ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: 20 ದಿನದಲ್ಲಿ ₹ 83 ಲಕ್ಷ ತೆರಿಗೆ ಸಂಗ್ರಹ

ರಿಯಾಯಿತಿ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಜನರ ಆಸಕ್ತಿ
Published 24 ಏಪ್ರಿಲ್ 2024, 4:46 IST
Last Updated 24 ಏಪ್ರಿಲ್ 2024, 4:46 IST
ಅಕ್ಷರ ಗಾತ್ರ

ಕಾರವಾರ: ಚುನಾವಣೆ ಕಾವು, ಬಿಸಿಲ ಝಳದ ನಡುವೆಯೂ ಇಲ್ಲಿನ ನಗರಸಭೆಗೆ ವಾರ್ಷಿಕವಾಗಿ ಪಾವತಿಸಬೇಕಿರುವ ಆಸ್ತಿ ತೆರಿಗೆ ಭರಣ ಮಾಡಲು ಜನರು ಆಸಕ್ತಿ ತೋರುತ್ತಿದ್ದಾರೆ.

ಕರಾವಳಿ ಭಾಗದಲ್ಲಿ ವಿಪರೀತ ಬಿಸಿಲು, ಆರ್ದೃತೆಯಿಂದ ಹೆಚ್ಚು ಸೆಕೆಯ ವಾತಾವರಣ ಇದೆ. ಜನರು ಹಗಲಿನ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೂ, ವೃದ್ಧರು, ಮಹಿಳೆಯರೆನ್ನದೆ ಆಸತಿ ತೆರಿಗೆ ಭರಿಸಲು ನಗರಸಭೆ ಕಚೇರಿಗೆ ನಿತ್ಯ ಜನರು ಗುಂಪು ಗುಂಪಾಗಿ ಬರತೊಡಗಿದ್ದಾರೆ.

2024–25ನೇ ಸಾಲಿನ ಆರ್ಥಿಕ ವರ್ಷ ಆರಂಭದ ಒಂದು ತಿಂಗಳು ಆಸ್ತಿ ತೆರಿಗೆ ಮೇಲೆ ಶೇ 5ರಷ್ಟು ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಜನರ ಆಸಕ್ತಿ ಹೆಚ್ಚಿದೆ.ಅದರ ಪರಿಣಾಮವಾಗಿ ಏ.1 ರಿಂದ 23ರ ವರೆಗೆ ₹83 ಲಕ್ಷಕ್ಕೂ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗಿದೆ. ನಗರದ ವ್ಯಾಪ್ತಿಯಲ್ಲಿ 22,485 ರಷ್ಟು ಅಧಿಕೃತ ಆಸ್ತಿಗಳಿವೆ.

ನಗರಸಭೆ ಕಚೇರಿಯ ಪ್ರವೇಶದ್ವಾರದಲ್ಲೇ ತೆರೆದಿರುವ ಆಸ್ತಿ ತೆರಿಗೆ, ನೀರಿನ ಕರ ಪಾವತಿಯ ವಿಶೇಷ ಕೌಂಟರ್ ನಲ್ಲಿ ನೂರಾರು ಜನರು ದಾಖಲೆಗಳೊಂದಿಗೆ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಜನರ ಅನುಕೂಲಕ್ಕಾಗಿ ಮೂರು ವಿಶೇಷಕೌಂಟರ್ ತೆರೆಯಲಾಗಿದೆ.

2024–25ನೇ ಸಾಲಿಗೆ ₹5.70 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ನಗರಸಭೆ ನಿಗದಿಪಡಿಸಿಕೊಂಡಿದೆ. ಈ ಪೈಕಿ ಶೇ 14 ರಷ್ಟು ತೆರಿಗೆಯನ್ನು ಆರ್ಥಿಕ ವರ್ಷದ ಮೊದಲ ತಿಂಗಳ ಮಧ್ಯಂತರದಲ್ಲೇ ಸಂಗ್ರಹಿಸಿದ ಸಾಧನೆ ಮಾಡಿದೆ. ಜತೆಗೆ ಅನಧಿಕೃತ ಆಸ್ತಿಗಳಿಂದ ರಿಯಾಯಿತಿ ರಹಿತವಾಗಿ ₹3.59 ಲಕ್ಷ ತೆರಿಗೆ ಸಂಗ್ರಹಿಸಲಾಗಿದೆ.

‘ರಿಯಾಯಿತಿ ನೀಡಿರುವ ಪರಿಣಾಮ ಜನರು ಆಸ್ತಿ ತೆರಿಗೆ ಪಾವತಿಗೆ ಹೆಚ್ಚು ಆಸಕ್ತಿ ತೋರಿದ್ದಾರೆ. ಬಿಣಗಾದ ಗ್ರಾಸಿಮ್ ಇಂಡಸ್ಟ್ರಿ ₹59 ಲಕ್ಷದಷ್ಟು ಆಸ್ತಿ ತೆರಿಗೆ ಪಾವತಿಸಲಿದ್ದು, ಒಂದೆರಡು ದಿನದೊಳಗೆ ಪಾವತಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಆರ್ಥಿಕ ವರ್ಷದ ಮೊದಲ ತಿಂಗಳಿನಲ್ಲೇ ಒಟ್ಟೂ ಬೇಡಿಕೆಯ ಶೇ 40 ರಷ್ಟು ಮೊತ್ತ ಪಾವತಿಯಾಗುವ ನಿರೀಕ್ಷೆ ಹೊಂದಲಾಗಿದೆ’ ಎಂದು ನಗರಸಭೆ ಕಂದಾಯ ಅಧಿಕಾರಿ ರವಿ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT