ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ | ಮಳೆ: ಹೊಲ ಹಸನುಗೊಳಿಸುವ ಕಾಯಕ ಆರಂಭ

Published 20 ಮೇ 2024, 6:27 IST
Last Updated 20 ಮೇ 2024, 6:27 IST
ಅಕ್ಷರ ಗಾತ್ರ

ಮುಂಡಗೋಡ: ಆಗಾಗ ಗುಡುಗು ಸಿಡಿಲು ಸಹಿತ ಮಳೆ ಬೀಳುತ್ತಿರುವುದರಿಂದ ನೆಲ ತಕ್ಕ ಮಟ್ಟಿಗೆ ತಂಪಾಗುತ್ತಿದೆ. ಅನ್ನದಾತ ಕೃಷಿ ಚಟುವಟಿಕೆ ಕೈಗೊಳ್ಳಲು ಪೂರಕ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ತಾಲ್ಲೂಕಿನಲ್ಲಿ ವರ್ಷದ ದುಡಿಮೆಗೆ ರೈತ ಮುಂದಡಿ ಇಟ್ಟಿದ್ದಾನೆ.

ತಾಲ್ಲೂಕಿನಲ್ಲಿ ಈಚೆಗೆ ಸುರಿದ ಒಂದೆರೆಡು ಮಳೆಯಿಂದ ಭತ್ತ ಬೆಳೆಯುವ ರೈತರು ಹೊಲವನ್ನು ಹಸನುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಚುನಾವಣೆ ಹಾಗೂ ಬಿಸಿಲ ತಾಪದಿಂದ ಹೊಲಗದ್ದೆಗಳತ್ತ ಅಷ್ಟಾಗಿ ಮುಖ ಮಾಡದಿದ್ದ ರೈತ ಸಮೂಹ ಈಗ ಮುಂಗಾರು ಪೂರ್ವ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಯಂತ್ರೋಪಕರಣಗಳಿಂದ ಹಸಿಯಾಗಿರುವ ಭೂಮಿಯನ್ನು ಬಿತ್ತನೆಗೆ ಅಣಿಗೊಳಿಸುತ್ತಿದ್ದಾರೆ. ಕೆಲವು ರೈತರು ಸಾಂಪ್ರದಾಯಿಕ ಪದ್ಧತಿಯಂತೆ ಎತ್ತುಗಳೊಂದಿಗೆ ರಂಟೆ ಹೊಡೆಯುತ್ತಿದ್ದಾರೆ. ಮಣ್ಣನ್ನು ಹದಗೊಳಿಸುತ್ತ, ಕಾಳಿನ ಕಣಜ ತುಂಬಲು ಭರದಿಂದ ಪೂರ್ವ ತಯಾರಿ ನಡೆಸಿದ್ದಾರೆ.

‘ಕಳೆದ ವರ್ಷದ ಬರದಿಂದ ರೈತ ತತ್ತರಿಸಿದ್ದಾನೆ. ಈ ವರ್ಷವಾದರೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ, ಭೂಮಿ ಹಸನುಗೊಳಿಸುವ ಕೆಲಸದಲ್ಲಿ ತೊಡಗಿದ್ದಾನೆ. ಮಳೆಯಾಶ್ರಿತ ಭತ್ತ ಬೆಳೆಯುವ ರೈತರಿಗೆ ಇದು ಸಕಾಲವಾಗಿದ್ದು, ಒಂದೆರೆಡು ದೊಡ್ಡ ಮಳೆ ಬಿದ್ದರೆ, ಬಿತ್ತನೆ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಕೊಳ್ಳುತ್ತಾರೆ. ಈಗಾಗಲೇ ಹಲವು ರೈತರು ಹೊಲವನ್ನು ಬಿತ್ತನೆಗೆ ಸಜ್ಜುಗೊಳಿಸಿದ್ದಾರೆ. ಮುಂಗಾರು ಪೂರ್ವ ಮಳೆಯು ರೈತನ ಮೊಗದಲ್ಲಿ ಆಶಾದಾಯಕ ಭಾವ ಮೂಡಿಸುತ್ತಿದೆ. ಸಕಾಲದಲ್ಲಿ ಬಿತ್ತನೆ ಬೀಜಗಳು ದೊರೆತರೆ, ಒಂದು ಹಂತದ ಕೃಷಿ ಚಟುವಟಿಕೆಗೆ ವೇಗ ಸಿಕ್ಕಂತಾಗುತ್ತದೆ. ಬರದಿಂದ ಬಳಲಿ ಬೆಂಡಾದ ರೈತರಿಗೆ ವರುಣ ಈ ಬಾರಿ ಪೂರ್ಣ ಸಹಕಾರ ನೀಡಬಲ್ಲದು ಎಂಬ ಆಶಾಭಾವ ಇದೆʼ ಎಂದು ಪ್ರಗತಿಪರ ಕೃಷಿಕ ಶಿವಕುಮಾರ ಪಾಟೀಲ ಅವರ ಮಾತಾಗಿದೆ.

‘ಸಾಂಪ್ರದಾಯಿಕ ಕೃಷಿ ಪದ್ಧತಿ ಈಗ ಅಪರೂಪವಾಗುತ್ತಿದೆ. ಬಹುತೇಕ ರೈತರು ಟ್ರ್ಯಾಕ್ಟರ್‌ ಸಹಿತ ಯಂತ್ರೋಪಕರಣಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಎತ್ತುಗಳೊಂದಿಗೆ ಕೃಷಿ ಮಾಡುವುದು ಅಷ್ಟು ಸುಲಭವಲ್ಲ. ಮಳೆಗಾಲದ ಸಮಯವೇ ಬದಲಾಗಿರುವಾಗ, ಹಳೆಯ ಪದ್ಧತಿಗೆ ಜೋತು ಬೀಳುವ ಧೈರ್ಯ ರೈತರಲ್ಲಿ ಉಳಿದಿಲ್ಲ. ರೋಹಿಣಿ ಮಳೆ ಕೂಡುವ ಎಡಬಲದಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದುಕೊಳ್ಳಲಿದೆ. ಈಗಾಗಲೇ ರೈತರು ಬಿತ್ತನೆ ಬೀಜಕ್ಕಾಗಿ ಕೃಷಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಒಂದು ವಾರದಿಂದ ಮೋಡ ಕವಿದ ವಾತಾವರಣ, ಆಗಾಗ ಹನಿ ಸುರಿಯುವುದು ರೈತರಿಗೆ ಖುಷಿ ನೀಡಿದೆʼ ಎಂದು ರೈತ ಕೃಷ್ಣಪ್ಪ ಅಂತೋಜಿ ಹೇಳಿದರು.

‘ಹೊಲ ಹದಗೊಳಿಸುವ ಕಾರ್ಯ ಶೇ 75ರಷ್ಟು ಮುಗಿದಿದ್ದು, ಬಿತ್ತನೆ ಬೀಜ ವಿತರಿಸಲು ಇನ್ನೊಂದು ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಬೇಡಿಕೆಯ ಶೇ 30ರಷ್ಟು ಭತ್ತ ಹಾಗೂ ಗೋವಿನಜೋಳ ಸದ್ಯಕ್ಕೆ ಪೂರೈಕೆಯಾಗಿದ್ದು, ನಾಲ್ಕೈದು ದಿನಗಳಲ್ಲಿ ಇದರ ಪ್ರಮಾಣ ದುಪ್ಪಟ್ಟು ಆಗಲಿದೆ. ರೈತರ ಬೇಡಿಕೆಯಂತೆ ಬಿತ್ತನೆ ಬೀಜಗಳನ್ನು ವಿತರಿಸಲು ಇಲಾಖೆ ಸಿದ್ಧಗೊಂಡಿದೆʼ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌. ಕುಲಕರ್ಣಿ ಹೇಳಿದರು.

ಅಂಕಿ–ಅಂಶ

12,000 ಹೆಕ್ಟೇರ್‌ ಒಟ್ಟು ಬಿತ್ತನೆ ಕ್ಷೇತ್ರ

7,500 ಹೆಕ್ಟೇರ್‌ ಭತ್ತ ಬಿತ್ತನೆ ಕ್ಷೇತ್ರ

4,500 ಹೆಕ್ಟೇರ್‌ ಗೋವಿನಜೋಳ ಬಿತ್ತನೆ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT