ಕಾರವಾರ: ಮುಂಗಾರು ಮಳೆ ಹಿಂದೆಂದಿಗಿಂತಲೂ ಈ ಬಾರಿ ಅಬ್ಬರಿಸಿದ ಪರಿಣಾಮ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಂಪರ್ಕ ವ್ಯವಸ್ಥೆ ಹದಗೆಟ್ಟಿದೆ. ಕಚ್ಚಾ ರಸ್ತೆಯನ್ನೇ ಅವಲಂಬಿಸಿದ್ದ ಗ್ರಾಮಗಳ ಸ್ಥಿತಿ ಹೇಳತೀರದಂತಾಗಿದೆ.
ಅರಣ್ಯ ಪ್ರದೇಶ ಹೆಚ್ಚಿರುವ ಜಿಲ್ಲೆಯಲ್ಲಿ ಇಂದಿಗೂ ಡಾಂಬರು ರಸ್ತೆ ಕಾಣದ ನೂರಾರು ಹಳ್ಳಿಗಳಿವೆ. ಡಾಂಬರು ರಸ್ತೆ ನಿರ್ಮಿಸಿದರೂ ನಿರಂತರ ಮಳೆಗೆ ಅವು ಒಂದೆರಡು ವರ್ಷಕ್ಕೆ ಕೊಚ್ಚಿಹೋಗುತ್ತಿವೆ. ಹೊಂಡಮಯವಾಗಿರುವ, ಕೆಸರುಗದ್ದೆಯಂತಾಗುವ ರಸ್ತೆಯಲ್ಲಿಯೇ ಸವಾರರು ಪರದಾಡುತ್ತ ಸಾಗಬೇಕಾದ ಸ್ಥಿತಿ ಮಳೆಗಾಲದಲ್ಲಿ ಕಾಣಸಿಗುತ್ತಿದೆ. ಈ ಬಾರಿಯ ಮಳೆಗಾಲದಲ್ಲಿ ಸ್ಥಿತಿ ಮತ್ತೂ ಹದಗೆಡುವಂತಾಗಿದೆ.
ಜುಲೈ ಮತ್ತು ಆಗಸ್ಟ್ ಆರಂಭದಲ್ಲಿ ಸುರಿದ ಮಳೆಯ ಪರಿಣಾಮವಾಗಿ ಅಂದಾಜು 3 ಸಾವಿರ ಕಿ.ಮೀಗಿಂತಲೂ ಹೆಚ್ಚು ರಸ್ತೆ ಸಂಪೂರ್ಣ ಹದಗೆಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ತಾಲ್ಲೂಕಿನ ಗೋಯರ್, ಬಾಳೆಗದ್ದೆ, ಲಾಂಡೆ ಸೇರಿದಂತೆ ಅನೇಕ ಗ್ರಾಮಗಳು ರಸ್ತೆಯ ಅವ್ಯವಸ್ಥೆಯಿಂದ ಬಸ್ ಸಂಪರ್ಕ ಕಡಿದುಕೊಳ್ಳುವ ಜತೆಗೆ ಬೈಕ್ ಚಲಾಯಿಸಿಕೊಂಡು ಸಾಗಲಾಗದೆ ಪರದಾಡಿದ್ದಾರೆ.
ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದ ಕಚ್ಚಾ ರಸ್ತೆಗಳು ಹೊಂಡಗುಂಡಿಗಳಿಂದ ಆವೃತವಾದರೂ, ದುರಸ್ತಿ ಕಾರ್ಯ ಈವರೆಗೆ ನಡೆದಿಲ್ಲ. ಮಳೆಗೆ ಅಂದಾಜು 350 ಕಿ.ಮೀ. ಗ್ರಾಮೀಣ ಭಾಗದ ಕಚ್ಚಾ ರಸ್ತೆ ಸಂಪೂರ್ಣ ಹದಗೆಟ್ಟಿದೆ.
‘ಹೊಂಡದಿಂದ ಕೂಡಿದ ರಸ್ತೆಯಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕೂಲಿಗೆ ಹೋಗುವ ಜನರಿಗೆ ನಿತ್ಯವೂ ಕಿರಿಕಿರಿಯಾಗುತ್ತಿದೆ. ತಕ್ಷಣ ಸರ್ಕಾರ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರವೀಣ ಹೆಗಡೆ.
‘ಮಳೆಯಿಂದ ಹಾಳಾದ ಗ್ರಾಮೀಣ ರಸ್ತೆಗಳನ್ನು ಅತಿವೃಷ್ಟಿ ಹಾನಿಯಡಿ ಸೇರಿಸಿ ಸರ್ಕಾರಕ್ಕೆ ವರದಿ ನೀಡಲು ಪಿಡಿಒಗಳಿಗೆ ಸೂಚಿಸಲಾಗಿದೆ’ ಎಂಬುದಾಗಿ ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಹೇಳುತ್ತಾರೆ.
ಭಟ್ಕಳ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಕೊಚ್ಚಿಹೋಗಿದ್ದು, ತೀರುಗಾಡದ ಸ್ಥಿತಿ ನಿರ್ಮಾಣವಾಗಿದೆ. ಮಾರುಕೇರಿ, ಅಳ್ವೇಕೋಡಿ, ಬೆಳ್ಕೆ, ಗೋರ್ಟೆ, ಕೊಪ್ಪ, ಹೆಬಳೆ ಭಾಗದ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿದೆ.
ಹೊನ್ನಾವರ ತಾಲ್ಲೂಕಿನ ಉಪ್ಪೋಣಿ, ಮಹಿಮೆ, ಜನಕಡ್ಕಲ್ ಭಾಗಗಳಲ್ಲಿ ಮಳೆಯಿಂದ ರಸ್ತೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಕಳಪೆ ಕಾಮಗಾರಿಯಿಂದ ಇತ್ತೀಚೆಗೆ ನಿರ್ಮಿಸಿರುವ ಕೆಲ ಹೊಸ ಕಾಂಕ್ರಿಟ್ ರಸ್ತೆಗಳಲ್ಲೂ ಹೊಂಡಗಳು ಉಂಟಾಗಿವೆ.
‘ಮಳೆ ಹಾನಿಯಿಂದ 1,064 ಕಿ.ಮೀ. ಉದ್ದದ ರಸ್ತೆಗಳಿಗೆ ಹಾನಿಯಾಗಿದ್ದು ಈ ಕುರಿತಂತೆ ದುರಸ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಎಇಇ ರಾಘವೇಂದ್ರ ನಾಯ್ಕ ಹೇಳಿದರು.
ಅಂಕೋಲಾ ತಾಲ್ಲೂಕಿನ ತಳಗದ್ದೆ, ಹಿಚಕಡ, ಹಿಲ್ಲೂರು, ಮೊಗಟಾ, ತೆಂಕಣಕೇರಿ, ಪೂಜಗೆರಿ, ನದಿಬಾಗ ಮುಂತಾದ ಭಾಗದಲ್ಲಿ ರಸ್ತೆಗಳು ಹಾಳಾಗಿವೆ.
‘ತಳಗದ್ದೆ ಭಾಗಕ್ಕೆ ದಿನಕ್ಕೆ ಎರಡು ಬಾರಿ ಮಾತ್ರ ಬಸ್ ಸಂಚಾರ ಮಾಡುತ್ತಿದೆ. ರಸ್ತೆ ಹಾಳಾಗಿದ್ದರಿಂದ ವಾಹನಗಳ ಸಂಚಾರ ಕಡಿಮೆಯಾಗಿದೆ. ಬಸ್ ತಪ್ಪಿದರೆ ಬೇರೆ ವಾಹನಗಳು ಸಿಗುತ್ತಿಲ್ಲ’ ಎಂದು ದೂರುತ್ತಾರೆ ವಿದ್ಯಾರ್ಥಿನಿ ಅಶ್ವಿನಿ ಗೌಡ.
ಮುಂಡಗೋಡ ತಾಲ್ಲೂಕಿನ ಅಗಡಿ, ನಂದಿಗಟ್ಟಾ, ಮುಡಸಾಲಿ, ಗೋದ್ನಾಳ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ರಸ್ತೆಯು ಹೊಂಡ, ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಸೌಕರ್ಯ ಇಲ್ಲದ ಊರುಗಳಿಂದ ಖಾಸಗಿ ವಾಹನಗಳು ಹಾಗೂ ಬೈಕ್‌ಗಳಲ್ಲಿ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ರಸ್ತೆ ಅವ್ಯವಸ್ಥೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹಳಿಯಾಳ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಗ್ರಾಮಗಳಿಂದ ಮುಖ್ಯ ರಸ್ತೆ ಸಂಪರ್ಕಿಸುವ ಕೂಡು ರಸ್ತೆಗಳಂತೂ ಸಂಚಾರಕ್ಕೆ ಯೋಗ್ಯವಾಗಿ ಉಳಿದಿಲ್ಲ.
