ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮ: 24 ಅರ್ಜಿ ಸ್ಥಳದಲ್ಲಿಯೇ ವಿಲೇವಾರಿ

ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮ
Published 29 ಜೂನ್ 2024, 16:02 IST
Last Updated 29 ಜೂನ್ 2024, 16:02 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಚಿಲವಾರು ಬಂಡಿ ಏತನೀರಾವರಿ ಯೋಜನೆ ಆರಂಭಿಸುವುದು, ವಲಯ ಅರಣ್ಯ ಇಲಾಖೆ ಕಚೇರಿ ಸ್ಥಾಪಿಸುವುದು, ಹಸಿರು ವಲಯ ಪ್ರದೇಶ ಎಂದು ಘೋಷಿಸುವುದು, ರೈಲ್ವೇ ಗೇಟ್ ಬಳಿ ಫ್ಲೈಓವರ್ ಸ್ಥಾಪಿಸುವುದು, ಶಾಲೆಗೆ ನಿವೇಶನ ನೀಡುವುದು, ಮರಬ್ಬಿಹಾಳು ಏತ ನೀರಾವರಿ ಕಾಮಗಾರಿ ಆರಂಭಿಸುವುದು, ಪುರಸಭೆ ವ್ಯಾಪ್ತಿಯಲ್ಲಿ ಶೇ 80ರಷ್ಟು ಮನೆಗಳಿಗೆ ದುಪ್ಪಟ್ಟು ತೆರಿಗೆ ವಿಧಿಸುತ್ತಿರುವುದು ಸೇರಿದಂತೆ ಹತ್ತಾರು ಸಮಸ್ಯೆಗಳು ಜಿಲ್ಲಾಧಿಕಾರಿಗಳ ಮುಂದೆ ಅನಾವರಣಗೊಂಡವು.

ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಕೆಲವುಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರೆ, ಇನ್ನೂ ಕೆಲವು ಅರ್ಜಿಗಳನ್ನು ಕಾಲಮಿತಿಯೊಳಗೆ ಬಗೆಹರಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲ್ಲೂಕಿನ ವಿವಿಧ ಕಡೆಗಳಿಂದ ಬಂದಿದ್ದ 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. 186 ಅರ್ಜಿಗಳು ಸಲ್ಲಿಕೆಯಾದವು, 24 ಸ್ಥಳದಲ್ಲಿಯೇ ವಿಲೇವಾರಿಯಾದವು. ತಾಲ್ಲೂಕಿನ ಉಪನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಕೆ 4 ಎಕರೆ ಜಮೀನು ನೀಡುವಂತೆ ಎಸ್‌ಡಿಎಂಸಿ ಅಧ್ಯಕ್ಷ ವಿ.ಹುಲುಗಪ್ಪ ಸೇರಿದಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ನೆಲ್ಕುದ್ರಿ ಚಿಮ್ಮನಹಳ್ಳಿ ಗ್ರಾಮಗಳ ಜನರ ಸಂಪರ್ಕಕ್ಕೆ ಚಿನ್ನ ಹಗರಿಹಳ್ಳಕ್ಕೆ ಸಂಪರ್ಕ ಸೇತುವೆ ನಿರ್ಮಿಸುವಂತೆ ಪೂಜಾರ ಸಿದ್ದಪ್ಪ ಬೇಡಿಕೆ ಮುಂದಿಟ್ಟರು. ನರೇಗಾ ಯೋಜನೆ ಅಡಿಯಲ್ಲಿ ಅಗತ್ಯ ಕಾಮಗಾರಿ ತೆಗೆದುಕೊಳ್ಳುವುದಕ್ಕೆ ಅವಕಾಶ ಇದ್ದರೆ ನೋಡಿ ಎಂದು ತಾಲ್ಲೂಕು ಪಂಚಾಯ್ತಿ ಇಒ ಜಿ.ಪರಮೇಶ್ವರ್ ಅವರಿಗೆ ಸೂಚಿಸಿದರು.

ಮಾದೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವಂತೆ ಗ್ರಾಮದ ಡಾ.ಎಸ್.ರಾಧಕೃಷ್ಣನ್ ಶಿಕ್ಷಣ ಪ್ರೇಮಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು. ಅಭಿಮತ ವರ್ಗಾವಣೆಯಲ್ಲಿ ಎಲ್ಲ ಹುದ್ದೆಗಳು ಭರ್ತಿಯಾಗುತ್ತವೆ ಎಂದು ಬಿಇಒ ಮೈಲೇಶ್ ಬೇವೂರು ತಿಳಿಸಿದರು.

ಅಹಿಂದ ವೇದಿಕೆಯ ಸದಸ್ಯರಾದ ಬುಡ್ಡಿ ಬಸವರಾಜ, ಎಚ್.ದೊಡ್ಡಬಸಪ್ಪ, ಕಹಳೆ ಬಸವರಾಜ ಇತರರು ಪಟ್ಟಣದ ಸುತ್ತಮುತ್ತ 10ಕಿ.ಮೀ.ವ್ಯಾಪ್ತಿಯನ್ನು ಹಸಿರು ವಲಯವನ್ನಾಗಿ ಘೋಷಿಸುವಂತೆ ಮನವಿ ಸಲ್ಲಿಸಿದರು.

ಪುರಸಭೆಯ 15ನೇ ಹಣಕಾಸು ಯೋಜನೆಯ ಅನುದಾನವನ್ನು ಎಲ್ಲ ಸದಸ್ಯರ ವಾರ್ಡ್‍ಗಳಿಗೆ ಹಂಚಿಕೆ ಮಾಡಲು ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ಮನವಿ ಸಲ್ಲಿಸಿದರು.

ಶಾಸಕ ಕೆ.ನೇಮರಾಜನಾಯ್ಕ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಬೇಕು, ಅವರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಮ್ ಪಾಶಾ, ಉಪವಿಭಾಗಧಿಕಾರಿ ನೋಗ್ಡಾಯ್ ಮೊಹಮದ್ ಅಲಿ ಅಕ್ರಂ ಷಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಶೇಖರಪ್ಪ ಹೊರಪೇಟಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ಶಿವರಾಜ್ ಇದ್ದರು.

ಜನಸ್ಪಂದನದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಜನಸ್ಪಂದನದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು

100ಕಿ.ಮೀ ವ್ಯಾಪ್ತಿಯಲ್ಲಿ ಆಂಬುಲನ್ಸ್ ಉಚಿತವಾಗಿ ನೀಡಿ ದುಪ್ಪಟ್ಟು ತೆರಿಗೆ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ ಮಾಲವಿ ಜಲಾಶಯದ ಕ್ರೆಸ್ಟ್‌ಗೇಟ್ ಅಳವಡಿಕೆಗೆ ಟೆಂಡರ್

ಜಿಲ್ಲಾಧಿಕಾರಿಗಳಿಗೆ ಅಲೆಮಾರಿಗಳ ಸನ್ಮಾನ ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮಕ್ಕೂ ಮುನ್ನ ಅಲೆಮಾರಿ ಬೈಲಪತ್ತಾರ ಕಾಲೊನಿಗೆ ಭೇಟಿ ನೀಡಿದರು. ಅಲ್ಲಿನ ನಿವಾಸಿಗಳ ನಿವೇಶನ ಪಟ್ಟಾ ನೀಡಿ ಎರಡು ದಶಕಗಳ ಬೇಡಿಕೆ ಈಡೇರಿಸಿದ್ದಕ್ಕೆ ನಿವಾಸಿಗಳು ಸಂವಿಧಾನ ಮತ್ತು ಪೆನ್ನು ನೀಡಿ ಗೌರವಿಸಿದರು. ದಿಢೀರ್ ಹಾಸ್ಟೆಲ್ ಭೇಟಿ: ಪಟ್ಟಣದ ಹಳೇ ಊರಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‍ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿದರು. ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿ ಉಗ್ರಾಣದಲ್ಲಿ ಸಂಗ್ರಹಿಸಿದ್ದ ದಾಸ್ತಾನು ಮತ್ತು ವಿತರಣೆ ಪರಿಶೀಲಿಸಿದರು. ಉತ್ತಮ ನಿರ್ವಹಣೆ ಮಾಡಿದ ಮೇಲ್ವಿಚಾರಕಿ ಜಯಮ್ಮ ಮತ್ತು ಸಿಬ್ಬಂದಿಯನ್ನು ಪ್ರಶಂಸಿದರು. ಶೌಚಾಲಯ ನಿರ್ಮಾಣಕ್ಕೆ ವಿರೋಧ: ಬಸರಕೋಡು ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ದೈಹಿಕ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ. ನ್ಯಾಯ ದೊರಕಿಸಿಕೊಡುವಂತೆ ಗ್ರಾಮದ ಎಸ್.ಗೌರಮ್ಮ ಮತ್ತು ಅವರ ಪತಿ ಶೇಖರಯ್ಯ ಜಿಲ್ಲಾಧಿಕಾರಿಗಳ ಬಳಿ ಅಲವತ್ತುಕೊಂಡರು. ನಮಗೆ ಈಗ ವಿಷ ಕುಡಿಯುವುದೊಂದೇ ಬಾಕಿ ಎಂದು ಕಣ್ಣೀರು ಹಾಕಿದರು. ಈ ಕುರಿತು ಪರಿಶೀಲಿಸುವಂತೆ ಸಿಪಿಐ ವಿಕಾಸ್ ಲಮಾಣಿ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT