ಶಿರಸಿ: ತಾಲ್ಲೂಕಿನ ಪೂರ್ವ ಭಾಗದ 15ಕ್ಕೂ ಹೆಚ್ಚು ಗ್ರಾಮಗಳ ಕೃಷಿ ಜಮೀನುಗಳಿಗೆ ನೀರಿನ ಕೊರತೆ ಎದುರಾಗಿರುವುದು ರೈತ ವಲಯದಲ್ಲಿ ಆತಂಕ ಸೃಷ್ಟಿಸಿದೆ.

32 ಗ್ರಾಮ ಪಂಚಾಯಿತಿ ಒಳಗೊಂಡ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸದ್ಯ ತೊಂದರೆ ಆಗಿಲ್ಲ. ಈಚೆಗಷ್ಟೆ ಸುರಿದ ಮಳೆಯಿಂದ ಕೆರೆ ಬಾವಿಗಳಲ್ಲಿ ತಕ್ಕಮಟ್ಟಿಗೆ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ, ಬನವಾಸಿ ಹೋಬಳಿಯ ಅಂದಾಜು 1,500 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ, ಬಾಳೆ, ಮೆಕ್ಕೆಜೋಳ, ಅನಾನಸ್ ಬೆಳೆಯನ್ನು ಬೆಳೆಯಲಾಗುತ್ತಿದೆ. ಯಥೇಚ್ಛ ನೀರು ಬೇಡುವ ಈ ಬೆಳೆಗಳಿಗೆ ಕೊಳವೆಬಾವಿ ಮೂಲಕ ನೀರು ವಿತರಿಸುವ ಸ್ಥಿತಿ ಉಂಟಾಗಿದೆ.

ಕಳೆದ ವರ್ಷದ ಅತಿವೃಷ್ಟಿಯ ಕಾರಣಕ್ಕೆ ನೀರಿನ ಕೊರತೆ ಆಗದು ಎಂದು ರೈತರು ನಂಬಿದ್ದರು. ಆದರೆ ಏರುತ್ತಿರುವ ತಾಪಮಾನ, ಬಿಸಿಲ ಬೇಗೆಯ ಕಾರಣಕ್ಕೆ ಅವರ ನಂಬಿಕೆ ಹುಸಿಯಾಗಿದೆ. ಬನವಾಸಿ ಹೋಬಳಿಯ ಬನವಾಸಿ, ಅಂಡಗಿ, ದಾಸನಕೊಪ್ಪ, ಮಧುರವಳ್ಳಿ, ವದ್ದಲ, ಕಲಕರಡಿ, ಹೊಸನಗರ, ಕತ್ರಿಕೊಪ್ಪ, ಭಾಶಿ ಸೇರಿ ಹಲವು ಗ್ರಾಮಗಳಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ನೀರಿನ ಸಮಸ್ಯೆ ತಲೆದೋರಿದೆ.

‘ಒಣ ಹವೆ ವಾತಾವರಣದ ಬನವಾಸಿ ಹೋಬಳಿಯ ಗ್ರಾಮಗಳಲ್ಲಿ ಭತ್ತ, ಜೋಳ, ಅನಾನಸ್, ಶುಂಠಿ ಉತ್ತಮವಾಗಿ ಬೆಳೆಯುತ್ತವೆ. ಆದರೆ ಇತ್ತೀಚಿನ ವರ್ಷದಲ್ಲಿ ಅಡಿಕೆಗೆ ಬಂದ ಧಾರಣೆಯ ಕಾರಣಕ್ಕೆ ಬಹುತೇಕ ರೈತರು ಈ ಎಲ್ಲ ಬೆಳೆಯ ಕ್ಷೇತ್ರ ಇಳಿಸಿ ಅಲ್ಲಿ ಅಡಿಕೆ ನಾಟಿ ಮಾಡಿದ್ದರು. ಅಡಿಕೆ ತೋಟಕ್ಕೆ ನೀರು ಹಾಯಿಸುವುದು ಸವಾಲಿನ ಕೆಲಸವಾಗಿದೆ. ಇದರ ಜತೆ ಉಳಿದ ಬೆಳೆಗಳಿಗೂ ನೀರು ಸಾಲುತ್ತಿಲ್ಲ’ ಎನ್ನುತ್ತಾರೆ ರೈತ ಸೋಮಶೇಖರ.

‘ಅಂತರ್ಜಲ ಇಳಿಕೆಯ ಜತೆ ಈ ಭಾಗದಲ್ಲಿ ವಿದ್ಯುತ್ ವೊಲ್ಟೇಜ್ ಕಡಿತದಿಂದ ಪಂಪ್ಸೆಟ್ಗಳು ಕೆಲಸ ಮಾಡುತ್ತಿಲ್ಲ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಹಾಯಿಸಲಾಗುತ್ತಿದೆ’ ಎಂದರು.

‘ತಾಲ್ಲೂಕಿನ 32 ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಪಂಚಾಯಿತಿಯ ಹಲವು ಗ್ರಾಮಗಳಲ್ಲಿ ಮೇ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆಯಿದೆ’ ಎಂಬುದು ತಾಲ್ಲೂಕು ಆಡಳಿತದ ಅಧಿಕಾರಿಯೊಬ್ಬರ ಮಾತು.

‘ನಗರದ ಕುಡಿಯುವ ನೀರಿನ ಮೂಲವಾದ ಮಾರಿಗದ್ದೆ ಹಾಗೂ ಕೆಂಗ್ರೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಒಡ್ಡಿನಲ್ಲಿ 5 ಅಡಿಗಿಂತ ಹೆಚ್ಚು ನೀರು ಹೆಚ್ಚುವರಿಯಾಗಿ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಮೇ ತಿಂಗಳಲ್ಲಿ ಮತ್ತೆ ನೀರಿನ ಕೊರತೆ ತಲೆದೋರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ’ ಎನ್ನುತ್ತಾರೆ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ.

ಜಮೀನಿಗೆ ನೀರು ಹಾಯಿಸಲು ತೊಂದರೆ ಆಗುತ್ತಿದೆ. ಒಂದೆಡೆ ಕೊಳವೆಬಾವಿಗಳಿಗೆ ನೀರಿನ ಕೊರತೆಯಾದರೆ ಇನ್ನೊಂದೆಡೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಕೂಡ ಇದಕ್ಕೆ ಕಾರಣ
ನಾಗರಾಜ ನಾಯ್ಕ, ಬನವಾಸಿ ಕೃಷಿಕ

ಸಧ್ಯ ತಾಲ್ಲೂಕಿನೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೃಷಿ ಜಮೀನಿಗೆ ಅನುಕೂಲವಾಗಲು ಇನ್ನಷ್ಟು ಮಳೆಯಾಗುವ ಅಗತ್ಯವಿದೆ
ಸತೀಶ ಹೆಗಡೆ, ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.