ಬುಧವಾರ, ಆಗಸ್ಟ್ 10, 2022
25 °C

ಹರಪನಹಳ್ಳಿ: ಕತ್ತೆಗಳ ಮದುವೆ ಬೆನ್ನಲ್ಲೇ ಸುರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಮಳೆಗೆ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಿದ ಬೆನ್ನಲ್ಲೇ ತುಂತುರು ಮಳೆಯಾಗಿದ್ದು, ಜನರ ಸಂಭ್ರಮಕ್ಕೆ ಕಾರಣವಾಯಿತು.

ಮಳೆಗೆ ಪ್ರಾರ್ಥಿಸಿ ಪಟ್ಟಣದ ಕೋಣನಕೇರಿ ನಿವಾಸಿಗಳು ಸೋಮವಾರ ಕತ್ತೆಗಳ ಮದುವೆ ಮಾಡಿದರು. ಹೆಣ್ಣು ಕತ್ತೆಗೆ ಸೀರೆ, ಗಂಡು ಕತ್ತೆಗೆ ಪಂಚೆ ತೊಡಿಸಿ, ಮೈಗೆ ಅರಿಶಿಣ, ಕುಂಕುಮ ಲೇಪಿಸಿ, ಹೂವು ಮಾಲೆಗಳಿಂದ ಅಲಂಕರಿಸಿ, ತೆರೆದ ಟ್ರ್ಯಾಕ್ಟರ್ ನಲ್ಲಿ ಕತ್ತೆಗಳನ್ನು ನಿಲ್ಲಿಸಿದರು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಪುರೋಹಿತರ ಮಂತ್ರಪಠಣ, ಮಂತ್ರಾಕ್ಷತೆ, ತಮಟೆ ಬಾರಿಸಿ ತಾಳಿಕಟ್ಟಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದರು. ಕೋಣನಕೇರಿ ಬಡಾವಣೆಯ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಐತಿಹಾಸಿಕ ಕೋಟೆ ಆಂಜನೇಯ ದೇವಸ್ಥಾನ, ಮೇಗಳಪೇಟೆ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ತುಂತುರು ಮಳೆಯಾಯಿತು. ಮಳೆ ಬಂದದ್ದಕ್ಕೆ ಹರಕೆ ಫಲಿಸಿತು ಎಂದು ಸ್ಥಳೀಯರು ಸಂಭ್ರಮಿಸಿದರು. ಮಳೆರಾಯ ಮುನಿಸಿಕೊಂಡಾಗ ಸ್ಥಳೀಯರು ಕತ್ತೆಗಳ ಮದುವೆ ಮಾಡುವ ವಾಡಿಕೆ ಇದೆ. ಕತ್ತೆಗಳ ಮದುವೆ ಆದ ಎರಡು ದಿನಗಳೊಳಗೆ ಮಳೆಯಾಗುತ್ತದೆ. ಆದರೆ, ಈ ಸಲ ಅದೇ ದಿನ ಮಳೆಯಾಗಿರುವುದು ವಿಶೇಷ ಎಂದು ಸ್ಥಳೀಯರು ತಿಳಿಸಿದರು.

ಮುಂಗಾರಿಗೂ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಶೇ.80ರಷ್ಟು ರೈತರು ಬಿತ್ತನೆ ಮಾಡಿದ್ದರು. ಆದರೆ, ಬಳಿಕ ಮಳೆಯೇ ಆಗಿರಲಿಲ್ಲ. ಕತ್ತೆಗಳ ಮದುವೆ, ಪೂಜೆಯೊಂದಿಗೆ ವರುಣ ಆಗಮಿಸಿದ್ದಾನೆ. ರೈತ ಅಂಜಿನಪ್ಪ, ಕೋಟೆಪ್ಪ, ಬಸಪ್ಪ, ಮಲ್ಲೇಶಪ್ಪ, ಬಸವರಾಜಪ್ಪ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು