ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದಿಂದ ರೈತರ ನಿರ್ಲಕ್ಷ್ಯ

ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್‌.ಪಾಟೀಲ್‌ ನಡಹಳ್ಳಿ ಆರೋಪ
Published 13 ಏಪ್ರಿಲ್ 2024, 14:19 IST
Last Updated 13 ಏಪ್ರಿಲ್ 2024, 14:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ರೈತರಿಗಾಗಿ ಒಂದೇ ಒಂದು ಯೋಜನೆ ಪ್ರಕಟಿಸಿಲ್ಲ. ಬರ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಬದಲು ಕೇಂದ್ರದ ಮೇಲೆ ದೂರು ಹೇಳುತ್ತ ತನ್ನ ತಪ್ಪನ್ನು ಮರೆಮಾಚಲು ಪ್ರಯತ್ನಿಸುತ್ತಿದೆ’ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್‌.ಪಾಟೀಲ್‌ ನಡಹಳ್ಳಿ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಅತಿವೃಷ್ಟಿ ಸಂಭವಿಸಿದ್ದಾಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದ ನೆರವಿಗೆ ಕಾಯದೆ ರಾಜ್ಯದಿಂದಲೇ ಪರಿಹಾರ ನೀಡಿತ್ತು. ಬೆಳೆಹಾನಿ ಪರಿಹಾರ ದುಪ್ಪಟ್ಟುಗೊಳಿಸಿ ಕೇವಲ 60 ದಿನಗಳಲ್ಲಿ ಎರಡು ಕಂತುಗಳಲ್ಲಿ ವಿತರಿಸಿತ್ತು. ಒಂದು ಹಂತದಲ್ಲಿ 23 ಲಕ್ಷ ಹೆಕ್ಟೇರ್‌ಗೆ ಪರಿಹಾರ ನೀಡಿದ ನಿದರ್ಶನವೂ ಇದೆ. ಆದರೆ, ಈ ಸರ್ಕಾರ ಒಂದು ಸಾವಿರ ಎಕರೆಯಷ್ಟು ಕೃಷಿ ಭೂಮಿಗೆ ಪರಿಹಾರ ಕೊಟ್ಟಿಲ್ಲ. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ನೀಡಿದ ₹2 ಸಾವಿರ ಪರಿಹಾರ ಇನ್ನೂ ಶೇ 30ರಷ್ಟು ಮಂದಿಗೆ ತಲುಪಿಯೇ ಇಲ್ಲ’ ಎಂದರು.

‘ರೈತ ಮಕ್ಕಳಿಗೆ ನೀಡಲಾಗುತ್ತಿದ್ದ ಸ್ಕಾಲರ್‌ಶಿಪ್‌ ರದ್ದಾಗಿದೆ. ಹೈನುಗಾರರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನ ಬಂದ್ ಆಗಿದ್ದು, ₹717 ಕೋಟಿ ನೀಡುವುದು ಬಾಕಿ ಉಳಿದಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ಯಾವುದೇ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರಿಂದ ಸಭೆ ನಡೆದಿಲ್ಲ. ಹಿಂಗಾರು ಬೆಳೆ ನಾಶ ಕುರಿತಂತೆ ಇದುವರೆಗೂ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿಲ್ಲ’ ಎಂದು ಆರೋಪಿಸಿದರು.

‘ಬರಗಾಲ ಪರಿಸ್ಥಿತಿ ಬೇರೆ ರಾಜ್ಯಗಳಲ್ಲೂ ಇದೆ. ಆದರೆ ಇಲ್ಲಿನ ರಾಜ್ಯ ಸರ್ಕಾರದಂತೆ ಅವುಗಳು ಕೇಂದ್ರ ಸರ್ಕಾರವನ್ನು ದೂರುತ್ತ ಕುಳಿತಿಲ್ಲ. ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸವನ್ನು ಸರಿಯಾಗಿ ಮಾಡದ ಕಾರಣ ಪರಿಹಾರ ಬರುವುದು ವಿಳಂಬವಾಗಿದೆ. ರೈತರ ಕುರಿತಂತೆ ಬಿಜೆಪಿಗೆ ಇರುವ ಕಾಳಜಿಯ ಕುರಿತು ಮತದಾರರಿಗೆ ಅರಿವಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತರು ಪಕ್ಷದ ಕೈಹಿಡಿಯುವ ವಿಶ್ವಾಸ ಇದೆ’ ಎಂದರು.

ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಗುರುಲಿಂಗ ಗೌಡ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸನಗೌಡ ಪಾಟೀಲ, ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ರೇವಣ್ಣ, ಪ್ರಧಾನ ಕಾರ್ಯದರ್ಶಿ ಸಂಜೀವ ರೆಡ್ಡಿ, ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT