ಶಿರಸಿ: ಜೆಡಿಎಸ್ ಪ್ರಮುಖ ನಾಯಕರ ಜೊತೆಗಿನ ಭಿನ್ನಮತ ಶಮನ ಮಾಡಲು ಪಕ್ಷದ ಪ್ರಮುಖರಿಗೆ ಆಗದ ಕಾರಣ ರಾಜೀನಾಮೆ ನೀಡಿದ್ದು, ಅರಸಿಕೆರೆಯಿಂದ ಕಾಂಗ್ರೆಸ್ ಟಿಕೆಟ್ ಈಗಾಗಲೇ ಪಕ್ಕಾ ಆಗಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕ ಶಿವಲಿಂಗೇಗೌಡ ಹೇಳಿದರು.
ಶಿರಸಿಯಲ್ಲಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಭಾನುವಾರ ತಮ್ಮ ಬೆಂಬಲಿಗರ ಜೊತೆಗೂಡಿ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿ, ನಾಯಕರ ಜೊತೆ ಕೆಲ ಚಿಕ್ಕಪುಟ್ಟ ಭಿನ್ನಮತ ಇತ್ತು. ಅದನ್ನು ಶಮನ ಮಾಡಲು ಪಕ್ಷದ ವರಿಷ್ಠರಿಗೆ ಸಾಧ್ಯವಾಗಲಿಲ್ಲ. ಸಾಕಷ್ಟು ಮಾತುಕತೆಯ ನಂತರವೂ ಯಾವುದೇ ಪ್ರಯೋಜನವಾಗಲಿಲ್ಲ. ಇಂಥ ಸನ್ನಿವೇಶದಲ್ಲಿ ಪಕ್ಷ ಬಿಡುವುದು ಇಲ್ಲವೇ ಪಕ್ಷಾಂತರವೇ ಉಳಿದ ಮಾರ್ಗವಾಗಿದೆ. ಹೀಗಾಗಿ ರಾಜೀನಾಮೆ ನೀಡಿದ್ದು, ಕ್ಷೇತ್ರದ ಜನರ ಅಭಿಪ್ರಾಯದಂತೆ ಕಾಂಗ್ರೆಸ್ ಸೇರಲಿದ್ದೇನೆ ಎಂದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕ್ಷೇತ್ರಕ್ಕೆ ತೆರಳಿ ಜನರ ಬಳಿ ಬಹುಮತ ಕೇಳುತ್ತೇನೆ. ಈಗಾಗಲೇ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಅಂತಿಮವಾಗಿದ್ದು, ನಿಶ್ಚಿತವಾಗಿ ಗೆಲುವು ಪಡೆಯುತ್ತೇನೆ. ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದರು.
ರಾಜಕೀಯದಲ್ಲಿ ಯಾರು ಬೇಕಾದರೂ ಪಕ್ಷಾಂತರ ಮಾಡುತ್ತಾರೆ. ಅಣ್ಣತಮ್ಮಂದಿರೇ ಬೇರೆಯಾಗ್ತಾರೆ. ಋಣವಿದ್ದಷ್ಟು ದಿನ ಇರುತ್ತಾರೆ. ಋಣ ತೀರಿದ ಮೇಲೆ ಅವರವರ ದಾರಿಗೆ ಹೋಗಿತ್ತಾರೆ. ನಾನು ಕ್ಷೇತ್ರದ ಜನರು ಹೇಳಿದಂತೆ ರಾಜೀನಾಮೆ ನೀಡಿದ್ದೇನೆ. ಹಾಗಾಗಿ ಪಕ್ಷಾಂತರದ ಬಗ್ಗೆ ಯಾರೂ ತಪ್ಪು ತಿಳಿಯಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಯಾರು ಬೇಕಾದರೂ ಸವಾಲು ಹಾಕಲಿ, ಏನಾದರೂ ಮಾಡಲಿ. ನಾನು ಮಾತ್ರ ಸುಮ್ಮನಿದ್ದು ಎಲ್ಲವನ್ನೂ ಕ್ಷೇತ್ರದ ಜನರಿಗೆ ಬಿಡುತ್ತೇನೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.