ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಹೊಸ ಅಡಿಕೆ ತೋಟಕ್ಕೆ ಜೀವಜಲ ಕೊರತೆ

ಅಸಾಂಪ್ರದಾಯಿಕ ಕ್ಷೇತ್ರದಲ್ಲಿ ತೋಟ ವಿಸ್ತರಣೆಗೆ ತೊಡಕಾದ ಬರ
Published 5 ಫೆಬ್ರುವರಿ 2024, 6:10 IST
Last Updated 5 ಫೆಬ್ರುವರಿ 2024, 6:10 IST
ಅಕ್ಷರ ಗಾತ್ರ

ಶಿರಸಿ: ಜಿಲ್ಲೆಯ ಅರೆಮಲೆನಾಡು, ಬಯಲುಸೀಮೆ ಪ್ರದೇಶದಲ್ಲಿ ಈಚಿನ ವರ್ಷಗಳಲ್ಲಿ ವ್ಯಾಪಕವಾಗಿ ವಿಸ್ತರಣೆಯಾಗಿದ್ದ ಅಡಿಕೆ ತೋಟಗಳು ನೀರಿನ ಕೊರತೆಗೆ ಬಳಲುತ್ತಿವೆ. ಅಲ್ಪಾವಧಿ ಬೆಳೆ ದೂರ ಮಾಡಿ ದೀರ್ಘಾವಧಿ ಬೆಳೆ ಅಡಿಕೆಯತ್ತ ಹೊರಳಿದ್ದ ರೈತರು ತೋಟಗಳ ಭವಿಷ್ಯ ನೆನೆದು ಚಿಂತಾಕ್ರಾಂತರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದೀಚೆಗೆ ನಿರ್ಮಿಸಿರುವ ಒಂದು ಸಾವಿರ ಹಕ್ಟೇರ್‌ಗೂ ಹೆಚ್ಚಿನ ಹೊಸ ತೋಟ ಸೇರಿದೆ. ಕಳೆದ ವರ್ಷವೊಂದೇ ಒಂದು ಸಾವಿರ ಹೆಕ್ಟೇರ್‌ ಕ್ಷೇತ್ರದಲ್ಲಿ ಅಡಿಕೆ ಸಸಿಗಳು ತಲೆ ಎತ್ತಿವೆ. ಬಯಲು ಸೀಮೆ ವಾತಾವರಣ ಹೊಂದಿರುವ ಬನವಾಸಿ ಹೋಬಳಿ, ಮುಂಡಗೋಡ ಭಾಗದಲ್ಲಿ ಹೆಚ್ಚಿನ ಕೃಷಿ ಕ್ಷೇತ್ರ ಅಡಿಕೆ ತೋಟಗಳಾಗಿ ಮಾರ್ಪಟ್ಟಿವೆ. ಇವುಗಳಿಗೆ ಜೀವನಾಡಿಯಾಗಿದ್ದ ವರದಾ ನದಿ ಜತೆ ಬಹುತೇಕ ಕೆರೆಕಟ್ಟೆ, ಜಲಾಶಯಗಳು ಹಾಗೂ ಕೊಳವೆ ಬಾವಿಗಳು ಬತ್ತಿರುವ ಕಾರಣ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಿನ ಕಾರ್ಯವಾಗಿದೆ.

‘ಈಗಾಗಲೇ ವರದಾ ನದಿ ಸಂಪೂರ್ಣ ಬತ್ತಿದೆ. ಧರ್ಮಾ ಜಲಾಶಯ ಸೇರಿದಂತೆ ವಿವಿಧ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀರಾ ಇಳಿದಿದೆ. ಕೆರೆಗಳು ತಳ ಮುಟ್ಟಿವೆ. ಹೀಗಾಗಿ ಹೊಸದಾಗಿ ಅಡಿಕೆ ತೋಟ ಮಾಡಿದ ಬಹುತೇಕ ರೈತರು ಕೊಳವೆಬಾವಿ ಆಶ್ರಯಿಸುತ್ತಿದ್ದಾರೆ. ಹಲವೆಡೆ ಕೊಳವೆಬಾವಿ ಕೊರೆಯುವ ಯಂತ್ರಗಳು ಬೀಡು ಬಿಟ್ಟಿವೆ. ಆದರೆ ಹೆಚ್ಚಿನ ಕಡೆ ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ಈ ಹಿಂದೆ ಕೊರೆದಿದ್ದವುಗಳ ಪೈಕಿ ಶೇ50ರಷ್ಟು ಕೊಳವೆಬಾವಿಗಳು ಬತ್ತಿವೆ. ಹೊಸದಾಗಿ ಗಿಡ ನಾಟಿ ಮಾಡಿದ ಗಿಡಗಳಿಗೆ ನೀರುಣಿಸಲು ಕಷ್ಟವಾಗಿದೆ’ ಎನ್ನುತ್ತಾರೆ ಮಳಗಿಯ ನಾಗರಾಜ ನಾಯ್ಕ.

‘ಅಡಿಕೆಗೆ ಉತ್ತಮ ಹಾಗೂ ಸ್ಥಿರ ಧಾರಣೆ ಇದೆ ಎಂಬ ಕಾರಣಕ್ಕೆ ಆಹಾರ ಬೆಳೆಯ ಬದಲಾಗಿ ಅಡಿಕೆ ಗಿಡಗಳ ನಾಟಿ ಮಾಡಲಾಗಿದೆ. ಹೊಸ ಗಿಡಗಳಿಗೆ ನೀರಿಲ್ಲದೇ ಎಲ್ಲವೂ ಒಣಗುತ್ತಿವೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಕೃಷಿಕ ಸಿದ್ಧಪ್ಪ ದಾಸನಕೊಪ್ಪ ಹೇಳಿದರು.

‘ಅಡಿಕೆ ಗಿಡಗಳಿಗೆ ಉತ್ತಮ ಬೇಡಿಕೆ ಇರುವ ಕಾರಣ ನರ್ಸರಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬನವಾಸಿ ಹಾಗೂ ಮುಂಡಗೋಡ ಭಾಗದಲ್ಲಿ 25ಕ್ಕೂ ಹೆಚ್ಚು ಬೃಹತ್ ಅಡಿಕೆ ಸಸಿಗಳ ನರ್ಸರಿಗಳಿವೆ. ಬರಗಾಲದ ಕಾರಣಕ್ಕೆ ಸದ್ಯ ಅಡಿಕೆ ಸಸಿಗಳಿಗೆ ಬೇಡಿಕೆ ತಗ್ಗಿದ್ದು, ಅವುಗಳನ್ನು ರಕ್ಷಿಸಿಕೊಳ್ಳುವದೂ ಸವಾಲಾಗುತ್ತಿದೆ’ ಎಂದು ನರ್ಸರಿ ಮಾಲೀಕರೊಬ್ಬರು ಹೇಳಿದರು.

ಅಸಾಂಪ್ರದಾಯಿಕ ಕ್ಷೇತ್ರದಲ್ಲಿ ಅಡಿಕೆ ಬೆಳೆ ವಿಸ್ತರಣೆ ಆಗಿತ್ತು ಈ ಸಮಸ್ಯೆಗೆ ಕಾರಣವಾಗಿದೆ. ರೈತರು ಮುಂದಾಲೋಚನೆ ಮಾಡಿಕೊಂಡು ಅಡಿಕೆ ಕ್ಷೇತ್ರ ವಿಸ್ತರಿಸಲು ಮುಂದಾಗಬೇಕು
- ಸತೀಶ ಹೆಗಡೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT