ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ‘ಗೃಹಲಕ್ಷ್ಮಿ’ಯ ಖಾತೆಗೆ ಸಂದಾಯವಾಗದ ಹಣ

Published 24 ಡಿಸೆಂಬರ್ 2023, 23:30 IST
Last Updated 24 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಕಾರವಾರ: ಮಹಿಳೆಯರ ಖಾತೆಗೆ ಮಾಸಿಕ ತಲಾ ₹2 ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಐದು ತಿಂಗಳು ಕಳೆದರೂ ಜಿಲ್ಲೆಯಲ್ಲಿ ಬಹುಪಾಲು ಫಲಾನುಭವಿಗಳು ಯೋಜನೆಯ ಲಾಭದಿಂದ ವಂಚಿತರಾಗಿದ್ದಾರೆ.

ಜಿಲ್ಲೆಯಲ್ಲಿ 3.46 ಲಕ್ಷದಷ್ಟು ‘ಗೃಹಲಕ್ಷ್ಮಿ’ಯರು ಇದ್ದಾರೆ ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಡಿತರ ದಾಖಲೆ ಆಧರಿಸಿ ಗುರುತಿಸಿತ್ತು. ಈ ಪೈಕಿ 3.08 ಲಕ್ಷ ಮಂದಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಶೇ 5.34 ರಷ್ಟು ಜನರಿಗೆ ಮಾತ್ರ ಮೂರನೆ ಕಂತಿನ ಮೊತ್ತ ಪಾವತಿಯಾಗಿದೆ ಎಂದು ಇಲಾಖೆಯ ದಾಖಲೆಗಳು ಹೇಳುತ್ತಿವೆ.

ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಬಹುಪಾಲು ಫಲಾನುಭವಿಗಳ ಖಾತೆಗೆ ಈವರೆಗೂ ಹಣ ಸಂದಾಯವಾಗಿಲ್ಲ. ಕೆಲವರಿಗೆ ಮೊದಲ ಕಂತಿನ ಪಾವತಿಯಾದರೆ ಎರಡನೇ ಕಂತು ಬಂದಿಲ್ಲ. ಮತ್ತೆ ಕೆಲವರಿಗೆ ಮೊದಲೆರಡು ಕಂತು ಸಿಗದೆ ಮೂರನೆ ಕಂತು ಮಾತ್ರ ಸಿಕ್ಕಿದೆ.  ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ನಿತ್ಯ ಇಂತಹ ನೂರಾರು ದೂರುಗಳು ಸಲ್ಲಿಕೆಯಾಗುತ್ತಿದೆ.

‘ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದು ಬಡವರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇವೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ ಇನ್ನೂ ಒಂದು ಕಂತಿನ ಹಣವೂ ಬಂದಿಲ್ಲ. ಅರ್ಜಿ ಸಲ್ಲಿಕೆ ವೇಳೆ ಎಲ್ಲ ದಾಖಲೆಗಳನ್ನು ಸರಿಯಾಗಿ ನೀಡಿದ್ದರೂ ಹಣ ಸಿಕ್ಕಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಉತ್ತರವನ್ನೂ ನೀಡುತ್ತಿಲ್ಲ’ ಎಂದು ತಾಲ್ಲೂಕಿನ ತೊಡೂರು ಗ್ರಾಮದ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಂಡರು.

‘ಬ್ಯಾಂಕ್ ಖಾತೆಗೆ ಆಧಾರ್ ಮಾಹಿತಿ ಜೋಡಣೆ ಆಗದ ಕಾರಣ ಕೆಲವು ಖಾತೆಗಳಿಗೆ ಹಣ ಸಂದಾಯವಾಗುತ್ತಿಲ್ಲ. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟವರೂ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲಿದ್ದರು. ಅಂತಹವರಿಗೆ ಹಣ ಸಂದಾಯವಾಗುವುದನ್ನು ತಡೆಹಿಡಿಯಲಾಗಿದೆ. ಇಂತಹ ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಸಾವಿರಾರು ಅರ್ಜಿದಾರರಿಗೆ ಹಣ ಪಾವತಿಯಾಗುತ್ತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್.ಕುಕನೂರು ಹೇಳಿದರು.

‘ಆಗಸ್ಟ್ ತಿಂಗಳ ಮೊದಲ ಕಂತು 2.68 ಲಕ್ಷ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಯಿತು. ಸೆಪ್ಟೆಂಬರ್ ತಿಂಗಳಲ್ಲಿ ಫಲಾನುಭವಿಗಳ ಸಂಖ್ಯೆ 2.64 ಲಕ್ಷ ಕ್ಕೆ ಇಳಿಕೆಯಾಯಿತು. ಅಕ್ಟೋಬರ್ ತಿಂಗಳ ಫಲಾನುಭವಿಗಳ ಸಂಖ್ಯೆ 16,611ಕ್ಕೆ ಇಳಿಕೆಯಾಗಿದೆ. ಇದಕ್ಕೆ ತಾಂತ್ರಿಕ ಅಡಚಣೆಗಳು ಕಾರಣವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT