ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಅವೈಜ್ಞಾನಿಕ ಚರಂಡಿ ನಿರ್ಮಾಣ- ಬಾವಿ ನೀರಿಗೆ ಮಲಿನ ಸೇರ್ಪಡೆ

ರೋಗದ ಭೀತಿಯಲ್ಲಿ ಸ್ಥಳೀಯರು
Published 27 ನವೆಂಬರ್ 2023, 5:02 IST
Last Updated 27 ನವೆಂಬರ್ 2023, 5:02 IST
ಅಕ್ಷರ ಗಾತ್ರ

ಶಿರಸಿ: ನಗರಸಭೆ ಕಾರ್ಯಾಲಯದ ಸಮೀಪವೇ ಇರುವ ಮರಾಠಿಕೊಪ್ಪ ಜೋಡಕಟ್ಟೆ ಬಳಿ ಅವೈಜ್ಞಾನಿಕ ಚರಂಡಿ ನಿರ್ಮಾಣ ಹಾಗೂ ಅಸಮರ್ಪಕ ನಿರ್ವಹಣೆಯ ಪರಿಣಾಮ ಚರಂಡಿಯ ಮಲಿನ ನೀರು ಶುದ್ಧ ಕುಡಿಯುವ ನೀರಿನ ಬಾವಿಗಳಿಗೆ ಸೇರುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

‘ನಗರಸಭೆಯ ವಾರ್ಡ್ ನಂಬರ್ 3ರಲ್ಲಿ ಚರಂಡಿಯು ಸಮರ್ಪಕವಾಗಿಲ್ಲ. ಕಲುಷಿತ ನೀರು ಚಂಡಿಯಲ್ಲಿ ನಿಂತು ಗಬ್ಬು ವಾಸನೆ ಹರಡುತ್ತಿದೆ. ಕೊಪ್ಪಳ ಕಾಲೊನಿ, ಕಲ್ಯಾಣ ಮಂಟಪ, ವಿದ್ಯಾರ್ಥಿ ನಿಲಯ, ಖಾಸಗಿ ಆಸ್ಪತ್ರೆಯಿಂದ ಕಲುಷಿತ ನೀರನ್ನು ಈ ಚರಂಡಿಗೆ ಬಿಡುತ್ತಿದ್ದಾರೆ. ಡ್ರೈನೇಜ್ ಸರಿಪಡಿಸುವಂತೆ ಅನೇಕ ಬಾರಿ ನಗರಸಭೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಬೇರೆ ದಾರಿ ಇಲ್ಲದೆ ಅದೇ ನೀರನ್ನು ಉಪಯೋಗಿಸುವುದರಿಂದ ವಾರ್ಡಿನ ಅನೇಕ ನಿವಾಸಿಗಳು ಕಾಯಿಲೆಗಳಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ’ ಎಂಬುದು ಸ್ಥಳೀಕರ ದೂರಾಗಿದೆ.

‘ಹಲವಾರು ದಶಕಗಳಿಂದ ನಾವೆಲ್ಲರೂ ತೆರೆದ ಬಾವಿಯ ನೀರನ್ನೇ ಬಳಸುತ್ತಿದ್ದೇವೆ. ಈಗ ಆ ನೀರಿನ ಮೂಲವೇ ಮಲೀನಗೊಂಡಿದೆ. ಅದರಿಂದ ದುರ್ವಾಸನೆ ಹಾಗೂ ಜೌಷಧಿ ವಾಸನೆ ಬರುತ್ತಿದೆ. ಆದ್ದರಿಂದ ನಗರಸಭೆಯ ನಳದ ನೀರನ್ನು ಬಳಸುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ಕಮಲಾಕರ ಭಂಡಾರಿ ನೋವು ತೋಡಿಕೊಂಡರು. ‘ಜನರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಡುವ ಮುನ್ನ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ, ಚರಂಡಿ ಹೂಳೆತ್ತುವ ಮೂಲಕ ಡ್ರೈನೇಜ್ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ನಗರಸಭೆಯ ನೀರಿನ ಮೂಲವಾದ ಕೆಂಗ್ರೆ ಹಾಗೂ ಮಾರಿಗದ್ದೆಯ ನೀರು ಸರಬರಾಜು ಘಟಕದಿಂದ ಡಿಸೆಂಬರ್ ಅಂತ್ಯದವರೆಗೆ ಮಾತ್ರ ನೀರು ಪೂರೈಸಲು ಸಾಧ್ಯ. ನಂತರ ಬದಲಿ ವ್ಯವಸ್ಥೆ ಕೈಗೊಳ್ಳುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸುತ್ತಾರೆ. 12 ಶುದ್ಧ ನೀರಿನ ಬಾವಿಗಳು ಕಲುಷಿತಗೊಂಡರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಗಟಾರ ಸ್ವಚ್ಛಗೊಳಿಸಿದರೆ ಮಾತ್ರ ಬಾವಿಯಲ್ಲಿ ಶುದ್ಧ ನೀರು ಸಿಗುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ರಾಜೇಶ ಭಂಡಾರಿ.

ಶಿರಸಿ ನಗರದ ಜೋಡುಕಟ್ಟೆ ಬಳಿ ಅಸಮರ್ಪಕ ಚರಂಡಿ ವ್ಯವಸ್ಥೆ
ಶಿರಸಿ ನಗರದ ಜೋಡುಕಟ್ಟೆ ಬಳಿ ಅಸಮರ್ಪಕ ಚರಂಡಿ ವ್ಯವಸ್ಥೆ

ಚರಂಡಿಯ ಕಲುಷಿತ ನೀರು ಭೂಮಿಯಲ್ಲಿ ಇಂಗಿ ಬಾವಿ ಸೇರುತ್ತಿದೆ. ಜೋಡಕಟ್ಟೆ ಭಾಗದ ಸುಮಾರು 12 ಬಾವಿಗಳ ನೀರು ಕಲುಷಿತಗೊಂಡಿದೆ. ಕುಡಿಯುವ ನಗರಸಭೆಯ ನಳದ ನೀರು ಬಳಸಿದರೂ ಬಟ್ಟೆ ಪಾತ್ರ ತೊಳೆಯಲು ನೀರಿನ ಸಮಸ್ಯೆಯಾಗುತ್ತಿದೆ. ಚರಂಡಿಯಲ್ಲಿ ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

-ಪ್ರಭಾ ಶೆಟ್ಟಿ ಸ್ಥಳೀಯ ನಿವಾಸಿ

ಈಗಾಗಲೇ ಬಾವಿಗಳ ನೀರು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು

–ಕಾಂತರಾಜ್ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT