ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಉದ್ಯಾನಗಳಿಗೆ ತಟ್ಟಿದ ಬರದ ಬಿಸಿ

Published 18 ಮಾರ್ಚ್ 2024, 4:30 IST
Last Updated 18 ಮಾರ್ಚ್ 2024, 4:30 IST
ಅಕ್ಷರ ಗಾತ್ರ

ಕಾರವಾರ: ಹಸಿರಾಗಿದ್ದು, ನಗರದ ಸೌಂದರ್ಯಕ್ಕೆ ಕಳಶಪ್ರಾಯದಂತಿದ್ದ ಉದ್ಯಾನಗಳಿಗೆ ಈಗ ಬರದ ಬಿಸಿ ತಟ್ಟುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುತ್ತಿರುವ ಸ್ಥಳೀಯ ಆಡಳಿತ ಗಿಡಗಳಿಗೆ ನೀರು ಒದಗಿಸಲು ಪರದಾಡುತ್ತಿದೆ.

ಜಿಲ್ಲೆಯ ಹಲವೆಡೆ ಸದ್ಯ ಉದ್ಯಾನಗಳ ನಿರ್ವಹಣೆಗೂ ನೀರಿನ ಸಮಸ್ಯೆ ಎದುರಾಗಿದೆ. ಕಾರವಾರದಲ್ಲಿ ನೀರಿನ ಲಭ್ಯತೆ ಇದ್ದರೂ ನಿರ್ವಹಣೆಗೆ ಸಿಬ್ಬಂದಿ ಕೊರತೆ ಉಂಟಾಗಿದೆ. ಹತ್ತಕ್ಕೂ ಹೆಚ್ಚು ಉದ್ಯಾನಗಳಿದ್ದರೂ ಎರಡು ಮೂರು ಉದ್ಯಾನಗಳ ನಿರ್ವಹಣೆಗೆ ಮಾತ್ರ ಆದ್ಯತೆ ನೀಡುತ್ತಿರುವ ದೂರುಗಳಿವೆ. ಈಚೆಗಷ್ಟೆ ಗುತ್ತಿಗೆ ಅವಧಿ ಮುಗಿದಿದ್ದರಿಂದ ಉದ್ಯಾನ ನಿರ್ವಹಣೆಗೆ ಮೀಸಲಿದ್ದ ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ.

ಕೊಳವೆಬಾವಿ, ಜಲಮೂಲಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಸದ್ಯಕ್ಕೆ ನೀರಿನ ಕೊರತೆಯ ಚಿಂತೆ ಇಲ್ಲದಿದ್ದರೂ ಏಪ್ರಿಲ್ ಮಧ್ಯಂತರದ ಬಳಿಕ ನೀರಿಗೆ ಸಮಸ್ಯೆಯಾಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಶಿರಸಿ ನಗರದ ವಿವಿಧ ಭಾಗಗಳಲ್ಲಿ ಇರುವ ಉದ್ಯಾನಗಳು ನೀರಿನ ಕೊರತೆಯಿಂದ ಅಂದ ಕಳೆದುಕೊಳ್ಳುತ್ತಿವೆ. ನಗರಸಭೆ ನೀರು ಆಶ್ರಯಿಸಿ ಹಸಿರಾಗಿದ್ದ ಉದ್ಯಾನಗಳ ಗಿಡಮರಗಳು ಸೊರಗಿವೆ.

‘ಬಿಸಿಲಿನ ಪ್ರಖರತೆ ದಿನೇದಿನೆ ಹೆಚ್ಚುತ್ತಿದೆ. ಇದರಿಂದ ಕೆಲವು ಉದ್ಯಾನಗಳಲ್ಲಿ ಹಸಿರು ಮಾಯವಾಗಿ, ಎತ್ತ ನೋಡಿದರೂ ಒಣಗಿದ ಹುಲ್ಲು, ಗಿಡಗಳ ದರ್ಶನ ಆಗುತ್ತಿದೆ. ಉದ್ಯಾನಗಳತ್ತ ಮುಖ ಮಾಡಲು ಮನಸ್ಸಾಗುತ್ತಿಲ್ಲ’ ಎನ್ನುತ್ತಾರೆ ನಗರ ನಿವಾಸಿ ಮಂಜುನಾಥ ನಾಯ್ಕ.

ಹೊನ್ನಾವರ ಪಟ್ಟಣದಲ್ಲಿ ಕರ್ನಲ್ ಹಿಲ್ ಸಮೀಪ ರೋಟರಿ ಕ್ಲಬ್ ನಿರ್ವಹಣೆ ಮಾಡುತ್ತಿರುವ ಉದ್ಯಾನ ಹಾಗೂ ಪ್ರಭಾತನಗರದಲ್ಲಿ ಅರಣ್ಯ ಇಲಾಖೆ ನಿರ್ಮಾಣ ಮಾಡಿರುವ ಉದ್ಯಾನಗಳಿದ್ದು, ಎರಡೂ ನಿರ್ವಹಣೆ ಕೊರತೆಯಿಂದ ಸೊರಗಿವೆ. ಶರಾವತಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿರುವುದರಿಂದ ಪಟ್ಟಣದಲ್ಲಿ ಸದ್ಯ ನೀರಿನ ಕೊರತೆ ಅಷ್ಟಾಗಿ ಇಲ್ಲವಾಗಿದೆಯಾದರೂ ಉದ್ಯಾನದ ಗಿಡಗಳಿಗೆ ನೀರುಣಿಸುವವರ ಕೊರತೆ ಇದೆ.

‘ಕರ್ನಲ್ ಹಿಲ್ ಸಮೀಪದ ಉದ್ಯಾನ ನಿರ್ವಹಣೆಗೆ ಸಂಪನ್ಮೂಲದ ಕೊರತೆ ಇದೆ. ನೀರಿನ ಸಮಸ್ಯೆ ಎದುರಾಗಿಲ್ಲ’ ಎನ್ನುತ್ತಾರೆ ರೋಟರಿ ಕ್ಲಬ್ ಸದಸ್ಯ ಎಸ್.ಎನ್.ಹೆಗಡೆ.

ಯಲ್ಲಾಪುರ ಪಟ್ಟಣದ ಐಬಿ ರಸ್ತೆಯ ಪಕ್ಕ ಜೋಡುಕೆರೆಯ ಸಮೀಪದಲ್ಲಿರುವ ಮಕ್ಕಳ ಉದ್ಯಾನ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಉದ್ಯಾನದ ತುಂಬ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ನೀರಿನ ಕೊಳ, ವಿಶ್ರಾಂತಿಗಾಗಿ ನಿರ್ಮಿಸಲಾದ ಕಟ್ಟಡ ಶಿಥಿಲಗೊಂಡಿದೆ. ಅನೇಕ ಕಡೆ ಆವರಣಗೋಡೆ ಗೋಡೆ ಉರುಳಿಬಿದ್ದಿದೆ. ಮಕ್ಕಳು ಆಟವಾಡಲು ನಿರ್ಮಿಸಲಾಗಿದ್ದ ಜೋಕಾಲಿ ತುಕ್ಕುಹಿಡಿಯುತ್ತಿದೆ.

ಮುಂಡಗೋಡ ಪಟ್ಟಣದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಕೊಳವೆಬಾವಿಯಿಂದ ಸಸ್ಯಗಳಿಗೆ ನೀರುಣಿಸುತ್ತ, ಸಸ್ಯೋದ್ಯಾನವನ್ನು ಹಸಿರಾಗಿಡಲು ಶ್ರಮಿಸಲಾಗುತ್ತಿದೆ. ಆದರೆ, ನಿರ್ವಹಣೆಯ ಕೊರತೆ ಕಾಣುತ್ತಿದೆ. ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಕ್ಕಳ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ವಾರದಲ್ಲಿ ಒಂದೆರೆಡು ಬಾರಿ ನೀರುಣಿಸುತ್ತ ಉದ್ಯಾನ ನಿರ್ವಹಣೆ ಮಾಡಲಾಗುತ್ತಿದೆ.

‘ಬಿಸಿಲಿನ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ, ಅಂತರ್ಜಲ ಕುಸಿತದಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಆಗ, ನೀರಿನ ತೊಂದರೆ ಆಗಬಹುದು’ ಎನ್ನುತ್ತಾರೆ ಉದ್ಯಾನ ನಿರ್ವಹಣೆ ಮಾಡುವ ಸಿಬ್ಬಂದಿ ವಿವೇಕ.

‘ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಪ್ರತಿ ದಿನ ಸಂಜೆ ನೀರು ಬಿಟ್ಟು ಸಸ್ಯಗಳನ್ನು ರಕ್ಷಿಸಲಾಗುತ್ತಿದೆ. ಕೊಳವೆ ಬಾವಿಯಲ್ಲಿ ಸದ್ಯಕ್ಕಂತೂ ನೀರಿದ್ದು, ಉದ್ಯಾನ ನಿರ್ವಹಣೆಗೆ ತೊಂದರೆ ಆಗಿಲ್ಲ. ಬಂದ್ ಆಗಿದ್ದ ಕೊಳವೆ ಬಾವಿಯನ್ನು ದುರಸ್ತಿ ಮಾಡಿಸಿ, ಉದ್ಯಾನಕ್ಕೆ ನೀರು ಬಿಡಲಾಗುತ್ತಿದೆ’ ಎಂದು ಉಪವಲಯ ಅರಣ್ಯಾಧಿಕಾರಿ ಅರುಣಕುಮಾರ ಕಾಶಿ ಹೇಳುತ್ತಾರೆ.

ಶಿರಸಿಯ ಕೆ.ಎಚ್.ಬಿ ಕಾಲೊನಿಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ
ಶಿರಸಿಯ ಕೆ.ಎಚ್.ಬಿ ಕಾಲೊನಿಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ

ಕುಮಟಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಚನ್ನಮ್ಮ ಉದ್ಯಾನದಲ್ಲಿ ಪುರಸಭೆಯ ನೀರು ಸರಬರಾಜು ಟ್ಯಾಂಕ್ ಇರುವುದರಿಂದ ನೀರಿನ ಸೌಲಭ್ಯ ನಿರಂತರವಾಗಿದೆ. ವಿವೇಕನಗರದಲ್ಲಿರುವ ಪುರಸಭೆ ಉದ್ಯಾನದಲ್ಲಿರುವ ಗಿಡಗಳಿಗೆ ಸ್ಥಳೀಯರೇ ಬಾವಿಯಿಂದ ನೀರೆತ್ತಿ ಹಾಕುತ್ತಿದ್ದಾರೆ. ‘ಪುರಸಭೆ ನೀರಿನ ವ್ಯವಸ್ಥೆ ಮಾಡಿದರೆ ಉದ್ಯಾನ ಹಸಿರಿನಿಂದ ನಳನಳಿಸುತ್ತದೆ’ ಎಂದು ಸ್ಥಳೀಯ ನಿವಾಸಿ ಜಯದೇವ ಬಳಗಂಡಿ ಹೇಳುತ್ತಾರೆ.

ಸಿದ್ದಾಪುರ ಪಟ್ಟಣದ ಶಂಕರಮಠದ ಪಕ್ಕದಲ್ಲಿರುವ ಉದ್ಯಾನವನ ಅರಣ್ಯ ಇಲಾಖೆಯಿಂದ ನಿರ್ವಹಿಸಲಾಗುತ್ತಿದ್ದು ಸುಸ್ಥಿತಿಯಲ್ಲಿದೆ. ಮಳೆಯ ಕೊರತೆಯಾದರೂ ನೀರಿನ ಮೂಲ ಇರುವುದರಿಂದ ಸಮಸ್ಯೆಯಾಗಿಲ್ಲ.

ಅಂಕೋಲಾದ ಉದ್ಯಾನದಲ್ಲಿರುವ ಗಿಡಮರಗಳು ನೀರಿಲ್ಲದೆ ಒಣಗುತ್ತಿವೆ. ಸ್ಮಾರಕ ಭವನದ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದೆ ಕಳೆಗುಂದಿದೆ.

‘ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಇದೆ. ಅದಕ್ಕೆ ಮೊದಲು ಆದ್ಯತೆ ನೀಡಿ ತದನಂತರ ಉದ್ಯಾನಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ’ ಎಂದು ತಹಶೀಲ್ದಾರ ಅನಂತ್ ಶಂಕರ್ ಹೇಳುತ್ತಾರೆ.

ಹಳಿಯಾಳದ ಮರಡಿಗುಡ್ಡ ಇಕೋ ಪಾರ್ಕ್‍ನಲ್ಲಿ ನಿರ್ಮಿಸಿದ ಕಾರಂಜಿ ತೊಟ್ಟಿ ನೀರಿಲ್ಲದೆ ಒಣಗುತ್ತಿದೆ
ಹಳಿಯಾಳದ ಮರಡಿಗುಡ್ಡ ಇಕೋ ಪಾರ್ಕ್‍ನಲ್ಲಿ ನಿರ್ಮಿಸಿದ ಕಾರಂಜಿ ತೊಟ್ಟಿ ನೀರಿಲ್ಲದೆ ಒಣಗುತ್ತಿದೆ
ಗೋಕರ್ಣದ ಮುಖ್ಯ ಕಡಲತೀರದಲ್ಲಿರುವ ಉದ್ಯಾನದಲ್ಲಿನ ಸೌಲಭ್ಯಗಳು ನಿರ್ವಹಣೆಯಿಲ್ಲದೆ ಹಾಳಾಗಿರುವುದು
ಗೋಕರ್ಣದ ಮುಖ್ಯ ಕಡಲತೀರದಲ್ಲಿರುವ ಉದ್ಯಾನದಲ್ಲಿನ ಸೌಲಭ್ಯಗಳು ನಿರ್ವಹಣೆಯಿಲ್ಲದೆ ಹಾಳಾಗಿರುವುದು
ಟ್ಯಾಂಕರ್ ಮೂಲಕ ಉದ್ಯಾನದ ಗಿಡಗಳಿಗೆ ನೀರುಣಿಸುವ ವ್ಯವಸ್ಥೆ ಮಾಡಲಾಗಿದೆ.
- ಕಾಂತರಾಜ್ , ಪೌರಾಯುಕ್ತ ಶಿರಸಿ ನಗರಸಭೆ
ಯಲ್ಲಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ಮಕ್ಕಳ ಉದ್ಯಾನವನ್ನು ಅಭಿವೃದ್ಧಿಪಡಿಸಿ ಮಕ್ಕಳಿಗೆ ಹಿರಿಯರಿಗೆ ಅನುಕೂಲ ಕಲ್ಪಿಸಬೇಕು.
ದ್ಯಾಮಣ್ಣ ಬೋವಿವಡ್ಡರ, ಯಲ್ಲಾಪುರ ನಿವಾಸಿ
ತಾಲ್ಲೂಕು ಆಡಳಿತ ಸ್ಮಾರಕ ಭವನದ ಉದ್ಯಾನವನ್ನು ಪುರಸಭೆ ಅಧೀನಕ್ಕೆ ಹಸ್ತಾಂತಿಸಿದರೆ ಪುರಸಭೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದೆ.
ಅಶೋಕ ಶೇಡಗೇರಿ, ಅಂಕೋಲಾ ಪುರಸಭೆ ಸದಸ್ಯ
ಕಾರವಾರದಲ್ಲಿ ನಗರಸಭೆಯ ಸುಪರ್ದಿಯಲ್ಲಿರುವ ಉದ್ಯಾನಗಳ ನಿರ್ವಹಣೆ ಈಚೆಗೆ ಸರಿಯಾಗುತ್ತಿಲ್ಲ. ಹಸಿರಾಗಿದ್ದ ಉದ್ಯಾನಗಳಲ್ಲಿನ ಗಿಡಗಳು ನೀರಿಲ್ಲದೆ ಒಣಗುತ್ತಿವೆ.
- ರೂಪೇಶ ಗುನಗಿ, ಹಬ್ಬುವಾಡಾ ನಿವಾಸಿ

ಸ್ಥಗಿತಗೊಂಡ ಕಾರಂಜಿ

ಹಳಿಯಾಳ ಪಟ್ಟಣದಲ್ಲಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಎರಡು ಬೃಹತ್ ಉದ್ಯಾನಗಳು ನಿರ್ಮಾಣಗೊಂಡಿವೆ. ಕಿಲ್ಲಾಕೋಟೆ ಬಳಿ ಇರುವ ‘ಕಿಲ್ಲಾ ನಿರ್ಸಗ ಧಾಮ’ದಲ್ಲಿ ಅಲ್ಲಲ್ಲಿ ನೀರಿನ ಟ್ಯಾಂಕ್‍ಗಳನ್ನು ಅಳವಡಿಸಲಾಗಿದೆ. ಸಸಿಗಳಿಗೆ ಪ್ರತಿನಿತ್ಯ ನೀರನ್ನು ಪೂರೈಸಲಾಗುತ್ತಿದ್ದೆ. ಪುರಸಭೆಯಿಂದಲೂ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮರಡಿಗುಡ್ಡ ಉದ್ಯಾನದಲ್ಲಿ ನೀರಿನ ಬೃಹತ್ ಟ್ಯಾಂಕ್ ನಿರ್ಮಿಸಿದ್ದು  ಟ್ಯಾಂಕ್‌‍ನ ಮೂಲಕ ಅಲ್ಲಲ್ಲಿ ನಲ್ಲಿ ಜೋಡಣೆ ಮಾಡಲಾಗಿದೆ.

ಕಿಡಿಗೇಡಿಗಳು ನಲ್ಲಿ ಮುರಿಯುತ್ತಿದ್ದು ನೀರು ಪೂರೈಕೆಗೆ ವ್ಯತ್ಯಯ ಉಂಟಾಗುತ್ತಿದೆ. ಉದ್ಯಾನದಲ್ಲಿರುವ ಕಾರಂಜಿಯೂ ನೀರಿಲ್ಲದೆ ಸ್ಥಗಿತಗೊಂಡಿದೆ. ಪಟ್ಟಣದ ಹೊರವಲಯದ ಬಡಾವಣೆಗಳ ಬಳಿ ನಿರ್ಮಿಸಿದ ಉದ್ಯಾನಗಳು ನೀರಿನ ಕೊರತೆಯಿಂದ ಸೊರಗಿದೆ. ‘ಉದ್ಯಾನಗಳ ನಿರ್ವಹಣೆಗೆ ಸೂಕ್ತ ಸಿಬ್ಬಂದಿ ನೇಮಿಸಬೇಕು. ಕಾಲಕಾಲಕ್ಕೆ ನಿರ್ವಹಣೆ ಮಾಡುತ್ತಿದ್ದರೆ ಉದ್ಯಾನದ ಅಂದಗೆಡುವುದಿಲ್ಲ’ ಎನ್ನುತ್ತಾರೆ ವಕೀಲ ಎಂ.ವಿ.ಅಷ್ಟೇಕರ್.

ಅವಸಾನದ ಅಂಚಿಗೆ ಉದ್ಯಾನ

ಗೋಕರ್ಣದ ಮುಖ್ಯ ಕಡಲತೀರದಲ್ಲಿರುವ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲ್ಪಟ್ಟ ಗೋಕರ್ಣದ ಏಕೈಕ ಉದ್ಯಾನ ಸಮರ್ಪಕ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಸುಮಾರು ಐದು ವರ್ಷದ ಹಿಂದೆ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಉದ್ಯಾನವೀಗ ಅವಸಾನದ ಅಂಚಿಗೆ ತಲುಪಿದೆ.

ಮಕ್ಕಳು ಆಡಲು ನಿರ್ಮಿಸಿದ್ದ ಜೋಕಾಲಿ ಜಾರುಬಂಡಿ ಮುಂತಾದ ಪರಿಕರ ತುಕ್ಕು ಹಿಡಿದಿದೆ. ಹೆಚ್ಚಿನ ಕಾಲ ಉದ್ಯಾನದ ಮುಖ್ಯದ್ವಾರ ಮುಚ್ಚಿಯೇ ಇರುತ್ತದೆ. ಮಕ್ಕಳು ಉದ್ಯಾನದಲ್ಲಿ ಆಡಬೇಕೆಂದರೆ ಆವರಣ ಗೋಡೆ ಹಾರಿ ಒಳಗೆ ಹೋಗಬೇಕಾಗಿದೆ. ವಿಚಿತ್ರವೆಂದರೆ ಸ್ಥಳೀಯ ಆಡಳಿತಕ್ಕೂ ಈ ಉದ್ಯಾನದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ‘ಗೋಕರ್ಣ ಪ್ರಸಿದ್ಧಿ ಪಡೆದ ಪ್ರವಾಸೋಧ್ಯಮ ಕ್ಷೇತ್ರ. ಸ್ಥಳೀಯರ ಮತ್ತು ಪ್ರವಾಸಿಗರ ಉಪಯೋಗಕ್ಕಾಗಿ ಸುಂದರ ಉದ್ಯಾನದ ಅವಶ್ಯಕತೆಯಿದೆ. ಈಗ ಇದ್ದ ಉದ್ಯಾನ ಗ್ರಾಮ ಪಂಚಾಯಿತಿಗೆ ಸಂಬಂಧವಿಲ್ಲದಂತೆ ಇದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಶ ಗೌಡ ಬೇಸರಿಸುತ್ತಾರೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಸುಜಯ ಭಟ್, ಎಂ.ಜಿ.ಹೆಗಡೆ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT