ಮಂಗಳವಾರ, ಸೆಪ್ಟೆಂಬರ್ 21, 2021
21 °C

ಗುರುತಿನ ಚೀಟಿ ಕೊಡದ ಅಧಿಕಾರಿ ವಜಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕಟ್ಟಡ ಕಾರ್ಮಿಕರಿಂದ ಹೆಸರು ನೋಂದಣಿಗೆ ಹಣ ಪಡೆದು ಅವರಿಗೆ ಇದುವರೆಗೆ ಗುರುತಿನ ಚೀಟಿ ಕೊಡದ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ಕಾರ್ಯಕರ್ತರು ಮಂಗಳವಾರ ನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೋವಿಡ್‌ ಎರಡನೇ ಅಲೆಯಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ₹3,000 ಪರಿಹಾರ ಘೋಷಿಸಿತ್ತು. ಇದುವರೆಗೆ ಆ ಹಣ ಪಾವತಿಸಿಲ್ಲ. ಕೂಡಲೇ ಕಟ್ಟಡ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು. ಕೋವಿಡ್‌ ಎರಡನೇ ಅಲೆಯ ಪರಿಹಾರ ಪ್ಯಾಕೇಜಿನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಆರೋಪಗಳು ಕೇಳಿ ಬಂದಿವೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರಿಗೆ ವಿತರಿಸಲು ಉದ್ದೇಶಿಸಿರುವ ಆಹಾರದ ಕಿಟ್‌ಗಳನ್ನು ಆಯಾ ಕ್ಷೇತ್ರದ ಶಾಸಕರಿಗೆ ಒಪ್ಪಿಸಿರುವುದು ಸರಿಯಾದ ನಿರ್ಧಾರವಲ್ಲ. ಕಾರ್ಮಿಕ ಕಲ್ಯಾಣ ಮಂಡಳಿಯ ಸೆಸ್‌ ಹಣದಿಂದ ಕಾರ್ಮಿಕ ಸಚಿವರು ಕಾರು ಖರೀದಿಸಿರುವುದು ಸರಿಯಲ್ಲ. ಸೇವಾ ಸಿಂಧೂ, ಸೈಬರ್‌ ಕೇಂದ್ರಗಳಲ್ಲಿ ಅನೇಕರ ನಕಲಿ ಹೆಸರು ನೋಂದಣಿಯಾಗಿವೆ. ಅವುಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ವಿತರಿಸಲು ಉದ್ದೇಶಿಸಿರುವ ಆಹಾರ ಕಿಟ್‌ಗಳ ಬದಲು ₹10,000 ನಗದು ನೀಡಬೇಕು. ಕಿಟ್‌ ವಿತರಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ಎನ್‌. ಯಲ್ಲಾಲಿಂಗ, ಕಾರ್ಯದರ್ಶಿ ಕೆ. ರಾಮಾಂಜಿನಿ, ತಾಲ್ಲೂಕು ಅಧ್ಯಕ್ಷ ಎಂ. ಗೋಪಾಲ್‌, ಖಜಾಂಚಿ ಬಿಯಮ್ಮ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು