ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಗಡೆ ಹೇಳಿಕೆ |ಅಧಿಕಾರ ದಾಹದಿಂದ ಅವಹೇಳನ ಎಂದ ಶಾಸಕ ಭೀಮಣ್ಣ ನಾಯ್ಕ

Published 16 ಜನವರಿ 2024, 14:51 IST
Last Updated 16 ಜನವರಿ 2024, 14:51 IST
ಅಕ್ಷರ ಗಾತ್ರ

ಶಿರಸಿ: ಅಧಿಕಾರಕ್ಕೇರಲು ಇತರರ ಅವಹೇಳನ ಮಾಡುವ ಮನಸ್ಥಿತಿಯ ಸಂಸದ ಅನಂತಕುಮಾರ ಹೆಗಡೆ ತಮ್ಮ ನಡೆ ತಿದ್ದಿಕೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ಎಚ್ಚರಿಸಿದರು.

ನಗರದ ಸುಪ್ರಿಯಾ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ನೋಡುವಂಥ  ಕಾರ್ಯಕ್ರಮವನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಸಂಸದ ಹೆಗಡೆ ಅವರಿಗಿಲ್ಲ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ಈಗ ಅವಹೇಳನ ಮಾತು, ಧರ್ಮದ ಕಿಚ್ಚು, ಶ್ರೀರಾಮನ ಜಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. 

‘ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಸಾಧನೆ ಮಾಡದೇ, ಈಗ ಮುಂಬರುವ ಚುನಾವಣೆಗಾಗಿ ಮುಖ್ಯಮಂತ್ರಿ ಅವಹೇಳನ ಮಾಡಿ, ಧರ್ಮ ಘರ್ಷಣೆ ಮಾಡುವುದು ಬಿಜೆಪಿಗೆ ಅವಶ್ಯಕತೆ ಇದೆಯೇ ? ಬಿಜೆಪಿಯದ್ದು ಈಗ ಎಲ್ಲವೂ ಮುಗಿದಿದೆ. ಹಿಂದೆ ಪರೇಶ್ ಮೇಸ್ತ ಪ್ರಕರಣ ಇಟ್ಟುಕೊಂಡು ಹಿಂದುತ್ವ ಕಿಚ್ಚು ಹತ್ತಿಸಲಾಗಿತ್ತು. ಈಗ ಪುನಃ ಘರ್ಷಣೆ ಮಾಡಲು ಹೊರಟಿದೆ. ಜನರು ಇದೆಲ್ಲವನ್ನೂ ನೋಡುತ್ತಿದ್ದಾರೆ’ ಎಂದರು. 

‘ಲೋಕಸಭೆ ಚುನಾವಣೆ ಬಂದಾಗ ಬಿಜೆಪಿಯವರದ್ದು ಇಂಥ ಮಾತುಗಳು ಆರಂಭವಾಗುತ್ತದೆ. ಬಿಜೆಪಿಯವರು ಸ್ವಾರ್ಥದ ಅಧಿಕಾರಕ್ಕಾಗಿ ಹಿಂದುತ್ವದ ಅಜೆಂಡಾ ತಮ್ಮದಾಗಿಸಿಕೊಂಡಿದ್ದಾರೆ ಎಂದ ಭೀಮಣ್ಣ, ಬಿಜೆಪಿಯವರು ಧರ್ಮಗಳ ನಡುವೆ ಘರ್ಷಣೆ ಹಚ್ಚಿ ಅಧಿಕಾರಕ್ಕೆ ಬಂದು, ಈಗ ಯಾವ ನೈತಿಕತೆ ಇಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಾರೆ’ ಎಂದು ಪ್ರಶ್ನಿಸಿದರು. 

‘ರಾಜ್ಯದಲ್ಲಿ ಐದು ಗ್ಯಾರಂಟಿ ನೀಡಿ ಎಲ್ಲವನ್ನೂ ಕಾರ್ಯರೂಪಕ್ಕೆ ತಂದು ಜನಪರ ಎಂದು ಸಾಬೀತು ಮಾಡಲಾಗಿದೆ. ಆದರೆ ಬಿಜೆಪಿ ಯಾವುದೇ ಸಾಧನೆ ಮಾಡದೇ ಕೇವಲ ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ ಎಂದ ಅವರು, ಕಾಂಗ್ರೆಸ್ ಜನರ ಪರವಾದ ಸರ್ಕಾರವಾಗಿದ್ದು, ಬಿಜೆಪಿಗೆ ಟೀಕಿಸುವ ಯಾವ ನೈತಿಕತೆಯೂ ಇಲ್ಲ. ಮುಂದೆ ಇದೇ ರೀತಿ ಮಾತನಾಡಿದಲ್ಲಿ ಹೋರಾಟ ಮಾಡುತ್ತೇವೆ’ ಎಂದರು. 

ಈ ಸಂದರ್ಭದಲ್ಲಿ ಪ್ರಮುಖರಾದ ಜಗದೀಶ ಗೌಡ, ಎಸ್.ಕೆ.ಭಾಗ್ವತ್, ದೀಪಕ ದೊಡ್ಡುರು, ಸಂತೋಷ ಶೆಟ್ಟಿ, ಗೀತಾ ಶೆಟ್ಟಿ, ಸುಮಾ ಉಗ್ರಾಣಕರ, ಗಣೇಶ ದಾವಣಗೆರೆ ಇದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT