ್ತು ನಿಗುಂಡಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿ–34 ಅಭಿವೃದ್ಧಿಗೆ ₹3 ಕೋಟಿ ರೂಪಾಯಿ ಅನುದಾನ ಬಂದಿದ್ದು ಸುಮಾರು 3 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
ಶಿವಪ್ರಕಾಶ ಶೇಟ್ ಲೋಕೋಪಯೋಗಿ ಇಲಾಖೆ ಎಇಇ
ಬಸ್ ನಿಲುಗಡೆ ಸ್ಥಗಿತದಿಂದ ಸಮಸ್ಯೆ
‘ರಾಜ್ಯ ಹೆದ್ದಾರಿ–34 ರಸ್ತೆ ತೀರಾ ಹದಗೆಟ್ಟಿದ್ದರಿಂದ ಕಾರು ಸೇರಿದಂತೆ ಸಣ್ಣ ವಾಹನಗಳು ಈ ಭಾಗದಲ್ಲಿ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಕುಮಟಾ–ಕೊಲ್ಹಾಪುರ ಉಡುಪಿ-ಬೆಳಗಾವಿ ಕಾರವಾರ- ಪಿಂಪ್ರಿ ಮುಂತಾದ ಸಾರಿಗೆ ಬಸ್‍ಗಳು  ಬಾಡಪೋಲಿ ನಿಗುಂಡಿ ದುದಗಾಳಿ ಮಾಸೇತ ಮತ್ತು ಗುಂಡಾಳಿಯಲ್ಲಿ ರಸ್ತೆಯ ಕಾರಣ ನೀಡಿ ಸದ್ಯ ನಿಲುಗಡೆಯಾಗುತ್ತಿಲ್ಲ. ಇದರಿಂದಾಗಿ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿದ್ಯಾರ್ಥಿಗಳು ಜನರು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ’ ಎನ್ನುತ್ತಾರೆ ಬಾಕಿತ ಗ್ರಾಮದ ಪ್ರಕಾಶ ವೇಳಿಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT