ಪ್ರಮಾಣ ಅಳೆಯದ ಮಳೆ ಮಾಪನ ಯಂತ್ರ

ಶಿರಸಿ: ಮಳೆಯ ಮಾಹಿತಿ ಸಂಗ್ರಹಕ್ಕೆ ಗ್ರಾಮೀಣ ಭಾಗದಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆ.ಎಸ್.ಎನ್.ಡಿ.ಐ.ಸಿ.) ಸ್ಥಾಪಿಸಿರುವ ದೂರಸ್ಥ ಮಳೆ ಮಾಪನ ಯಂತ್ರಗಳು ಸೂಕ್ತ ನಿರ್ವಹಣೆ ಕಾಣದ ದೂರು ಕೇಳಿಬರುತ್ತಿದೆ. ಇದು ಸಮರ್ಪಕ ಮಾಹಿತಿ ಸಂಗ್ರಹಕ್ಕೆ ಅಡ್ಡಿಯಾಗಬಹುದು ಎಂಬ ಆತಂಕ ಜನರಲ್ಲಿದೆ.
ಪ್ರತಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಮಳೆ ಮಾಪನ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಮಳೆಗಾಲದ ವಧಿಯಲ್ಲಿ ಪ್ರತಿ 20 ನಿಮಿಷಕ್ಕೆ ಮಳೆ ಪ್ರಮಾಣದ ಮಾಹಿತಿಯನ್ನು ಇಲ್ಲಿಂದ ಕೆ.ಎಸ್.ಎನ್.ಡಿ.ಐ.ಸಿ. ಸಂಗ್ರಹಿಸಿಕೊಳ್ಳುತ್ತದೆ. ಈ ವರದಿ ಆಧರಿಸಿ ಹಳ್ಳಿಗಳಲ್ಲಿ ಬಿದ್ದ ಮಳೆಯ ಪ್ರಮಾಣ ಅಳೆಯಲಾಗುತ್ತದೆ.
ಆದರೆ,ಕಳೆದ ಎರಡು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿದಿದ್ದರೂ ಮಳೆ ಮಾಪನ ಯಂತ್ರಗಳಿಂದ ಸಂಗ್ರಹಿಸಲಾದ ವರದಿಯಲ್ಲಿ ಹೆಚ್ಚು ಮಳೆ ಬಿದ್ದಿರುವ ಅಂಶಗಳು ಸೇರಿಲ್ಲ. ಇದರಿಂದ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಪಡೆಯಲು ಸಮಸ್ಯೆಯಾಗಿದೆ ಎಂಬುದು ರೈತ ವಲಯದ ಆರೋಪ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ನಿಗದಿಪಡಿಸಿ ಮಳೆಮಾಪನ ಯಂತ್ರ ಸ್ಥಾಪಿಸಲಾಗಿದೆ. ಬಹುತೇಕ ಕಡೆ ಗ್ರಾಮ ಪಂಚಾಯ್ತಿ ಕಟ್ಟಡಗಳ ಮೇಲೆ ಸೌರಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ಇವುಗಳ ನಿರ್ವಹಣೆಗೆ ಸ್ಥಳೀಯವಾಗಿ ಸಿಬ್ಬಂದಿ ನಿಯೋಜನೆಯಾಗಿಲ್ಲ. ಕೆಲವು ಕಡೆಗಳಲ್ಲಿ ಗಿಡಗಂಟಿಗಳು ಯಂತ್ರದ ಸುತ್ತ ಬೆಳೆದುನಿಂತು ಮಳೆ ಪ್ರಮಾಣ ಅಳೆಯಲು ಅಡ್ಡಿಯಾಗುತ್ತಿದೆ ಎಂಬ ದೂರುಗಳಿವೆ.
ಈಚೆಗೆ ಸೋಂದಾದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಹಲವು ರೈತರು ಈ ವಿಚಾರದ ಕುರಿತು ಗಮನಸೆಳೆದಿದ್ದರು. ಬೆಳೆವಿಮೆ ಪರಿಹಾರ ತಾರತಮ್ಯದ ವಿರುದ್ಧ ಪ್ರತಿಭಟನೆ ನಡೆಸಿದ ಬನವಾಸಿ ಭಾಗದ ರೈತರು ಮಳೆ ಮಾಪನ ಕೇಂದ್ರಗಳ ದುರವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
‘ಮಳೆ ಮಾಪನ ಯಂತ್ರಗಳ ಸ್ಥಿತಿಗತಿ ಅರಿಯಲು ಅಂಕಿ–ಸಂಖ್ಯೆ ಇಲಾಖೆ ಅಧಿಕಾರಿಗಳ ಜತೆ ಖುದ್ದಾಗಿ ಸ್ಥಳ ಪರಿಶೀಲಿಸಲಾಗುವುದು. ಅಗತ್ಯವಿರುವ ಕಡೆ ಯಂತ್ರೋಪಕರಣ ಸರಿಪಡಿಸಿಕೊಡಲಾಗುವುದು’ ಎಂದು ಉಪವಿಭಾಗಾಧಿಕಾರಿ ಆರ್.ದೇವರಾಜ ಹೇಳಿದ್ದಾರೆ.
ನಿರ್ಲಕ್ಷ್ಯದಿಂದ ರೈತರಿಗೆ ಅನ್ಯಾಯ: ‘ಅತಿಯಾಗಿ ಮಳೆ ಬಿದ್ದ ದಿನಗಳಲ್ಲಿ ಬಂಕನಾಳ ಗ್ರಾಮ ಪಂಚಾಯ್ತಿಯ ಮಳೆ ಮಾಪನ ಯಂತ್ರದ ಮೇಲೆ ಮರದ ಟೊಂಗೆ ಬಿದ್ದಿತ್ತು. ಇದರಿಂದ ಮಳೆ ಬಿದ್ದ ಪ್ರಮಾಣ ಅಳತೆಯೇ ಆಗಿಲ್ಲ. ಇಂತಹ ಹಲವು ಉದಾಹರಣೆ ತಾಲ್ಲೂಕಿನಲ್ಲಿದೆ. ಯಂತ್ರದಿಂದ ಸರಿಯಾದ ಮಳೆ ಮಾಹಿತಿ ರವಾನೆಯಾಗದ ಕಾರಣ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಯಂತ್ರಗಳನ್ನು ಸುಸ್ಥಿತಿಯಲ್ಲಿಡಲು ಯಾವುದೇ ಸಿಬ್ಬಂದಿಯನ್ನೂ ನಿಯೋಜನೆ ಮಾಡಿಲ್ಲ’ ಎಂದು ರೈತ ಮುಖಂಡರಾದ ರಾಘವೇಂದ್ರ ನಾಯ್ಕ, ದ್ಯಾಮಣ್ಣ ದೊಡ್ಮನಿ ದೂರಿದರು.
***
ಗ್ರಾಮೀಣ ಭಾಗದಲ್ಲಿರುವ ಮಳೆಮಾಪನ ಯಂತ್ರಗಳನ್ನು ಸುಸ್ಥಿತಿಯಲ್ಲಿಡುವ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು.
–ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.