ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಒಳಹರಿವು ಇಳಿಕೆ; ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಸಂಪೂರ್ಣ ಬಂದ್

Published : 17 ಸೆಪ್ಟೆಂಬರ್ 2024, 13:11 IST
Last Updated : 17 ಸೆಪ್ಟೆಂಬರ್ 2024, 13:11 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿರುವ ಕಾರಣ ಮಂಗಳವಾರದಿಂದ ಕ್ರಸ್ಟ್‌ಗೇಟ್‌ಗಳನ್ನು ಸಂಪೂರ್ಣ ಬಂದ್ ಮಾಡಿ ನೀರು ಸಂಗ್ರಹಿಸಿ ಇಟ್ಟುಕೊಳ್ಳುವ ಕಾರ್ಯ ಆರಂಭವಾಗಿದೆ.

ಒಳಹರಿವಿನ ಪ್ರಮಾಣ 10,683 ಕ್ಯುಸೆಕ್‌ನಷ್ಟಿದ್ದು, ಕಾಲುವೆಗಳಿಗೆ ಹರಿಯುವ ನೀರಿನ ಪ್ರಮಾಣ 10,696 ಕ್ಯೂಸೆಕ್‌ನಷ್ಟಿದೆ. ಹೀಗಾಗಿ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ನಿಲ್ಲಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಡಿ ಇದ್ದು, ಸದ್ಯ 1,632 ಅಡಿ ಮಟ್ಟದಲ್ಲಿ ನೀರು ನಿಲ್ಲಿಸಲಾಗಿದೆ. 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 101.77 ಟಿಎಂಸಿ ಅಡಿ ನೀರು ಇದೆ.

ಕಾಲುವೆಗೆ ಹರಿಯುತ್ತಿರುವ ನೀರಿನಷ್ಟೇ ಪ್ರಮಾಣದಲ್ಲಿ ಜಲಾಶಯದ ಒಳಹರಿವು ಸಹ ಇರುವ ಕಾರಣ ಇನ್ನೂ ಕೆಲವು ದಿನ ಇದೇ ಮಟ್ಟದಲ್ಲಿ ಅಣೆಕಟ್ಟೆಯಲ್ಲಿ ನೀರು ಇರುವ ನಿರೀಕ್ಷೆ ಇದೆ.

‘ಈಗಿನ ಸ್ಥಿತಿಯಲ್ಲಿ ಮೊದಲ ಬೆಳೆಗಂತೂ ನೀರು ಸಿಕ್ಕಿದೆ, ಎರಡನೇ ಬೆಳೆಗೂ ನೀರು ಸಿಗುವ ಸಾಧ್ಯತೆ ಇದೀಗ ಕಾಣಿಸುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ತಿಳಿಸಿದ್ದಾರೆ. ಹಿಂಗಾರು ಮಳೆ ಸಹ ಉತ್ತಮವಾಗಿ ಆದರೆ ಎರಡನೇ ಬೆಳೆಗೆ ಸಾಕಷ್ಟು ನೀರು ಸಿಗಲಿದೆ ಎಂಬ ವಿಶ್ವಾಸದಲ್ಲಿ ರೈತರಿದ್ದಾರೆ.

ಕಳೆದ ಬಾರಿ ತೀವ್ರ ಮಳೆ ಕೊರತೆಯಿಂದ ಅಣೆಕಟ್ಟೆ ಭರ್ತಿಯಾಗಿರಲಿಲ್ಲ. ಈ ಬಾರಿ ಆರಂಭದಲ್ಲೇ ಮುಂಗಾರು ಉತ್ತಮವಾಗಿದ್ದರಿಂದ ಜುಲೈ 19ರ ವೇಳೆಗೆ ಅಣೆಕಟ್ಟೆ ಬಹುತೇಕ ಭರ್ತಿಯಾಗಿತ್ತು ಮತ್ತು ಜುಲೈ 22ರಿಂದ ಕ್ರಸ್ಟ್‌ಗೇಟ್ ತೆರೆದು ನದಿಗೆ ನೀರು ಹರಿಸಲಾಗಿತ್ತು. ಆಗಸ್ಟ್ 2ರಂದು 1.78 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಬಿಡಲಾಗಿತ್ತು. ಬಳಿಕ ಒಳಹರಿವಿನ ಪ್ರಮಾಣ ಕಡಿಮೆಯಾದ ಕಾರಣ ಆಗಸ್ಟ್ 10ರಂದು ಗರಿಷ್ಠ ಪ್ರಮಾಣದಲ್ಲಿ ನೀರು ನಿಲುಗಡೆ ಮಾಡಲಾಗಿತ್ತು. ಅದೇ ದಿನ ರಾತ್ರಿ 19ನೇ ಕ್ರಸ್ಟ್‌ಗೇಟ್ ನೀರಲ್ಲಿ ಕೊಚ್ಚಿ ಹೋಗಿತ್ತು. ಒಂದೇ ವಾರದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಿದ ಬಳಿಕ ಮತ್ತೆ ಮಳೆ ಬಂದು ಒಳಹರಿವಿನ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ 18 ದಿನದಲ್ಲೇ ಮತ್ತೆ  ಜಲಾಶಯ ಬಹುತೇಕ ಭರ್ತಿಯಾದ ಕಾರಣ ಸೆ.4ರಂದು 10 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲು ಆರಂಭಿಸಲಾಗಿತ್ತು. ಒಳಹರಿವು ಕಡಿಮೆಯಾದಂತೆ ಹಂತ ಹಂತವಾಗಿ ಗೇಟ್‌ಗಳನ್ನು ಮುಚ್ಚುತ್ತ ಕೊನೆಯ ಕೆಲವು ದಿನ ಮೂರು ಗೇಟ್‌ಗಳಿಂದ ಮಾತ್ರ ನೀರನ್ನು ಹರಿಸಲಾಗುತ್ತಿತ್ತು. ಇದೀಗ ಎಲ್ಲಾ  ಗೇಟ್‌ಗಳನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ.

ವರದಿಗೆ ನಿರೀಕ್ಷೆ: ಈ ಮಧ್ಯೆ, ಅಣೆಕಟ್ಟೆಯ ಕ್ರಸ್ಟ್‌ಗೇಟ್‌ ಕೊಚ್ಚಿಹೋಗಲು ಕಾರಣವಾದ ಅಂಶಗಳ ಬಗ್ಗೆ ಸ್ಥಳಕ್ಕೆ ಬಂದು ತನಿಖೆ ನಡೆಸಿರುವ ತಜ್ಞರ ತಂಡ ಶೀಘ್ರ ವರದಿ ಸಲ್ಲಿಸುವ ನಿರೀಕ್ಷೆ ಇದ್ದು, ಅದು ನೀಡುವ ಸಲಹೆ, ಸೂಚನೆಗಳತ್ತ ಕುತೂಹಲ ನೆಲೆಸಿದೆ. ಎಲ್ಲಾ 33 ಗೇಟ್‌ಗಳನ್ನೂ ತಕ್ಷಣ ಬದಲಿಸಬೇಕು ಎಂದು ತಂಡದಲ್ಲಿದ್ದ ತಜ್ಞರು ನಿರ್ಗಮಿಸುವುದಕ್ಕೆ ಮೊದಲು ಮೌಖಿಕವಾಗಿ ತಿಳಿಸಿದ್ದರು ಎಂದು ಮಂಡಳಿಯ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT