ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಇಳಿಕೆಯಾದ ವಾಣಿಜ್ಯ ಬಂದರು ಆದಾಯ

ಮೊಲಾಸಿಸ್ ರಫ್ತು ಇಳಿಮುಖ: ಹೂಳು ತುಂಬಿದ್ದರಿಂದ ಬಾರದ ಹಡಗು
Published 3 ಏಪ್ರಿಲ್ 2024, 4:47 IST
Last Updated 3 ಏಪ್ರಿಲ್ 2024, 4:47 IST
ಅಕ್ಷರ ಗಾತ್ರ

ಕಾರವಾರ: ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಆದಾಯ ಸಂಗ್ರಹಿಸಿದ್ದ ಇಲ್ಲಿನ ವಾಣಿಜ್ಯ ಬಂದರು, 2023–24ನೇ ಆರ್ಥಿಕ ಸಾಲಿನಲ್ಲಿ ಕಡಿಮೆ ಆದಾಯ ಗಳಿಸಿದೆ. ಆಮದು ಪ್ರಮಾಣ ಹೆಚ್ಚಿದ್ದರೂ, ರಫ್ತು ಚಟುವಟಿಕೆ ಕಳೆಗುಂದಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಬಂದರಿಗೆ 6,73,474 ಟನ್ ಸರಕು ಸಾಮಗ್ರಿಗಳು ಆಮದು ಆಗಿದ್ದು, 2,36,415 ಟನ್ ಸರಕು ರಫ್ತಾಗಿದೆ. ಹಿಂದಿನ ವರ್ಷದಲ್ಲಿ 4.85 ಲಕ್ಷ ಟನ್ ಸರಕು ಆಮದಾಗಿದ್ದರೆ, 5.22 ಲಕ್ಷ ಟನ್ ಸರಕು ರಫ್ತುಗೊಂಡಿತ್ತು. ಕಳೆದ ವರ್ಷ ₹21 ಕೋಟಿಯಷ್ಟು ನೇರ ಆದಾಯ ಗಳಿಸಿದ್ದ ವಾಣಿಜ್ಯ ಬಂದರು, ಈ ಬಾರಿ ₹18 ಕೋಟಿಯಷ್ಟು ನೇರ ಆದಾಯ ಗಳಿಸಿದೆ.

ಕಳೆದ ವರ್ಷ 148 ಹಡಗು ಬಂದರಿಗೆ ಬಂದಿದ್ದವು. ಈ ಬಾರಿ ಕೇವಲ 122 ಹಡಗು ಮಾತ್ರ ಸಂಚರಿಸಿವೆ. ರಾತ್ರಿ ವೇಳೆಯಲ್ಲಿಯೂ ಹಡಗು ಸಂಚಾರಕ್ಕೆ (ನೈಟ್ ನ್ಯಾವಿಗೇಶನ್) ಬಂದರು ಜಲಸಾರಿಗೆ ಮಂಡಳಿ ಅನುಕೂಲ ಕಲ್ಪಿಸಿದ್ದರೂ ಒಂದೂ ಹಡಗು ಬಂದಿರಲಿಲ್ಲ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮೊಲಾಸಿಸ್ (ಕಾಕಂಬಿ) ರಫ್ತಿಗೆ ಬಂದರು ಹೆಸರಾಗಿದೆ. ಯುರೋಪ್ ರಾಷ್ಟ್ರಗಳಿಗೆ ಈ ಹಿಂದಿನ ವರ್ಷಗಳಲ್ಲಿ ಗಣನೀಯ ಪ್ರಮಾಣದ ಮೊಲಾಸಿಸ್ ರಫ್ತುಗೊಳ್ಳುತ್ತಿತ್ತು. ಆಗ ಶೇ 15ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಮೊಲಾಸಿಸ್ ರಫ್ತಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸುಂಕ ಪ್ರಮಾಣವನ್ನು ಶೇ 50ರಷ್ಟು ಏರಿಕೆ ಮಾಡಿದ್ದರಿಂದ ರಫ್ತುದಾರರು ವಿದೇಶಕ್ಕೆ ಮೊಲಾಸಿಸ್ ರವಾನಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ರಫ್ತು ಚಟುವಟಿಕೆ 5.17 ಲಕ್ಷ ಟನ್‍ನಿಂದ 1.95 ಲಕ್ಷ ಟನ್‍ಗೆ ಕುಸಿಯಿತು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಬಂದರು ಪ್ರದೇಶದಲ್ಲಿ ಹೂಳು ತುಂಬಿಕೊಂಡಿದ್ದರಿಂದ ಭಾರಿ ಗಾತ್ರದ ಸರಕು ಸಾಗಣೆ ಹಡಗುಗಳು (ಕಾರ್ಗೊ ಶಿಪ್) ಸಂಚರಿಸಲು ಕಷ್ಟವಾಯಿತು. ಇದರಿಂದ ಹಲವು ಹಡಗುಗಳು ಬರಲು ಸಾಧ್ಯವಾಗಲಿಲ್ಲ. ಆದಾಯ ಇಳಿಕೆಗೆ ಇದೂ ಒಂದು ಕಾರಣ’ ಎಂದರು.

‘2023–24ನೇ ಸಾಲಿನಲ್ಲಿ ಡೀಸೆಲ್, ತಾಳೆ ಎಣ್ಣೆ, ರಾಕ್ ಫಾಸ್ಫೇಟ್, ಇಂಡಸ್ಟ್ರಿಯಲ್ ಸಾಲ್ಟ್, ಆಮದು ಪ್ರಮಾಣ ಏರಿಕೆಯಾಗಿದೆ. ಬಿಟುಮಿನ್ ಆಮದು ಮಾತ್ರ ಸ್ವಲ್ಪ ಇಳಿಕೆಯಾಗಿದೆ. ಮೊಲಾಸಿಸ್ ರಫ್ತು ಇಳಕೆಯಾಗಿದ್ದರೂ ಡೀಸೆಲ್ ಮತ್ತು ಕಬ್ಬಿಣದ ಅದಿರು ಸ್ವಲ್ಪ ಪ್ರಮಾಣದಲ್ಲಿ ರಫ್ತುಗೊಂಡಿದೆ. ಈ ಚಟುವಟಿಕೆಗಳಿಂದ ₹18 ಕೋಟಿ ನೇರ ಆದಾಯ ಸಂಗ್ರಹವಾಗಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧೀಕ್ಷಕ ಸುರೇಶ್ ಶೆಟ್ಟಿ ತಿಳಿಸಿದರು.

ವಾಣಿಜ್ಯ ಬಂದರಿನಲ್ಲಿ ಹೂಳೆತ್ತುವ ಕೆಲಸ ನಡೆದಿದ್ದು ಮುಂದಿನ ಆರ್ಥಿಕ ವರ್ಷದಿಂದ ಆಮದು ರಫ್ತು ಚಟುವಟಿಕೆ ಹೆಚ್ಚಳವಾಗುವ ನಿರೀಕ್ಷೆ ಇದೆ

-ಕ್ಯಾಫ್ಟನ್ ಸಿ.ಸ್ವಾಮಿ ಬಂದರು ಜಲಸಾರಿಗೆ ಮಂಡಳಿ ನಿರ್ದೇಶಕ

ಹೆಚ್ಚಿದ ಸುಂಕ ಇಲಾಖೆ ಆದಾಯ

ಬಂದರಿನ ಆಮದು ರಫ್ತು ಚಟುವಟಿಕೆ ಆಧರಿಸಿ ಸುಂಕ ವಿಧಿಸುವ ಕೇಂದ್ರೀಯ ಸುಂಕ ಇಲಾಖೆ (ಕಸ್ಟಮ್ಸ್) ಕಳೆದ ವರ್ಷ ₹276.95 ಕೋಟಿ ಆದಾಯ ಸಂಗ್ರಹಿಸಿತ್ತು. ಈ ಬಾರಿ ಅದರ ಆದಾಯವು ₹308.56 ಕೋಟಿಗೆ ಏರಿಕೆಯಾಗಿದೆ. ಮೊಲಾಸಿಸ್ ಮೇಲಿನ ಸುಂಕ ಏರಿಕೆ ಮಾಡಿದ್ದರಿಂದ ಹೆಚ್ಚು ಆದಾಯ ಸಂಗ್ರಹಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಸರಕು ಸೇವಾ ತೆರಿಗೆ (ಜಿ.ಎಸ್.ಟಿ.) ಮೂಲಕ ₹3.21 ಕೋಟಿ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ₹3.61 ಕೋಟಿ ಜಿ.ಎಸ್.ಟಿ ಸಂಗ್ರಹವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT