ಮಂಗಳವಾರ, ಮಾರ್ಚ್ 28, 2023
21 °C

ಜೈಲಿನ ಸಮಯ ಓದಿಗೆ ಮೀಸಲಿಡಿ: ನ್ಯಾಯಾಧೀಶ ಪದ್ಮಪ್ರಸಾದ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಜೈಲಿನ ಹಕ್ಕಿಗಳಾಗಿರುವವರು ಅಲ್ಲಿ ಸಿಗುವಂತಹ ಉಪಯುಕ್ತ ಸಮಯವನ್ನು ಓದಿಗೆ ಮೀಸಲಿಡಬೇಕು. ಸಾಕ್ಷರರಾಗಿ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬಹುದು’ ಎಂದು ಹೊಸಪೇಟೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪದ್ಮಪ್ರಸಾದ್ ಸಲಹೆ ಮಾಡಿದರು.

ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಹೊಸಪೇಟೆ ತಾಲ್ಲೂಕು ಉಪಕಾರಾಗೃಹ ಹಾಗೂ ಹೊಸಪೇಟೆ ತಾಲ್ಲೂಕು ಲೋಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೋ ಒಂದು ಕಾರಣದಿಂದ ತಮ್ಮ ಗಮನಕ್ಕೆ ತಿಳಿದೋ ತಿಳಿಯದೇ ಜೈಲು ಹಕ್ಕಿಗಳಾಗಿರುತ್ತೀರಿ. ಆದರೆ, ಜೈಲು ಸೇರಿದ ನಂತರ ಅಲ್ಲಿ ಪುಸ್ತಕಗಳನ್ನು ಓದಬೇಕು. ಸಾಕ್ಷರರಾಗಬೇಕು. ಜೈಲು ಸೇರಿದಾಗ ಅನೇಕರು ಪುಸ್ತಕಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ ಮಾತನಾಡಿ, ‘ಶಿಕ್ಷಣ ಮನುಷ್ಯನನ್ನು ಬದಲಾವಣೆಯತ್ತ ಕೊಂಡೊಯ್ಯುತ್ತದೆ. ತಾವೆಲ್ಲರೂ ಸಾಕ್ಷರರಾಗುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮತ್ತು ನೆಮ್ಮದಿಯಿಂದ ಜೀವನ ನಡೆಸಬೇಕು’ ಎಂದು ಹೇಳಿದರು.

ಕಾರಾಗೃಹದ ಸೂಪರಿಟೆಂಡೆಂಟ್‌ ಎಂ.ಹೆಚ್.ಕಲಾದಗಿ, ‘ಜೈಲಿನಲ್ಲಿರುವ ಬಂಧಿಗಳ ಸಾಕ್ಷರತಾ ಪ್ರಮಾಣ ಆಧರಿಸಿ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಲೋಕ ಶಿಕ್ಷಣ ಸಂಯೋಜಕರಾದ ಮಧುಸೂದನ್‌ ಗುರುರಾಜ್, ಸಹಾಯಕ ಜೈಲರ್ ಎಸ್.ಎಚ್.ಕಾಳಿ, ಜಯಶ್ರೀ ಪೋಳ್, ಸಂತೋಷ ಸಂತಾಗೋಳ, ಸಹಶಿಕ್ಷಕ ಪ್ರಕಾಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು