ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ವರ್ಷಗಳ ಇತಿಹಾಸ ಇರುವ ಹೊಸಪೇಟೆ ದಸರಾ

ದೇವರೇ ಬನ್ನಿ ಮುಡಿಯುವ, ಮುಡಿಸುವ ವಿಶಿಷ್ಟ ಆಚರಣೆ
Published 23 ಅಕ್ಟೋಬರ್ 2023, 16:56 IST
Last Updated 23 ಅಕ್ಟೋಬರ್ 2023, 16:56 IST
ಅಕ್ಷರ ಗಾತ್ರ

ಹೊಸಪೇಟೆ: ದೇವರೇ ಬನ್ನಿ ಮುಡಿಯುವುದು ಎಂಬ ಮಾತನ್ನು ಕೇಳಿದ್ದೀರಾ? ದಕ್ಷಿಣ ಭಾರತದಲ್ಲಿ ಆ ಮಾತು ಕೇಳಲು ಸಾಧ್ಯವಿಲ್ಲ. ಅಂತಹ ವಿಶಿಷ್ಟ ಆಚರಣೆ ಹೊಸಪೇಟೆಯಲ್ಲಿ ಮಾತ್ರ ನಡೆಯುತ್ತಿದೆ. ಆಯುಧ ಪೂಜೆಯ ದಿನವಾದ ಸೋಮವಾರ ನಾಗೇನಹಳ್ಳಿಯ ಧರ್ಮದಗುಡ್ಡದಲ್ಲಿ ಏಳು ಕೇರಿಗಳ ಶಕ್ತಿ ದೇವತೆಗಳು ಚನ್ನಬಸವೇಶ್ವರ ಹಾಗೂ ನಿಜಲಿಂಗಮ್ಮನಿಗೆ ಬನ್ನಿ ಮುಡಿಸುವ ಮೂಲಕ ಸೋದರ ಪ್ರೀತಿಯನ್ನು ತೋರಿಸಿದವು.

ಮೈಸೂರು ದಸರಾ ಆರಂಭವಾಗುವುದಕ್ಕೆ ಮೊದಲೇ ವಿಜಯನಗರ ಸಾಮ್ರಾಜ್ಯದ ಮಹಾನ್‌ ದೊರೆ ಕೃಷ್ಣದೇವರಾಯನ ಕಾಲದಲ್ಲಿ ದಸರಾ ಆಚರಣೆ ಆರಂಭವಾಯಿತು. ಹಂಪಿಯಲ್ಲಿರುವ ಮಹಾನವಮಿ ದಿಬ್ಬವನ್ನು ನಿರ್ಮಿಸಿದ್ದು ಸಹ ಈ ದಸರಾ ಆಚರಣೆಗಾಗಿಯೇ. ಅಂದಿನಿಂದ ನಡೆಯುತ್ತ ಬಂದಿರುವ ದಸರಾ ವಿಜಯನಗರ ಸಾಮ್ರಾಜ್ಯದ ಪತನದ ನಂತರ ತನ್ನ ಮಹತ್ವ ಕಳೆದುಕೊಂಡರೂ, ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಗೊಳ್ಳುತ್ತ ಬಂದಿದೆ. ಸರ್ಕಾರದ ನೆರವಿಲ್ಲದೆ ಇಲ್ಲಿ ದಸರಾ ಆಚರಣೆ ನಡೆಯುತ್ತಿದ್ದರೆ, ಮೈಸೂರು ದಸರಾಕ್ಕೆ ಸರ್ಕಾರದ ನೆರವು ದೊರೆತು ವಿಜೃಂಭಣೆ ಪಡೆದುಕೊಳ್ಳುವಂತಾಗಿದೆ.

ಈಚಿನ ದಿನಗಳಲ್ಲಿ ಹೊಸಪೇಟೆ ದಸರಾ ಆಚರಣೆ ಮತ್ತೆ ಕಳೆಗಟ್ಟತೊಡಗಿದೆ. ಸೋಮವಾರ ನಡೆದ ದಸರಾದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಧರ್ಮದಗುಡ್ಡದಲ್ಲಿ ಸೇರಿದ್ದರು. ಸ್ಥಳೀಯ ಕ್ಷೇತ್ರಾಧಿಪತಿಗಳಾದ  ಚನ್ನಬಸವೇಶ್ವರ, ನಿಜಲಿಂಗಮ್ಮ ಅವರ ಉತ್ಸವ ಮೂರ್ತಿಗಳ ಜತೆಯಲ್ಲಿ ಸಾಗಿದ ಏಳು ಕೇರಿಗಳ ಶಕ್ತಿದೇವತೆಗಳ ಪಲ್ಲಕ್ಕಿಗಳು ಬನ್ನಿ ಮರಕ್ಕೆ ಐದು ಸುತ್ತು ಹಾಕಿ, ಚನ್ನವಸವೇಶ್ವರನಿಗೆ ಬನ್ನಿ ಮುಡಿಸಿ ಮತ್ತೆ ತಮ್ಮ ಕೇರಿಗಳಿಗೆ ಹಿಂದಿರುಗಿದವು. ಕಮಲಾಪುರ ಭಾಗದಲ್ಲೂ ಏಳು ಕೇರಿಗಳಿದ್ದು, ಅಲ್ಲಿಂದಲೂ ಪಲ್ಲಕ್ಕಿಗಳು ಬಂದಿದ್ದವು.

ಚನ್ನಬಸವೇಶ್ವರ ಅಥವಾ ಶಿವನನ್ನು ಶಕ್ತಿ ದೇವತೆಗಳು ತಮ್ಮ ಸಹೋದರ, ಸಹೋದರಿ ಎಂದೇ ಭಾವಿಸುತ್ತವೆ. ಆತನ ಕ್ಷೇತ್ರಕ್ಕೆ ವರ್ಷಕ್ಕೆ ಒಮ್ಮೆ ಬರುವಾಗ ಆತನಿಗೇ ಬನ್ನಿ ಮುಡಿಸಿ ತಮ್ಮ ಪ್ರೀತಿ ತೋರುತ್ತವೆ. ವಿಶೇಷವೆಂದರೆ ಚನ್ನಬಸವೇಶ್ವರ, ನಿಜಲಿಂಗಮ್ಮ ಅವರ ಉತ್ಸವವೂ ಆಯುಧಪೂಜೆ, ವಿಜಯದಶಮಿಗಳಂದು ನಡೆಯುತ್ತದೆ. ಹೀಗಾಗಿ ಎರಡೂ ಆಚರಣೆಗಳು ಒಂದೆಡೆ ಕಲೆತು ನಾಗೇನಹಳ್ಳಿ ಎಂಬ ಪುಟ್ಟ ಊರು ಉತ್ಸಾಹದಿಂದ  ಹಬ್ಬವನ್ನು ಆಚರಿಸುತ್ತದೆ. ಊರಿಗೆ ಊರೇ ಸಂಭ್ರಮಿಸುತ್ತದೆ.  ಜತೆಗೆ ಹೊಸಪೇಟೆಯ ವಾಲ್ಮೀಕಿ ನಾಯಕ ಜನಾಂಗದ ಏಳು ಕೇರಿಗಳು ಸುಮಾರು 20 ದಿನಗಳ ಮಹಾಲಯ, ನವರಾತ್ರಿ ಹಬ್ಭ್ರಗಳ ಅಂತಿಮ ದಿನದ ಸಂಭ್ರಮದಲ್ಲಿ ಮಿಂದೇಳುತ್ತದೆ.

ಹಿನ್ನೆಲೆ:

‘ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೃಷ್ಣದೇವರಾಯ ಏಳು ಸಾವಿರ ಬೇಡರ ಪಡೆಗಳನ್ನು ಹೊಸಪೇಟೆ ಕೋಟೆಯ ಹಿಂಭಾಗದಲ್ಲಿ ಇರಿಸಿದ್ದ. ಆಗ ವಿಜಯನಗರ ಸಾಮ್ರಾಜ್ಯದ ವಿಸ್ತೀರ್ಣ 60 ಚದರ ಕಿ.ಮೀ.ನಷ್ಟಿತ್ತು. ಶತ್ರು ಸೈನ್ಯ ಹೊಸಪೇಟೆಯ ಬೇಡರ ಪಡೆಯನ್ನು ದಾಟಿಯೇ ಸಾಮ್ರಾಜ್ಯದೊಳಗೆ ಬರಬೇಕಿತ್ತು. 1565ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಏಳು ಸಾವಿರ ಬೇಡರ ಪಡೆ ಏಳು ಕೇರಿಗಳಾಗಿ ಮಾರ್ಪಾಟಾದವು. ಪ್ರತಿಯೊಂದು ಕೇರಿಗಳಲ್ಲೂ ಹೆಣ್ಣು ದೇವತೆಗಳನ್ನು (ಶಕ್ತಿ ದೇವತೆ) ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿ ಮುಂದುವರಿದ ಜನಾಂಗದವರು ಬೇಡ ಜನಾಂಗದವರನ್ನು ತಮ್ಮ ದೇವಾಲಯಗಳಿಗೆ ಬಿಟ್ಟುಕೊಡುತ್ತಿರಲಿಲ್ಲ. ಹೀಗಾಗಿ ತಾವೇ ತಮ್ಮ ದೇವತೆಗಳನ್ನು ಸ್ಥಾಪಿಸಿಕೊಂಡರು’ ಎಂದು ವಿವರಣೆ ನೀಡುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ತಾರಿಹಳ್ಳಿ ಹನುಮಂತಪ್ಪ.

ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ, ತಳವಾರಕೇರಿಯ ರಾಂಪುರ ದುರ್ಗಮ್ಮ, ಚಿತ್ರಕೇರಿಯ ತಾಯಮ್ಮ, ಬಾಣದಕೇರಿಯ ನಿಜಲಿಂಗಮ್ಮ ಹಾಗೂ ಉಕ್ಕಡಕೇರಿಯ ಜಲದುರ್ಗಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆ ನೋಡುವುದೇ ಚೆಂದ. ಹೊಸಪೇಟೆಯಿಂದ ಸುಮಾರು 5 ಕಿ.ಮೀ.ದೂರದ ನಾಗೇನಹಳ್ಳಿಗೆ ಈ ಪಲ್ಲಕ್ಕಿಗಳನ್ನು ಹತ್ತಾರು ಯುವಕರು ಹೊತ್ತು ತರುತ್ತಾರೆ.  ಚನ್ನಬಸವೇಶ್ವರ, ನಿಜಲಿಂಗಮ್ಮ ಅವರ ಉತ್ಸವ ಮೂರ್ತಿಗಳ ಜತೆಯಲ್ಲಿ ಈ ಎಲ್ಲ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಬನ್ನಿ ಮರದತ್ತ ಬರುತ್ತವೆ. ಬನ್ನಿ ಮರದ ಬುಡದಲ್ಲಿ ಕಾಳಮ್ಮ ದೇವಿ ಇದ್ದು, ಶಕ್ತಿ ದೇವತೆಗಳು ಚನ್ನಬಸವೇಶ್ವರ, ನಿಜಲಿಂಗಮ್ಮ ಉತ್ಸವ ಮೂರ್ತಿಗಳಿಗೆ ಬನ್ನಿ ಮುಡಿಸುತ್ತವೆ. ಬಳಿಕ ತಮ್ಮ ಕೇರಿಗಳತ್ತ ತೆರಳುತ್ತವೆ. ‌ರಾತ್ರಿ ಇಡೀ ಕೋಲಾಟ, ಡೊಳ್ಳುಕುಣಿತಗಳಿಂದ ಶಕ್ತಿ ದೇವತೆಗಳ ಆರಾಧನೆ ಮುಂದುವರಿಯುತ್ತದೆ.

ಮರುದಿನ ಅಂದರೆ ವಿಜಯದಶಮಿ ದಿನ ಊರ ಬನ್ನಿ ನಡೆಯತ್ತದೆ. ಕೇರಿಗಳ ಮಂದಿ ಪರಸ್ಪರ ಬನ್ನಿ ಹಂಚಿಕೊಂಡು ಸೌಹಾರ್ದತೆ, ಭಾವೈಕ್ಯದ ಸಂದೇಶ ಸಾರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT