ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: 18ರಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಶತಮಾನೋತ್ಸವ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಶತಮಾನೋತ್ಸವ ಸಮಾರಂಭ
Last Updated 16 ಡಿಸೆಂಬರ್ 2022, 7:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನೂರು ವರ್ಷ ಪೂರೈಸಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಶತಮಾನೋತ್ಸವ ಸಮಾರಂಭ ಡಿ. 18ರಂದು ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಬ್ಯಾಂಕಿನ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ ತಿಳಿಸಿದರು.

ಅಂದು ಬೆಳಿಗ್ಗೆ ನಗರದ ಸುರಂಗ ಮಾರ್ಗದಿಂದ ವಡಕರಾಯ ದೇವಸ್ಥಾನದ ವರೆಗೆ 300ಕ್ಕೂ ಅಧಿಕ ಬೈಕುಗಳ ರ್‍ಯಾಲಿ ನಡೆಸಲಾಗುವುದು.

ಅನಂತರ ವಡಕರಾಯ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದ ವರೆಗೆ ಕಲಾ ತಂಡಗಳ ಮೆರವಣಿಗೆ ಜರುಗಲಿದೆ. ಶತಮಾನೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಧ್ವಜಾರೋಹಣ ನೆರವೇರಿಸುವರು. ಬ್ಯಾಂಕಿನ ಅಧ್ಯಕ್ಷರೂ ಆದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಸೇರಿದಂತೆ ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸುವರು. ಶತಮಾನೋತ್ಸವದ ಆಡಳಿತ ಭವನ, ಮೂರು ಶಾಖೆಗಳ ಕಟ್ಟಡಗಳ ಶಂಕುಸ್ಥಾಪನೆ ಸಾರಿಗೆ ಸಚಿವ ಬಿ. ಶ್ರೀರಾಮುಲು ನೆರವೇರಿಸುವರು. ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು.

2020ರ ಡಿಸೆಂಬರ್‌ 12ಕ್ಕೆ ಬ್ಯಾಂಕು ನೂರು ವರ್ಷಗಳನ್ನು ಪೂರೈಸಿದೆ. ಆದರೆ, ಕೋವಿಡ್‌ನಿಂದ ಶತಮಾನೋತ್ಸವ ಸಂಘಟಿಸಲು ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಕಳೆದ 45 ವರ್ಷಗಳಿಂದ ಬ್ಯಾಂಕ್‌ ನಿರಂತರ ಲಾಭದಲ್ಲಿದೆ. ರಾಜ್ಯದ 21 ಡಿಸಿಸಿ ಬ್ಯಾಂಕುಗಳಲ್ಲಿ ಮೊದಲಿಗೆ ಯುಪಿಐ ಸೇವೆ ಆರಂಭಿಸಿದ ಕೀರ್ತಿ ಬಿಡಿಸಿಸಿಗೆ ಸಲ್ಲುತ್ತದೆ ಎಂದು ಹೇಳಿದರು.

668 ಸಹಕಾರಿಗಳ ಸದಸ್ಯತ್ವ ಹೊಂದಿರುವ ಬ್ಯಾಂಕ್‌ ₹120.86 ಕೋಟಿ ಷೇರು ಬಂಡವಾಳ, ₹97.31 ಕೋಟಿ ಕಾಯ್ದಿಟ್ಟ ನಿಧಿ ಹೊಂದಿದೆ. ಒಟ್ಟು ₹1345.50 ಕೋಟಿ ಠೇವಣಿ ಹೊಂದಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ₹456.69 ಕೋಟಿ ಹೂಡಿಕೆ ಮಾಡಲಾಗಿದೆ. ಜಿಲ್ಲೆಯ 1,11893 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹1035.49 ಕೋಟಿ, ಶೇ 3ರ ಬಡ್ಡಿ ದರದಲ್ಲಿ 4690 ರೈತರಿಗೆ ₹69.52 ಕೋಟಿ ಭೂ ಅಭಿವೃದ್ಧಿ ಸಾಲ, ₹483.58 ಕೋಟಿ ಕೃಷಿಯೇತರ ಸಾಲ ಸೌಲಭ್ಯ ನೀಡಲಾಗಿದೆ. ರೈತರು, ಸ್ವಸಹಾಯ ಗುಂಪಿನ ಸದಸ್ಯರಿಗಾಗಿ ಎರಡು ಮೊಬೈಲ್‌ ಎಟಿಎಂ ಸೇವೆ ಆರಂಭಿಸಲಾಗಿದೆ. ಯಾವುದೇ ಬ್ಯಾಂಕಿನ ಎಟಿಎಂ ಬಳಸಿ ₹40 ಸಾವಿರ ಹಣ ಬಿಡಿಸಿಕೊಳ್ಳಬಹುದು. ಒಟ್ಟು 33 ಶಾಖೆ, 18 ಸ್ವಂತ ಎಟಿಎಂಗಳಿವೆ ಎಂದು ವಿವರಿಸಿದರು.

ಸಹಕಾರ ಸಂಘಗಳ ಸಹಕಾರದಿಂದ 4624 ಸ್ವಸಹಾಯ ಗುಂಪುಗಳನ್ನು ರಚಿಸಿ, ಹಣ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. 606 ಸ್ವಸಹಾಯ ಗುಂಪುಗಳಿಗೆ ಪ್ರಸಕ್ತ ಸಾಲಿನಲ್ಲಿ ₹7.40 ಕೋಟಿ ಸಾಲ ನೀಡಲಾಗಿದೆ. ಆಯ್ದ 100 ಸಹಕಾರ ಸಂಘಗಳಲ್ಲಿ ಮೈಕ್ರೋ ಎಟಿಎಂ ಆರಂಭಿಸಲು ಯೋಜಿಸಿದ್ದು, ತಾಂತ್ರಿಕ ಪರಿಶೀಲನೆಯ ಹಂತದಲ್ಲಿದೆ ಎಂದು ತಿಳಿಸಿದರು.

1 ಲಕ್ಷ ರೈತರಿಗೆ ಯಶಸ್ವಿನಿ ಕಾರ್ಡ್‌:
ಬ್ಯಾಂಕಿನಿಂದ ಒಂದು ಲಕ್ಷ ರೈತರಿಗೆ ಯಶಸ್ವಿನಿ ಕಾರ್ಡ್‌ ನೋಂದಣಿ ಮಾಡಿಸಲು ಉದ್ದೇಶಿಸಲಾಗಿದೆ. ಪರಿಶಿಷ್ಟ ಜಾತಿ/ಪಂಗಡದವರಿಗೆ ಸಂಪೂರ್ಣ ಉಚಿತ, ಸಹಕಾರ ಸಂಘದ ಸದಸ್ಯತ್ವ ಹೊಂದಿದವರು ನಿಗದಿತ ಶುಲ್ಕ ಭರಿಸಿ ಡಿಸೆಂಬರ್‌ 31ರೊಳಗೆ ನೋಂದಣಿ ಮಾಡಿಸಬೇಕು ಎಂದು ಹೇಳಿದರು.

ಬ್ಯಾಂಕಿನಿಂದ ಸಾಲ ಪಡೆದು ವಾಪಸ್‌ ಕಟ್ಟದ ಸಹಕಾರ ಸಂಘಗಳ ವಿರುದ್ಧ ಒಟ್ಟು 150 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ಬ್ಯಾಂಕಿನ ನಿರ್ದೇಶಕರಾದ ಎಲ್‌.ಎಸ್‌. ಆನಂದ್‌, ಚಿದಾನಂದ ಐಗೋಳ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್‌ ಬಿ.ಎಸ್‌., ಕೆ. ತಿಮ್ಮಾರೆಡ್ಡಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT