ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಸ್ಥಾಪನೆಯಾಗದ ಜಲಸಾರಿಗೆ ತರಬೇತಿ ಸಂಸ್ಥೆ!

ಕಳೆದ ಬಜೆಟ್‍ನಲ್ಲಿ ಘೊಷಣೆಯಾಗಿದ್ದ ಯೋಜನೆ: ಕೇಂದ್ರ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ
Last Updated 13 ಮಾರ್ಚ್ 2023, 23:58 IST
ಅಕ್ಷರ ಗಾತ್ರ

ಕಾರವಾರ: ರಾಜ್ಯ ಸರ್ಕಾರದ ಕಳೆದ ಸಾಲಿನ ಬಜೆಟ್‍ನಲ್ಲಿ ಕಾರವಾರದಲ್ಲಿ ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆ ನೆರವಿನೊಂದಿಗೆ ಜಲಸಾರಿಗೆ ಹಾಗೂ ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪನೆ ಯೋಜನೆ ಸರ್ಕಾರ ಘೋಷಿಸಿತ್ತು. ಆದರೆ ಈವರೆಗೆ ಯೋಜನೆ ಅನುಷ್ಠಾನಗೊಂಡಿಲ್ಲ.

ರಾಜ್ಯ ಸರ್ಕಾರ ಕರಾವಳಿ ಭಾಗದಲ್ಲಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಜಲಸಾರಿಗೆ ಮತ್ತು ಮೀನುಗಾರಿಕೆ ಚಟುವಟಿಕೆ ಬಗ್ಗೆ ತರಬೇತಿ ಒದಗಿಸಲು ಕೇಂದ್ರವೊಂದನ್ನು ಸ್ಥಾಪಿಸಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ನೆರವು ಅಗತ್ಯವಿರುವ ಕಾರಣ ಯೋಜನೆ ಜಾರಿಗೊಳಿಸುವ ಜವಾಬ್ದಾರಿ ಹೊತ್ತಿರುವ ಬಂದರು ಜಲಸಾರಿಗೆ ಮಂಡಳಿ ಕೇಂದ್ರ ಸ್ಥಾಪನೆಗೆ ₹30.35 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿಯನ್ನೂ (ಡಿ.ಪಿ.ಆರ್.) ಕೇಂದ್ರಕ್ಕೆ ಸಲ್ಲಿಸಿದೆ.

ಆದರೆ, ವರ್ಷ ಕಳೆದರೂ ಈವರೆಗೆ ಕೇಂದ್ರದಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಉನ್ನತ ಅಧಿಕಾರಿಗಳ ಅಳಲು.

‘ಕಾರವಾರದಲ್ಲಿರುವ ಡಿಪ್ಲೊಮಾ ಹಾಗೂ ಐಟಿಐ ಕಾಲೇಜ್‌ಗಳಲ್ಲಿ ತರಬೇತಿ ಚಟುವಟಿಕೆ ಆರಂಭಿಸಬೇಕು. ಇದಕ್ಕಾಗಿ ಅಗತ್ಯವಿರುವ ಪ್ರಾಥಮಿಕ ವ್ಯಾಸಂಗ ಪಠ್ಯ ಹಾಗೂ ಅಲ್ಪಾವಧಿ ವ್ಯಾಸಂಗ ಪಠ್ಯವನ್ನು ತಯಾರಿಸುವ ಬಗ್ಗೆ ಜಲಸಾರಿಗೆ ಮಂಡಳಿಯಲ್ಲಿ ಈ ಹಿಂದೆಯೇ ಚರ್ಚೆ ನಡೆದಿತ್ತು. 2022ರ ಏ.12 ರಂದು ಜಲಸಾರಿಗೆ, ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆಯನ್ನೂ ನೀಡಿದೆ’ ಎಂದು ಜಲಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನೆರೆಯ ಗೋವಾ, ಕೇರಳ, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್‍ನಿಂದ (ಡಿಜಿ ಶಿಪ್ಪಿಂಗ್) ಪ್ರಮಾಣ ಪತ್ರ ನೀಡುವ ಕೋರ್ಸುಗಳಿವೆ. ಇವು ನಾವಿಕ ಶಿಲ್ಪ ತರಬೇತಿ ಪಡೆದವರಿಗೆ, ಉದ್ಯೋಗದಲ್ಲಿದ್ದು ಪದೋನ್ನತಿ ಪಡೆಯಲು ಯತ್ನಿಸುವವರಿಗೆ ಅನುಕೂಲವಾಗುತ್ತದೆ. ಕರ್ನಾಟಕದಲ್ಲಿ ಇಂತಹ ಅವಕಾಶ ಈವರೆಗೆ ಇಲ್ಲದ ಕಾರಣ ತರಬೇತಿ ಕೇಂದ್ರದಿಂದ ಅನುಕೂಲ ಆಗುತ್ತಿತ್ತು’ ಎಂದೂ ಹೇಳಿದರು.

ಬೈತಖೋಲ ಬಳಿ ಜಾಗ

‘ಜಲಸಾರಿಗೆ ಹಾಗೂ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆಗೆ ಅನುಮತಿ ಸಿಕ್ಕ ಬಳಿಕ ಕೇಂದ್ರ ಸ್ಥಾಪನೆಗೆ ಅಗತ್ಯ ಸಿದ್ಧತೆ ಆರಂಭಗೊಳ್ಳಲಿದೆ. ಬೈತಖೋಲದಲ್ಲಿರುವ ಬಂದರು ಇಲಾಖೆ ಕಚೇರಿಯ ಜಾಗದ ಸಮೀಪದಲ್ಲಿರುವ ಗುಡ್ಡದಲ್ಲಿ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆಯಿಂದ ಅಂತಿಮ ಅನುಮತಿ ಸಿಗಬೇಕಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ತಿಳಿಸಿದರು.

------------------------

ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರವೇ ಜಲಸಾರಿಗೆ ಹಾಗೂ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆಗೆ ಅನುಮತಿ ಸಿಗುವ ನಿರೀಕ್ಷೆ ಇದೆ.
ಕ್ಯಾಪ್ಟನ್ ಸಿ.ಸ್ವಾಮಿ
ಬಂದರು ಜಲಸಾರಿಗೆ ಮಂಡಳಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT