ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನ್ನಾವರ | ನರ್ಸರಿಯಲ್ಲಿ ಹಸಿರ ಸಂತೆ: ನಾಟಿಗೆ ಸಿದ್ಧವಾದ ಸಸಿಗಳು

8 ಸಸ್ಯಪಾಲನಾ ಕೇಂದ್ರಗಳಲ್ಲಿ ಸಿದ್ಧವಾಗಿವೆ 22,12,445 ಸಸಿಗಳು
ಎಂ.ಜಿ. ಹೆಗಡೆ
Published 30 ಮೇ 2024, 4:06 IST
Last Updated 30 ಮೇ 2024, 4:06 IST
ಅಕ್ಷರ ಗಾತ್ರ

ಹೊನ್ನಾವರ: ಅರಣ್ಯ ಇಲಾಖೆಯ ವಿವಿಧ ಸಸ್ಯಪಾಲನಾ ಕೇಂದ್ರಗಳು ಹಸಿರಿನಿಂದ ನಳನಳಿಸುತ್ತಿದ್ದು ಅಲ್ಲಿ ಪೋಷಿಸಲಾಗಿರುವ ಲಕ್ಷಾಂತರ ಸಸಿಗಳು ನಾಟಿಗಾಗಿ ಮಳೆಗಾಲದ ಆಗಮನ ಎದುರು ನೋಡುತ್ತಿವೆ.

ಕುಮಟಾ ತಾಲ್ಲೂಕಿನ ಹಿರೇಗುತ್ತಿ ವಲಯ ವ್ಯಾಪ್ತಿಯ ನಾಗೂರು, ಕತಗಾಲ ವಲಯದ ಬೆಳಂಗಿ, ಕುಮಟಾ ವಲಯ ವ್ಯಾಪ್ತಿಯ ಕೀರ್ತಿಗದ್ದೆ, ಮಂಕಿ ವಲಯ ವ್ಯಾಪ್ತಿಯ ಸೂಲೆಬೀಳು, ಬೇರಂಕಿ, ಗೇರುಸೊಪ್ಪ ವಲಯ ವ್ಯಾಪ್ತಿಯ ಶರಾವತಿ, ಹೊನ್ನಾವರ ವಲಯ ವ್ಯಾಪ್ತಿಯ ಕಾಸರಕೋಡ ಹಾಗೂ ಭಟ್ಕಳ ತಾಲ್ಲೂಕಿನ ವೆಂಕಟಾಪುರ ಸೇರಿದಂತೆ ಹೊನ್ನಾವರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟೂ 8 ಸಸ್ಯಪಾಲನಾ ಕೇಂದ್ರಗಳಲ್ಲಿದ್ದು 22,12,445 ವಿವಿಧ ಜಾತಿಯ ಸಸಿಗಳು ಇಲ್ಲಿವೆ ಎಂಬುದು ಅರಣ್ಯ ಇಲಾಖೆ ನೀಡುವ ಅಧಿಕೃತ ಮಾಹಿತಿ.

ಹೊಳೆದಾಸವಾಳ, ಮುತ್ತುಗ, ತಾರೆ, ಮಹೋಗನಿ, ರಾಮಪತ್ರೆ, ಹೊನ್ನೆ, ಸೀತಾ, ಅಶೋಕ, ಅಮಟೆ, ಏಕನಾಯಕ, ಮತ್ತಿ, ಹೊಂಗೆ, ಬೆಟ್ಟೊನ್ನೆ, ಕದಂಬ, ಉಪ್ಪಾಗೆ, ಬರಣಗಿ, ಬೀಟೆ ಮೊದಲಾದ ಸಸಿಗಳ ಜೊತೆ ನೇರಳೆ, ಮಾವು, ಹಲಸು, ಮುರುಗಲು ಇತ್ಯಾದಿ ಹಣ್ಣಿನ ಗಿಡಗಳೂ ಇವೆ. ಸಾಗವಾನಿ, ಬೆತ್ತ, ಅಕೇಶಿಯಾ ಮುಂತಾದ ಸಸಿಗಳೂ ನರ್ಸರಿಯಲ್ಲಿ ಬೆಳೆದು ನಿಂತಿವೆ. ವಿವಿಧ ಆಕಾರದ ಚೀಲಗಳಲ್ಲಿ ಹಾಕಿರುವ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಸಸಿಗಳನ್ನು ಬೆಳೆಸಲಾಗಿದ್ದು ಸಸಿಗಳ ಪಾಲನೆ-ಪೋಷಣೆಗೆ ಅರಣ್ಯ ಇಲಾಖೆಯ ಸಿಬ್ಬಂದಿ, ಕೂಲಿಕಾರರು ಶ್ರಮಿಸಿದ್ದಾರೆ. ಇಲಾಖೆಯ ವಿವಿಧ ಯೋಜನೆಗಳ ಅಡಿಯಲ್ಲಿ ಅರಣ್ಯೀಕರಣ ಹಾಗೂ ಸಾರ್ವಜನಿಕ ವಿತರಣೆಗೆಂದು ಸಸಿಗಳನ್ನು ಪ್ರತ್ಯೇಕವಾಗಿ ಬೆಳೆಸಲಾಗಿದೆ.

ತಮ್ಮ ನರ್ಸರಿಗಳಲ್ಲಿರುವ ಸಸಿಗಳನ್ನು ಹೆಮ್ಮೆಯಿಂದ ತೋರಿಸುವ ಇಲಾಖೆಯ ಅಧಿಕಾರಿಗಳು ಸಸಿಗಳನ್ನು ನೆಡುವ ಜಾಗದ ವಿಸ್ತೀರ್ಣ ಹಾಗೂ ವಿವಿಧ ವರ್ಷಗಳಲ್ಲಿ ನೆಡುವ ಸಸಿಗಳ ಸಂಖ್ಯೆಯ ಕುರಿತು ಮಾಹಿತಿ ನೀಡುವಲ್ಲಿ ಅದೇ ಉತ್ಸಾಹ ತೋರುತ್ತಿಲ್ಲ.ಕಳೆದ ವರ್ಷಕ್ಕೆ ಹೋಲಿಸಿದರೆ ನಾಟಿ ಸಸಿಗಳ ಸಂಖ್ಯೆ ಹಾಗೂ ಜಾಗದ ವಿಸ್ತೀರ್ಣದಲ್ಲಿ ಈ ವರ್ಷ ಗಣನೀಯ ಇಳಿಕೆಯಾಗಿರುವುದು ಇವರ ನಿರುತ್ಸಾಹಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕಾಸರಕೋಡ, ಗೇರುಸೊಪ್ಪ ಎರಡೇ ಕೇಂದ್ರಗಳನ್ನು ಗಣನೆಗೆ ತೆಗೆದುಕೊಂಡರೂ ಸಸಿಗಳ ಸಂಖ್ಯೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಇಳಿಕೆಯಾಗಿದೆ.

ಜಿಲ್ಲೆಯಲ್ಲಿ ಅರಣ್ಯ ಭೂಮಿ ಹೆಚ್ಚಿದೆಯಾದರೂ ಸಸಿಗಳನ್ನು ನಾಟಿ ಮಾಡಲು ಅರಣ್ಯ ಇಲಾಖೆಗೆ ಜಾಗದ ಕೊರತೆಯಾಗಿರುವುದು ವಿಪರ್ಯಾಸದ ಸಂಗತಿ ಎಂಬ ವ್ಯಂಗ್ಯ ಸಾರ್ವಜನಿಕರಿಂದ ಕೇಳಿಬರುತ್ತಿದೆ. ‘ಕೃಷಿ, ಗಣಿಗಾರಿಕೆ, ವ್ಯಾಪಾರ ಮೊದಲಾದ ಕಾರಣಗಳಿಂದ ಅರಣ್ಯ ಭೂಮಿಯ ಅತಿಕ್ರಮಣ ವ್ಯಾಪಕವಾಗಿದ್ದು ಅತಿಕ್ರಮಿತ ಜಾಗದಲ್ಲಿ ಅರಣ್ಯೀಕರಣ ಪ್ರಕ್ರಿಯೆಗೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ’ ಎಂಬ ಆಪಾದನೆಯೂ ಇದೆ.

ಹೊನ್ನಾವರ ಸಮೀಪ ಕಾಸರಕೋಡನಲ್ಲಿರುವ ಸಸ್ಯಪಾಲನಾ ಕೇಂದ್ರ
ಹೊನ್ನಾವರ ಸಮೀಪ ಕಾಸರಕೋಡನಲ್ಲಿರುವ ಸಸ್ಯಪಾಲನಾ ಕೇಂದ್ರ

ಅನುದಾನದ ಕೊರತೆ ಇರುವುದರಿಂದ ಈ ವರ್ಷ ನಾಟಿ ಮಾಡುವ ಸಸಿಗಳ ಸಂಖ್ಯೆಯಲ್ಲಿ ಕಡಿತವಾಗಿದೆ. ಅರಣ್ಯ ಅತಿಕ್ರಮಣ ತಡೆಗಟ್ಟುವುದಕ್ಕಾಗಿ ಅಂಥ ಜಾಗ ಗುರುತಿಸಿ ಅಲ್ಲಿ ಗಿಡ ನೆಡಲಾಗುವುದು

–ಯೋಗೇಶ ಸಿ.ಕೆ. ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT