ಕಾರವಾರ: ಕಾಳಿ ನದಿಯ ಹಳೆಯ ಸೇತುವೆ ಕುಸಿದು ಅದರ ಅವಶೇಷಗಳೊಂದಿಗೆ ನದಿ ಪಾಲಾಗಿದ್ದ ಲಾರಿಯನ್ನು ನದಿ ದಡಕ್ಕೆ ತರುವ ಕಾರ್ಯಾಚರಣೆ ಗುರುವಾರ ಯಶಸ್ವಿಯಾಯಿತು.
ನದಿಗೆ ಬಿದ್ದು 9 ದಿನ ಕಳೆದ ಬಳಿಕ ಲಾರಿಯು ದಡಕ್ಕೆ ಬಂದರೂ ಸಾಹಸಮಯವಾಗಿದ್ದ ಕಾರ್ಯಾಚರಣೆ ಕಂಡು ಜನರು ಚಪ್ಪಾಳೆ, ಸಿಳ್ಳೆ ಹಾಕಿ ಖುಷಿಪಟ್ಟರು. ಕೆಲವರು ನದಿ ದಡದಲ್ಲಿ ಪಟಾಕಿ ಸಿಡಿಸಿ ಲಾರಿ ದಡ ಸೇರಿದ್ದಕ್ಕೆ ಸಂಭ್ರಮಿಸಿದರು. ಆದರೆ, ಲಾರಿ ಮಾಲೀಕ ತಮಿಳುನಾಡಿನ ಸೇಲಂನ ನಾಗಿಚಟ್ಟಿಪಟ್ಟಿಯ ಸೆಂಥಿಲಕುಮಾರ ಮಾತ್ರ ಕಣ್ಣೀರು ಸುರಿಸಿದರು.
ನಜ್ಜುಗುಜ್ಜಾಗಿದ್ದ ಲಾರಿಯನ್ನು ನೋಡುತ್ತ ಭಾವುಕರಾದ ಸೆಂಥಿಲಕುಮಾರ, ‘ನೆಲ್ಲೂರಿನಿಂದ ಗೋವಾಕ್ಕೆ ಇದ್ದಿಲು ಸಾಕಾಣಿಕೆ ಮಾಡುವ ಉದ್ಯಮಕ್ಕೆ ಇದೊಂದೇ ಲಾರಿ ಆಸರೆಯಾಗಿತ್ತು. ಜೀವನಕ್ಕೆ ಇದೇ ಲಾರಿ ದಾರಿ ಮಾಡಿಕೊಟ್ಟಿತ್ತು. ವಾಹನದ ಸ್ಥಿತಿಯನ್ನು ಕಂಡು ಮರುಕಪಡದೆ ಬೇರೆ ದಾರಿ ತೋಚುತ್ತಿಲ್ಲ’ ಎಂದು ಮಾಧ್ಯಮಗಳೆದುರು ಅಳಲು ತೋಡಿಕೊಂಡರು.
ಆ.7ರಂದು ತಡರಾತ್ರಿ ಸೇತುವೆ ಮೇಲೆ ಸಾಗುತ್ತಿದ್ದ ಲಾರಿ, ಸೇತುವೆ ಕುಸಿದಿದ್ದರಿಂದ ನದಿಗೆ ಬಿದ್ದಿತ್ತು. ಆ.14 ರಂದು ಲಾರಿಯನ್ನು ನದಿಯಿಂದ ಹೊರಕ್ಕೆ ಎಳೆದು ತರಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ದಡದಿಂದ ಸುಮಾರು 200 ಮೀಟರ್ ದೂರದಲ್ಲಿದ್ದ ಲಾರಿಯನ್ನು ಎಳೆದು ತರಲು ಮೂರು ಕ್ರೇನ್ ಸಹಾಯ ಪಡೆಯಲಾಯಿತು. ಮಂಗಳೂರಿನಿಂದ ಉದ್ದನೆಯ ಕಬ್ಬಿಣದ ರೋಪ್‍ಗಳನ್ನು ತರಿಸಲಾಗಿತ್ತು. ಮೊದಲ ದಿನ ಕಾರ್ಯಾಚರಣೆ ವೇಳೆ ರೋಪ್ ತುಂಡಾಗಿದ್ದವು.
ಗುರುವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನದಿಯಿಂದ ಮೇಲೆಕ್ಕೆತ್ತಲು ಕಾರ್ಯಾಚರಣೆ ಆರಂಭಿಸಲಾಗಿತ್ತು. 20 ಮೀಟರ್ ಎಳೆದು ತರುವಷ್ಟರಲ್ಲಿ ರೋಪ್ ಕಲ್ಲಿಗೆ ತಾಗಿ ಪುನಃ ತುಂಡಾಗಿತ್ತು. ಅವುಗಳನ್ನು ಮರುಜೋಡಿಸಿಕೊಂಡು ಕಾರ್ಯಾಚರಣೆ ನಡೆಸಿದ ತಂಡವು ನದಿ ಮಧ್ಯಭಾಗಕ್ಕೆ ತರುವಷ್ಟರಲ್ಲಿ ಬಂಡೆಕಲ್ಲಿಗೆ ರೋಪ್ ಸಿಲುಕಿ ಎಳೆಯಲು ಅಡ್ಡಿಯಾಗಿತ್ತು.
‘ಮುಳುಗು ತಜ್ಞ ಈಶ್ವರ ಮಲ್ಪೆ, ಸನ್ನಿ ಸಿದ್ದಿ ಹಾಗೂ ಇತರ ಸದಸ್ಯರ ತಂಡವು ನದಿಯಿಂದ ಲಾರಿ ದಡಕ್ಕೆ ಎಳೆದು ತರುವವರೆಗೂ ದೋಣಿ ಮೂಲಕ ನಿಗಾ ಇಡುತ್ತ ಬಂತು. ಹಲವು ಬಾರಿ ಕಾರ್ಯಾಚರಣೆಗೆ ಅಡ್ಡಿಯಾದರೂ ಸುಮಾರು 11 ತಾಸಿನ ಬಳಿಕ ಲಾರಿಯನ್ನು ದಡಕ್ಕೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾದೆವು’ ಎಂದು ಕಾರ್ಯಾಚರಣೆಯ ತಂಡದಲ್ಲಿದ್ದ ಎಂಜಿನಿಯರ್ ಪ್ರದೀಪ ತಿಳಿಸಿದರು.
50ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೂರು ಕ್ರೇನ್‍ಗಳನ್ನು ಬಳಕೆ ಮಾಡಲಾಗಿತ್ತು. ಸ್ಥಳಿಯ ಮೀನುಗಾರರ ಎರಡು ಮತ್ತು ಕರಾವಳಿ ಕಾವಲು ಪಡೆಯ ದೋಣಿ ಕಾರ್ಯಾಚರಣೆಯಲ್ಲಿದ್ದವು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರ್ಯಾಚರಣೆ ವೀಕ್ಷಿಸಿದ್ದರು. ಸ್ಥಳದಲ್ಲಿ ನೂರಾರ ಜನ ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
‘ಐದು ದಶಕದ ಹಿಂದೆ ಕಾಳಿ ನದಿಗೆ ವಿದ್ಯಾರ್ಥಿಗಳಿದ್ದ ಬಸ್ ಬಿದ್ದಿತ್ತು. ಆಗ ಸೇತುವೆ ಇರಲಿಲ್ಲ. ವಿಶೇಷ ಎಂದರೆ ಈಗ ಬಿದ್ದ ಲಾರಿ ಮತ್ತು ಆಗ ಬಿದ್ದಿದ್ದ ಬಸ್ ತಮಿಳುನಾಡಿನ ಸೇಲಂನ ವ್ಯಕ್ತಿಗಳಿಗೆ ಸೇರಿದ್ದವು’ ಎಂದು ಹಳೆಯ ನೆನಪು ಮೆಲಕು ಹಾಕಿದವರು ಕೋಡಿಬಾಗದ ಗಜು ಕಲ್ಗುಟ್ಕರ್. ‘ಗೋವಾಕ್ಕೆ ಪ್ರವಾಸಕ್ಕೆಂದು ಹೊರಟಿದ್ದ ವಿದ್ಯಾರ್ಥಿಗಳಿದ್ದ ಬಸ್ ಬಾರ್ಜ್ ಏರಲು ವೇಗವಾಗಿ ಸಾಗಿತು. ಈ ವೇಳೆ ನಿಯಂತ್ರಣ ತಪ್ಪಿ ನದಿಗೆ ಬಿದ್ದಿತ್ತು. ಅದನ್ನು ಹೊರತೆಗೆಯಲು ಕೆಲವು ದಿನ ತಗುಲಿತು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.