‘ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಹಾಳಾಗಿದ್ದಲ್ಲಿ ಈಗಾಗಲೇ ದುರಸ್ತಿ ಮಾಡಲಾಗುತ್ತಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇ ಸಂಜೀವ ನಾಯ್ಕ ಹೇಳಿದರು.
ಗೋಕರ್ಣ ಭಾಗದ ಬಹುತೇಕ ಗಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿವೆ. ಡಾಂಬರು ರಸ್ತೆಗಳು ಹೊಂಡಮಯವಾಗಿದ್ದು, ಕೆಲವು ಕಡೆ ಇಂಗು ಗುಂಡಿಯಂತೆ ಭಾಸವಾಗುತ್ತಿದೆ. ಹೊಸ್ಕೇರಿ, ಕಡಿಮೆಯಿಂದ ಗೋಕರ್ಣಕ್ಕೆ ಸಂಪರ್ಕ ಕಲ್ಪಿಸುವ ತಿಪ್ಪಸಗಿ ರಸ್ತೆಯ ಸ್ಥಿತಿಯಂತೂ ಹೇಳತೀರದಾಗಿದೆ. ಚೌಡಗೇರಿಯ ರಸ್ತೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಯಲ್ಲಾಪುರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಒಳ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹುತ್ಕಂಡ ಕ್ರಾಸ್‌ನಿಂದ ಜೂಜಿನಬೈಲ್ ಶಾಲೆ ವರೆಗಿನ ರಸ್ತೆ, ವಜ್ರಳ್ಳಿಯಿಂದ ಬೀಗಾರ-ಬಾಗಿನಕಟ್ಟಾ ಸಂಪರ್ಕ ರಸ್ತೆ ಸೇರಿದಂತೆ ಹಲವು ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.
ಕುಮಟಾ ತಾಲ್ಲೂಕಿನ ಮೇದಿನಿ ಗ್ರಾಮದ ಸುಮಾರು 10 ಕಿ.ಮೀ ರಸ್ತೆ ಇನ್ನೂ ದುರಸ್ತಿ ಕಾಣದೆ ಸ್ಥಳೀಯರು ಮಳೆಗಾಲ, ಬೇಸಿಗೆಯಲ್ಲಿ ಕಡಿದಾಗ ರಸ್ತೆಯಲ್ಲಿ ಹರ ಸಾಹಸ ಮಾಡಿ ಓಡಾಡಬೇಕಾಗಿದೆ. ಇಂತದ್ದೇ ಸ್ಥಿತಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಇದೆ.
ದಾಂಡೇಲಿ ಹೊಸ ಕೊಂಡಪ, ಕಾಮಸೇತುವಾಡ, ಜಮಖಂಡಾ ಗೌಳಿ ವಾಡದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಗ್ರಾಮದ ರಸ್ತೆ ದುರಸ್ತಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ದೂರುತ್ತಾರೆ ಬಾಬು ಜೋರೆ.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಸಂತೋಷಕುಮಾರ ಹಬ್ಬು, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.
ಮುಡಸಾಲಿ–ಕಾತೂರ ಗ್ರಾಮೀಣ ರಸ್ತೆಯು ಹೊಂಡಗಳಿಂದ ತುಂಬಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ನಮ್ಮೂರಿನ ರಸ್ತೆ ಹೊಂಡಮಯವಾಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದು
-ಮಂಜುನಾಥ ಮುಡಸಾಲಿ (ಮುಂಡಗೋಡ) ಗ್ರಾಮಸ್ಥ
ಹಲವು ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಲು ಆದ್ಯತೆ ನೀಡದ ಪರಿಣಾಮ ಮಳೆಗಾಲದಲ್ಲಿ ಅವು ಬೇಗನೆ ಹಾಳಾಗುತ್ತಿವೆ.
-ಎಸ್.ಎಲ್.ಸೋಮಣ್ಣವರ (ಹಳಿಯಾಳ) ಮುರ್ಕವಾಡ ಗ್ರಾಮ ಪಂಚಾಯಿತಿ ಸದಸ್ಯ
ಗೋಕರ್ಣಕ್ಕೆ ಸಂಪರ್ಕಿಸುವ ಹೊಸ್ಕೇರಿ ರಸ್ತೆಯಂತೂ ಪ್ರತಿವರ್ಷ ಮಳೆಗಾಲದಲ್ಲಿ ಹೊಂಡದಿಂದಲೇ ತುಂಬಿರುತ್ತದೆ. ರಸ್ತೆ ಯಾವುದು ಹೊಂಡ ಎಲ್ಲಿದೆ ಎಂದು ಗುರುತಿಸಲಾಗದಷ್ಟು ಹದಗೆಟ್ಟಿದೆ
- ರಾಮಾ ಗೌಡ (ಗೋಕರ್ಣ) ತಿಪ್ಪಸಗಿ ನಿವಾಸಿ
ಮೇದಿನಿ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡಿ ಎಂದು ಹಲವು ವರ್ಷಗಳಿಂದ ನೀಡುತ್ತಿರುವ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಮಳೆಗಾಲದಲ್ಲಿ ಅನಾರೋಗ್ಯ ಪೀಡಿತರನ್ನು ಕೆಳಗೆ ಇಳಿಸಿ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವುದು ದುಸ್ತರದ ಕೆಲಸ
- ಶ್ರೀಪತಿ ಗೌಡ (ಕುಮಟಾ) ಮೇದಿನಿ ಗ್ರಾಮಸ್ಥ
ರಸ್ತೆಯಲ್ಲಿಯೇ ಹರಿಯುವ ಹಳ್ಳ
ಜೊಯಿಡಾ ತಾಲ್ಲೂಕಿನ ಕಿರವತ್ತಿಯಿಂದ ಡಿಗ್ಗಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಉಳವಿ-ಗೋವಾ ಗಡಿ ರಾಜ್ಯ ಹೆದ್ದಾರಿ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕರಂಜೆ ಡಿಗ್ಗಿ ದುದಮಳಾ ಕುವೇಶಿ ಬಾಡಪೋಲಿ ನಿಗುಂಡಿಕಟ್ಟೆ ನವರ ಕುಮಗಾಳಿ ಪಾತಾಗುಡಿ ಅಂಬಾಳಿ ಕೆಲೋಲಿ ಶಿವಪುರ ಬಿಡೋಲಿ ಪಾಟ್ನೆ ಗಾಂಗೋಡಾ ಸಿದೋಲಿ ಕುಂಬೇಲಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳೂ ಹಾಳಾಗಿದ್ದು ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ನೀರಿನ ಹಳ್ಳ ಹರಿಯುತ್ತವೆ. ಬಹುತೇಕ ಗ್ರಾಮೀಣ ಭಾಗದ ರಸ್ತೆಗಳು ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬರುತ್ತಿದ್ದು ರಸ್ತೆಯನ್ನು ಡಾಂಬರೀಕರಣ ಮಾಡದೇ ಮಣ್ಣು ಹಾಕಲಾಗಿದೆ. ಮಳೆ ನೀರಿಗೆ ಮಣ್ಣು ಕೊಚ್ಚಿ ಹೋಗಿ ರಸ್ತೆಗಳು ಹಾಳಾಗಿವೆ. ‘ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ದುರಸ್ತಿ ಪಡಿಸುವಂತೆ ಹಲವು ಬಾರಿ ಆಗ್ರಹಿಸಲಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಸಾವಂತ್.
ಬಸ್ ಸಂಚಾರ ಸ್ಥಗಿತ
ಸಿದ್ದಾಪುರ ತಾಲ್ಲೂಕಿನ ಮುಖ್ಯ ರಸ್ತೆಯನ್ನು ಹೊರತುಪಡಿಸಿ ಹೆಚ್ಚಿನ ಹಳ್ಳಿಗಳ ಸಂಪರ್ಕ ರಸ್ತೆ ಕಚ್ಚಾ ರಸ್ತೆಗಳೇ ಆಗಿವೆ. ಬೇಸಿಗೆಯಲ್ಲಿ ದೂಳಿನ ಸಮಸ್ಯೆಯಾದರೆ ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಮೆಣಸಿ–ಲಂಬಾಪುರ ರಸ್ತೆ ಹಾಳಾಗಿದ್ದರಿಂದ ಕೆಲ ಸಮಯ ಲಂಬಾಪುರಕ್ಕೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಕಾನಳ್ಳಿ–ಸಂಪಖಂಡ ರಸ್ತೆಯ ಮಧ್ಯೆಯೆ ನೀರು ವರತೆ ಏಳುವುದರಿಂದ ಮಳೆ ಜಾಸ್ತಿಯಾದರೆ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳ್ಳುತ್ತದೆ. ಮಳೆಗಾಲದಲ್ಲಿ ಎರಡು ವಾರ ಬಸ್ ಸಂಚಾರ ಇಲ್ಲದಂತಾಗಿತ್ತು. ಕೆಲವು ಕಡೆಯಲ್ಲಿ ಗ್ರಾಮಸ್ಥರೇ ರಸ್ತೆ ದುರಸ್ತಿ ಪಡಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.