ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ದಿಗಿಲು ಹುಟ್ಟಿಸಿದೆ ಒಣಗಿದ ಗಂಗಾವಳಿ ಒಡಲು

ಎರಡು ವಾರಗಳ ಬಳಿಕ ಕಾರವಾರ, ಅಂಕೋಲಾಕ್ಕೆ ನೀರು ಪೂರೈಕೆ ಸ್ಥಗಿತ?
Published 27 ಮಾರ್ಚ್ 2024, 4:38 IST
Last Updated 27 ಮಾರ್ಚ್ 2024, 4:38 IST
ಅಕ್ಷರ ಗಾತ್ರ

ಕಾರವಾರ: ಎರಡು ಲಕ್ಷಕ್ಕೂ ಹೆಚ್ಚು ಜನರ ಜಲದಾಹ ತಣಿಸುತ್ತಿದ್ದ ಗಂಗಾವಳಿ ನದಿಯ ಒಡಲು ಬತ್ತುವ ಹಂತಕ್ಕೆ ತಲುಪಿದ್ದು, ಏಪ್ರಿಲ್ ಮಧ್ಯಂತರದ ಬಳಿಕ ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನ ಭಾಗಶಃ ಪ್ರದೇಶಕ್ಕೆ ನೀರು ಪೂರೈಕೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಅಂಕೋಲಾ ತಾಲ್ಲೂಕಿನ ಹೊನ್ನಾಳಿ ಬಳಿಯಲ್ಲಿರುವ ಪಂಪ್‍ಹೌಸ್‍ನಿಂದ ನದಿಯ ನೀರನ್ನು ಎತ್ತಿ ಕಾರವಾರ ನಗರ, ಅಂಕೋಲಾ ಪಟ್ಟಣ, ಕದಂಬ ನೌಕಾನೆಲೆ, ಬಿಣಗಾದಲ್ಲಿರುವ ಗ್ರಾಸಿಮ್ ಇಂಡಸ್ಟ್ರೀಸ್, ಕಾರವಾರ ಮತ್ತು ಅಂಕೋಲಾದ 13 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇಷ್ಟೂ ಪ್ರದೇಶಗಳಿಗೆ ನಿತ್ಯ ಸರಾಸರಿ 18 ದಶಲಕ್ಷ ಲೀಟರ್ ನೀರು ಅಗತ್ಯವಿದೆ.

ಆದರೆ, ನದಿಯ ನೀರು ಎತ್ತುವ ಸ್ಥಳದಲ್ಲಿ ಸದ್ಯ 1.75 ಮೀಟರ್ ಎತ್ತರದವರೆಗೆ ಮಾತ್ರ ನೀರಿನ ಸಂಗ್ರಹವಿದೆ. ಒಳಹರಿವಿನ ಪ್ರಮಾಣ ಸಂಪೂರ್ಣ ನಿಂತಿದೆ. ಇದರಿಂದ ಮುಂದಿನ ಎರಡು ವಾರಗಳಿಗೆ ಪೂರೈಕೆ ಮಾಡಬಹುದಾದಷ್ಟು ಸಂಗ್ರಹ ಉಳಿದುಕೊಂಡಿರುವುದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಚಿಂತೆ ತಂದಿದೆ.

‘ಗಂಗಾವಳಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ನಿಂತಿದೆ. ಹೊನ್ನಳ್ಳಿಯ ಪಂಪ್‍ಹೌಸ್ ಬಳಿ ನೀರು ಸಂಗ್ರಹಣೆಗೆ ತಾತ್ಕಾಲಿಕವಾಗಿ ಮರಳಿನ ಚೀಲ ಅಡ್ಡಲಾಗಿಟ್ಟು ನೀರು ನಿಲ್ಲಿಸಿಡಲಾಗಿದೆ. ಅಲ್ಲಿಯೂ ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಸದ್ಯಕ್ಕೆ ಮುಂಜಾಗ್ರತೆ ಕ್ರಮವಾಗಿ ಪ್ರತಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಮ ನಾಯ್ಕ ತಿಳಿಸಿದರು.

‘ನದಿಯಲ್ಲಿ ಹಲವು ಕಡೆಗಳಲ್ಲಿ ಸ್ಥಳೀಯ ಗ್ರಾಮಸ್ಥರು ಮರಳಿನ ಚೀಲ, ಕಲ್ಲು ಬಳಸಿ ನೀರಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ಮಂಡಳಿಯ ಸಿಬ್ಬಂದಿ ಬಳಸಿಕೊಂಡು ತೆರವು ಮಾಡಲಾಗುತ್ತಿದೆ. ಈ ಮೂಲಕ ನೀರು ಎತ್ತುವ ಪ್ರದೇಶದಲ್ಲಿ ಹೆಚ್ಚು ನೀರು ಸಂಗ್ರಹಿಸಿ ಎರಡು ತಾಲ್ಲೂಕುಗಳಿಗೂ ನೀರು ಪೂರೈಕೆ ಮಾಡಲು ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಗಂಗಾವಳಿ ನದಿಪಾತ್ರದಲ್ಲಿರುವ ಕೆಲ ಗ್ರಾಮಗಳ ನೂರಾರು ರೈತರು ಅಡಿಕೆ ತೋಟ, ಗದ್ದೆಗಳಿಗೆ ನೀರು ಹಾಯಿಸಲು ನದಿಗೆ ಪಂಪ್‍ಸೆಟ್ ಅಳವಡಿಸಿ ನೀರನ್ನು ಸೇದುತ್ತಿದ್ದಾರೆ. ಇದರಿಂದ ನದಿಯಲ್ಲಿ ನೀರಿನ ಹರಿವು ಇಳಿಕೆಯಾಗುತ್ತಿದೆ. ಅವುಗಳಿಗೆ ಕಡಿವಾಣ ಹಾಕಿದರೆ ನೀರಿನ ಸಮಸ್ಯೆಯನ್ನು ಕೆಲದಿನಗಳ ಮಟ್ಟಿಗೆ ಮುಂದೂಡಲು ಸಾಧ್ಯ’ ಎಂದು ಅಧಿಕಾರಿಯೊಬ್ಬರು ಹೇಳಿದರು. 

ಗಂಗಾವಳಿ ನದಿಗೆ ಸ್ಥಳೀಯರು ನೀರು ಸಂಗ್ರಹಣೆಗೆ ಅಡ್ಡಲಾಗಿಟ್ಟಿದ್ದ ಮರಳಿನ ಚೀಲದ ಒಡ್ಡನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಿಬ್ಬಂದಿ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಗಂಗಾವಳಿ ನದಿಗೆ ಸ್ಥಳೀಯರು ನೀರು ಸಂಗ್ರಹಣೆಗೆ ಅಡ್ಡಲಾಗಿಟ್ಟಿದ್ದ ಮರಳಿನ ಚೀಲದ ಒಡ್ಡನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಿಬ್ಬಂದಿ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಕಾರವಾರ ಅಂಕೋಲಾಕ್ಕೆ ಕುಡಿಯುವ ನೀರು ಪೂರೈಕೆಗೆ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಾಯ್ದುಕೊಳ್ಳಲು ಕೆಲ ಕಠಿಣ ಕ್ರಮಗಳನ್ನು ಅನುಸರಿಸಬೇಕಾಗಿದೆ. ಇದನ್ನು ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ.

-ಶಿವರಾಮ ನಾಯ್ಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ

ಬ್ಯಾರೇಜ್ ನಿರ್ಮಾಣವಾಗಿದ್ದರೆ ಅನುಕೂಲ

ಅಂಕೋಲಾ ತಾಲ್ಲೂಕಿನ ಹೊನ್ನಾಳಿ ಬಳಿ ಗಂಗಾವಳಿ ನದಿಗೆ ಕುಡಿಯುವ ನೀರು ಸಂಗ್ರಹಕ್ಕೆ ವೆಂಟೆಡ್ ಬ್ಯಾರೇಜ್ (ಕಿಂಡಿ ಅಣೆಕಟ್ಟೆ) ನಿರ್ಮಾಣಕ್ಕೆ 2017ರಲ್ಲಿಯೇ ಮಂಜೂರಾತಿ ದೊರೆತಿತ್ತು. ಆದರೆ ಪರಿಸರ ನಾಶದ ಕಾರಣಕ್ಕೆ ಸ್ಥಳೀಯರು ಸೇರಿದಂತೆ ಹಲವರು ಯೋಜನೆ ವಿರೋಧಿಸುತ್ತ ಬಂದಿದ್ದಾರೆ. ‘ನದಿಯಲ್ಲಿ ಬೇಸಿಗೆ ಕಾಲಕ್ಕೆ ಅಗತ್ಯವಿರುವಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳಲು ಅಣೆಕಟ್ಟೆ ನಿರ್ಮಾಣದ ಅಗತ್ಯವಿದೆ. ಉದ್ದೇಶಿತ ಯೋಜನೆ ಜಾರಿಗೆ ಬಂದರೆ 2060ರ ವರೆಗೂ ಕಾರವಾರ ಮತ್ತು ಅಂಕೋಲಾದ ಭಾಗಶಃ ಪ್ರದೇಶಕ್ಕೆ ನೀರು ಪೂರೈಕೆಗೆ ಸಮಸ್ಯೆ ಎದುರಾಗದು’ ಎನ್ನುತ್ತಾರೆ ಅಧಿಕಾರಿಯೊಬ್ಬರು. ‘ಅಣೆಕಟ್ಟೆ ನಿರ್ಮಾಣಕ್ಕೆ ಹತ್ತಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ. ನದಿ ಸುಗಮವಾಗಿ ಹರಿಯುತ್ತಿದ್ದರೂ ಮಳೆಗಾಲದಲ್ಲಿ ನೆರೆ ಹಾವಳಿ ಎದುರಾಗುತ್ತಿದೆ. ಅಣೆಕಟ್ಟೆ ನಿರ್ಮಿಸಿದರೆ ನದಿಪಾತ್ರದ ಗ್ರಾಮಗಳಿಗೆ ನೆರೆಭೀತಿ ಕಟ್ಟಿಟ್ಟ ಬುತ್ತಿ’ ಎಂಬುದು ಯೋಜನೆ ವಿರೋಧಿಸುತ್ತಿರುವವರ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT