ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟ ಬಡಿಸಿದವರಿಗೆ ಉಪವಾಸ: ವರ್ಷದಿಂದ ವೇತನ ಕಾಣದ ಇಂದಿರಾ ಕ್ಯಾಂಟಿನ್ ಸಿಬ್ಬಂದಿ

Published 2 ಮೇ 2024, 3:21 IST
Last Updated 2 ಮೇ 2024, 3:21 IST
ಅಕ್ಷರ ಗಾತ್ರ

ಕಾರವಾರ: ‘ನಿತ್ಯ ನೂರಾರು ಜನರಿಗೆ ಕಡಿಮೆ ದರದಲ್ಲಿ ಉಪಹಾರ, ಊಟ ಬಡಿಸುತ್ತಿರುವ ನಮಗೆ ವರ್ಷದಿಂದಲೂ ವೇತನ ಸಿಕ್ಕಿಲ್ಲ. ಜನರಿಗೆ ಊಟ ಬಡಿಸಿ ನಾವು ಉಪವಾಸ ಬೀಳುವ ಸ್ಥಿತಿಗೆ ತಲುಪಿದ್ದೇವೆ’

ನಗರದ ಇಂದಿರಾ ಕ್ಯಾಂಟಿನ್‌ನಲ್ಲಿ ಗ್ರಾಹಕರೊಬ್ಬರಿಗೆ ಉಪ್ಪಿಟ್ಟು, ಚಹಾ ನೀಡುತ್ತಲೇ ಅಲ್ಲಿನ ಸಿಬ್ಬಂದಿಯೊಬ್ಬರು ಬೇಸರದಿಂದ ತಮ್ಮ ಸಮಸ್ಯೆ ಹೇಳಿಕೊಂಡಿದ್ದು ಹೀಗೆ.

‘ನಾಲ್ಕು ತಿಂಗಳಿನಿಂದ ಪಡಿತರದ ಮೊತ್ತ ಸಿಕ್ಕಿಲ್ಲ. ನೀರಿನ ಮೋಟಾರ್ ಕೆಟ್ಟರೆ, ಗ್ರೈಂಡರ್ ಕೆಟ್ಟು ನಿಂತರೆ, ಫ್ರಿಡ್ಜ್ ಹಾಳಾದರೆ ದುರಸ್ತಿಗೂ ಹಣ ಬರುತ್ತಿಲ್ಲ. ನಾವೇ ಸ್ವಂತ ವೆಚ್ಚ ಭರಿಸಿ ದುರಸ್ತಿ ಮಾಡಿಸಬೇಕಾಗುತ್ತಿದೆ. 14 ತಿಂಗಳಿನಿಂದ ವೇತನ ಬರದಿದ್ದರೂ ಅನಿವಾರ್ಯವಾಗಿ ಕಷ್ಟಪಟ್ಟು ದುಡಿಯುವ ಸ್ಥಿತಿ ಎದುರಾಗಿದೆ’ ಎಂದು ದಾಂಡೇಲಿಯ ಇಂದಿರಾ ಕ್ಯಾಂಟಿನ್‌ನ ಸಿಬ್ಬಂದಿಯೊಬ್ಬರು ಸಂಕಷ್ಟ ವಿವರಿಸಿದರು.

‘ಜನರಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಉಣಬಡಿಸುವ ಇಂದಿರಾ ಕ್ಯಾಂಟಿನ್‌ಗಳು ಜನಸ್ನೇಹಿಯೇನೋ ನಿಜ, ಆದರೆ ಅಲ್ಲಿ ದಿನವಿಡೀ ಬೆವರು ಹರಿಸಿ ದುಡಿಯುವ ಸಿಬ್ಬಂದಿ ಪಾಡೇನು? ಎಂದು ಯಾರೂ ನೋಡುತ್ತಿಲ್ಲ’ ಎಂದು ಕ್ಯಾಂಟಿನ್‌ ನಿರ್ವಹಣೆಯಲ್ಲಿ ತೊಡಗಿರುವ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ನಡೆಯುತ್ತಿರುವ ಏಳು ಇಂದಿರಾ ಕ್ಯಾಂಟಿನ್‌ಗಳ ಪೈಕಿ ಬಹುತೇಕ ಎಲ್ಲ ಕಡೆಯಲ್ಲಿಯೂ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ ಎಂಬ ಆರೋಪಗಳಿವೆ. ಕಾರವಾರ, ಯಲ್ಲಾಪುರದಲ್ಲಿ 9 ತಿಂಗಳಿನಿಂದ, ಭಟ್ಕಳ, ಮುಂಡಗೋಡದಲ್ಲಿ ಒಂದು ವರ್ಷದಿಂದ, ದಾಂಡೇಲಿಯಲ್ಲಿ 14 ತಿಂಗಳಿನಿಂದ, ಅಂಕೋಲಾದಲ್ಲಿ ಏಳು ತಿಂಗಳಿನಿಂದ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ ಎಂಬ ದೂರುಗಳಿವೆ.

ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿರುವ ನಾಲ್ಕು ಕ್ಯಾಂಟಿನ್‌ಗಳನ್ನು ಬೆಂಗಳೂರಿನ ಚೆಪ್ತಾಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕರಾವಳಿ ಭಾಗದಲ್ಲಿರುವ ಮೂರು ಕ್ಯಾಂಟಿನ್‌ಗಳ ನಿರ್ವಹಣೆಯಲ್ಲಿ ಗುತ್ತಿ ಬಸವೇಶ್ವರ ಎಂಬ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಗುತ್ತಿಗೆ ಪಡೆದುಕೊಂಡಿವೆ.

‘ಖರ್ಚಿಗೆ ಅಗತ್ಯವಿದ್ದಾಗ ಕಂಪನಿಯ ಮೇಲುಸ್ತುವಾರಿ ಸಿಬ್ಬಂದಿ ಹಣ ನೀಡುತ್ತಿದ್ದಾರೆ. ತೀರಾ ಆರ್ಥಿಕ ಮುಗ್ಗಟ್ಟು ಎದುರಾದಾಗ ಕೈಗಡ ರೂಪದಲ್ಲಿ ಹಣಕಾಸಿನ ಸಹಾಯ ಪಡೆದಿದ್ದೇವೆ. ಆದರೆ, ತಿಂಗಳ ವೇತನವನ್ನು ಸರಿಯಾಗಿ ನೀಡುತ್ತಿಲ್ಲ’ ಎಂದು ಕ್ಯಾಂಟಿನ್‌ ಸಿಬ್ಬಂದಿಯೊಬ್ಬರು ಹೇಳಿದರು.

‘ಪ್ರತಿ ಕ್ಯಾಂಟಿನ್‌ನಲ್ಲಿ ಅಡುಗೆ ತಯಾರಕರು, ಸಹಾಯಕರು, ಸ್ವಚ್ಛತೆಗಾರರು ಸೇರಿ ಐದು ಮಂದಿ ದುಡಿಯುತ್ತಿದ್ದೇವೆ. ಇಲ್ಲಿನ ದುಡಿಮೆ ಹಣವೇ ಜೀವನಕ್ಕೆ ಆಧಾರ. ವೇತನವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ’ ಎಂದೂ ಹೇಳಿದರು.

ಮಾರ್ಚ್ ಅಂತ್ಯದವರೆಗೂ ಬಿಲ್ ಪಾವತಿಯಾಗಿದೆ

‘ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಸಂಸ್ಥೆಗಳು ಇಂದಿರಾ ಕ್ಯಾಂಟಿನ್‌ ನಿರ್ವಹಣೆ ಮಾಡುತ್ತಿವೆ. ಪ್ರತಿ ಕ್ಯಾಂಟಿನ್‌ನಲ್ಲಿ ಖರ್ಚಾಗುವ ಉಪಹಾರ ಊಟದ ಲೆಕ್ಕವನ್ನು ನೀಡಿದ ಬಳಿಕ ಅವರಿಗೆ ಬಿಲ್ ಪಾವತಿಸಲಾಗುತ್ತಿದೆ. ಪ್ರತಿ ಪ್ಲೇಟ್ ಊಟಕ್ಕೆ ₹25 ಮೊತ್ತವನ್ನು ಸರ್ಕಾರದಿಂದ ಗುತ್ತಿಗೆ ಸಂಸ್ಥೆಗೆ ಪಾವತಿಸಲಾಗುತ್ತಿದೆ.

ಎರಡೂ ಸಂಸ್ಥೆಗಳಿಗೂ ಮಾರ್ಚ್ ಅಂತ್ಯದವರೆಗಿನ ಬಿಲ್ ಪಾವತಿಯಾಗಿದೆ. ಅಲ್ಲಿನ ಸಿಬ್ಬಂದಿಗೆ ವೇತನ ನೀಡದಿರುವ ಕುರಿತು ನಮಗೆ ದೂರು ಬಂದಿಲ್ಲ. ದೂರು ಬಂದರೆ ತಕ್ಷಣ ಕ್ರಮವಹಿಸಲಾಗುವುದು’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಭಾರ ಯೋಜನಾಧಿಕಾರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT